ಅಯ್ಯೋ! ಪಾವಗಡ ಜನರನ್ನು ಕಾಪಾಡೋರು ಯಾರೂ ಇಲ್ಲವಾ, ಇಲ್ಲಿನ ಆಸ್ಪತ್ರೆಯಲ್ಲಿ ಗ್ರೂಪ್ ಡಿ ನೌಕರನೇ ಸದ್ಯಕ್ಕೆ ಡಾಕ್ಟರು! ಉಳಿದವರು ಏನಾದರು?
ಅತ್ಯಂತ ಹಿಂದುಳಿದ ಪಾವಗಡ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ! ಗ್ರೂಪ್ ಡಿ ನೌಕರನೇ ಸದ್ಯಕ್ಕೆ ಇಲ್ಲಿ ಡಾಕ್ಟರು!
ಅದು ರಾಜ್ಯದ ಅತಿ ಹಿಂದುಳಿದ ತಾಲೂಕು. ಅಪಘಾತ, ಹೆರಿಗೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಅಲ್ಲಿಯ ಸರ್ಕಾರಿ ಆಸ್ಪತ್ರೆಗೆ ಹೋದರೆ ವಾಪಸ್ ಬರುವುದು ಅನುಮಾನವೇ. ಯಾಕಂದ್ರೆ ಅಲ್ಲಿ ನಿಮಗೆ ಸೂಕ್ತ ಸೌಲಭ್ಯ ಸಿಗಲ್ಲ, ವೈದ್ಯರು ಕೂಡ ಇರಲ್ಲ. ಸದ್ಯ ವೈದ್ಯರು ಇಲ್ಲದ ಕಾರಣ ಡಿ ಗ್ರೂಪ್ ನೌಕರನೇ ವೈದ್ಯನಾಗಿದ್ದಾನೆ. ಎಲ್ಲಿ ಅಂತೀರಾ ಈ ವರದಿ ನೋಡಿ. ಹೌದು.. ಹೀಗೆ ಟ್ರಿಟ್ಮೆಂಟ್ ಕೊಡ್ತಿರೋ ಡಿ ಗ್ರೂಪ್ ನೌಕರ.. ಪ್ರಶ್ನೆ ಮಾಡುತ್ತಿರೋ ಸ್ಥಳೀಯರು… ಈ ದೃಶ್ಯ ಕಂಡು ಬಂದಿದ್ದು ತುಮಕೂರು ಜಿಲ್ಲೆಯ ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ. ಹೌದು..ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ (Pavagada Govt Hospital) ಮತ್ತೆ ವೈದ್ಯರ (Doctor) ಕೊರತೆ ಎದುರಾಗಿದೆ. ಸೂಕ್ತ ವೈದ್ಯರು ಇಲ್ಲದೇ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.. ಕಳೆದ 10-15 ದಿನಗಳಿಂದ ಕೀಲು ಮೂಳೆ ವೈದ್ಯ ನಾಗರಾಜ್ ಎನ್ನುವರು ರಜೆ ಹೋಗಿರುವ ಕಾರಣ ಇಲ್ಲಿರುವ ಡಿ ಗ್ರೂಪ್ ನೌಕರನೇ ಬಂದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ಇನ್ನು ಪಾವಗಡ ತಾಲೂಕು ಕೇಂದ್ರ ತುಮಕೂರು ಜಿಲ್ಲಾ ಕೇಂದ್ರದಿಂದ ಸುಮಾರು 110 ಕಿಲೋ ಮೀಟರ್ ದೂರದಲ್ಲಿದ್ದು, ಇಲ್ಲಿಗೆ ಬರಲು ವೈದ್ಯರು ಹಾಗೂ ಸಿಬ್ಬಂದಿ ಹಿಂದೇಟು ಹಾಕುತ್ತಾರೆ. ಯಾರಪ್ಪ ಅಷ್ಟು ದೂರ ಹೋಗಿ ಕೆಲಸ ಮಾಡುವುದು ಅಂತಾ ತಮ್ಮ ತಲೆಯ ಮೇಲೆ ಕೈ ಹೊತ್ತು ಕುಳಿತುಬಿಡುತ್ತಾರೆ. ಇಲ್ಲಿಗೆ ವರ್ಗವಾಗಿ ಬರುವ ವೈದ್ಯರು ಹೆಚ್ಚು ದಿನ ಇಲ್ಲಿ ಉಳಿಯುವುದಿಲ್ಲ. ಕಾರಣ ಪ್ಲೋರೈಡ್ ನೀರಿನ ಸಮಸ್ಯೆ ಹಾಗೂ ಗಡಿಭಾಗವಾದ ಕಾರಣ ಯಾರು ಬರುವುದಿಲ್ಲ. ಬಂದ ವೈದ್ಯರು ಕೂಡ ವೈಯಕ್ತಿಕ ಕಾರಣ ನೀಡಿ ದೀರ್ಘ ರಜೆ ಮೇಲೆ ಹೋಗುತ್ತಾರೆ. ಸದ್ಯ ಕೀಲು ಮತ್ತು ಮೂಳೆ ವೈದ್ಯರಾದ ಡಾ ನಾಗರಾಜ್ ಕೂಡ ರಜೆ ಹೋಗಿದ್ದು ಇಲ್ಲಿರುವ ಡಿ ಗ್ರೂಪ್ ನೌಕರನೇ ಬಂದ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾನೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರೋಗಿಗಳ ಗತಿಯೇನು ಎಂಬ ಆತಂಕ ಕಾಡತೊಡಗಿದೆ.
ಇನ್ನು ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ತುರ್ತು ಪರಿಸ್ಥಿತಿ, ಅಪಘಾತ ಹಾಗೂ ಹೆರಿಗೆ ಸಂದರ್ಭದಲ್ಲಿ ಕೂಡ ಇಲ್ಲಿ ಸೂಕ್ತ ವೈದ್ಯರು ಇರಲ್ಲ, ಬರುವುದಿಲ್ಲ. ಇಲ್ಲಿರುವ ಸಿಬ್ಬಂದಿ ಕೂಡ ನಿರ್ಲಕ್ಷ್ಯ ವಹಿಸುತ್ತಾರೆಂಬ ಆರೋಪ ನಿರಂತರವಾಗಿ ಕೇಳಿಬರುತ್ತಲೇ ಇದೆ. ಅಲ್ಲದೇ ಮೂಲಭೂತ ಸೌಕರ್ಯಗಳ ಕೊರತೆ ಕೂಡ ಇದೆ. ಔಷಧಿಗಳ ಕೊರತೆ ಜೊತೆಗೆ ಉತ್ತಮ ಚಿಕಿತ್ಸೆ ಕೂಡ ಸಮರ್ಪಕವಾಗಿ ದೊರೆಯುತ್ತಿಲ್ಲ ಎನ್ನುವ ಆರೋಪ ಇದೆ. ಸದ್ಯ ಇತ್ತ ಸರ್ಕಾರ ಗಮನಹರಿಸಿ ಸೂಕ್ತ ವೈದ್ಯರು, ಸಿಬ್ಬಂದಿಗಳನ್ನು ಒದಗಿಸಿ, ಔಷಧಿಗಳ ಕೊರತೆ ಎದುರಾಗದಂತೆ ಪಾವಗಡ ಜನರ ಪ್ರಾಣ ಕಾಪಾಡಲು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನು ಓದಿ: ಹನುಮ ಜನಿಸಿದ ಅಂಜನಾದ್ರಿ ಸ್ಥಳವನ್ನು ಇನ್ನು ಅಭಿವೃದ್ಧಿ ಪಡಿಸುವುವವರು ಯಾರು?
ಒಟ್ಟಾರೆ ಪಾವಗಡದಲ್ಲಿ ಹೇಳೋರಿಲ್ಲ, ಕೇಳೋರಿಲ್ಲದಂತಾಗಿದ್ದು ಬಂದ ರೋಗಿಗಳನ್ನ ಆ ದೇವರೇ ಕಾಪಾಡಬೇಕಿದೆ. ಗ್ರೂಪ್ ಡಿ ನೌಕರ ಚಿಕಿತ್ಸೆ ನೀಡುವ ತಳಮಟ್ಟಕ್ಕೆ ಆಸ್ಪತ್ರೆ ಬಂದಿರುವುದು ನಿಜಕ್ಕೂ ದುರಂತ. ಇನ್ನಾದರೂ ಸರಿಹೋಗುತ್ತಾ ಇಲ್ವಾ ಕಾದುನೋಡಬೇಕಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ