ತುಮಕೂರು, ಅ.02: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ(Renukaswamy murder case) ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಇತರೆ ಆರೋಪಿಗಳು ಸೇರಿಕೊಂಡು ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಆರೋಪ ಕೇಳಿಬಂದಿತ್ತು. ಈ ಪ್ರಕರಣದ ಮೊದಲಿಗೆ ಪೊಲೀಸರ ಬಳಿ ಶರಣಾಗತಿ ಆಗಿದ್ದ ಆರೋಪಿಗಳಾದ ರವಿಶಂಕರ್, ಕಾರ್ತಿಕ್, ಕೇಶವಮೂರ್ತಿ ಹಾಗೂ ನಿಖಿಲ್ರನ್ನ ಜೂನ್ 26 ಕ್ಕೆ ಬೆಂಗಳೂರು ಪರಪ್ಪನ ಅಗ್ರಹಾರದ ಜೈಲಿನಿಂದ ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಸದ್ಯ 15 ನೇ ಆರೋಪಿಯಾದ ಕಾರ್ತಿಕ್, 16 ಆರೋಪಿ ಕೇಶವಮೂರ್ತಿ, 17 ಆರೋಪಿಯಾದ ನಿಖಿಲ್ಗೆ ಎರಡು ಲಕ್ಷ ಬಾಂಡ್ ಹಾಗೂ ತಲಾ ಇಬ್ಬರ ಶ್ಯೂರಿಟಿ ಮೇರೆಗೆ ಜಾಮೀನು ಮಂಜೂರು ಆಗಿದೆ. ಸತತ ಹತ್ತು ದಿನಗಳ ಬಳಿಕ ಬಿಡುಗಡೆ ಆಗಿದ್ದು, ಎ 16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ ಹಾಗೂ ಇನ್ನಿಬ್ಬರಿಗೆ 57 ನೇ ಸಿಸಿಹೆಚ್ ಕೋರ್ಟ್ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ:ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.4ಕ್ಕೆ ಮುಂದೂಡಿಕೆ; ದಾಸನಿಗೆ ಮತ್ತೆ ನಿರಾಸೆ
ಜಾಮೀನು ಮಂಜೂರು ಆದರೂ ಹತ್ತು ದಿನಗಳಿಂದ ಬಿಡುಗಡೆ ಆಗಿರಲಿಲ್ಲ. ಸದ್ಯ ಸಂಬಂಧಿಕರು ಜಾಮೀನು ಶ್ಯೂರಿಟಿ ನೀಡಿ ಬಿಡುಗಡೆ ಮಾಡಿಸಿದ್ದಾರೆ. ತಡರಾತ್ರಿಯೇ ಮೇಲ್ ಮೂಲಕ ಜಾಮೀನು ಆದೇಶ ಬಂದರೂ ಸಮಯ ಮೀರಿದ ಕಾರಣ ಇಂದು ಬೆಳಿಗ್ಗೆ 10 ಗಂಟೆಗೆ ತುಮಕೂರು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಹೊರ ಬಂದ ಮೂವರು ಪ್ರತಿಕ್ರಿಯೆ ನೀಡಲು ನಕಾರ ವ್ಯಕ್ತಪಡಿಸಿದ್ದು, ನಮಗೆ ಏನು ಗೊತ್ತಿಲ್ಲ ಎಲ್ಲವೂ ತನಿಖಾಧಿಕಾರಿಗಳ ಮುಂದೆ ವಿವರವಾಗಿ ಹೇಳಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಮತ್ತೋರ್ವ ಆರೋಪಿ ರವಿಶಂಕರ್ ತುಮಕೂರು ಜೈಲಿನಲ್ಲಿಯೇ ಉಳಿದಿದ್ದು, ಮೂವರು ಬಿಡುಗಡೆ ಆಗಿದ್ದಾರೆ. ಹೊರಬಂದ ಬಳಿಕ ನುಣುಚಿಕೊಳ್ತಿದ್ದ ಮೂವರು ತನ್ನ ಸ್ನೇಹಿತರು ಇನೋವಾ ಕಾರಿನಲ್ಲಿ ಬಂದ ತಕ್ಷಣ ಹತ್ತಿ ಹೊರಟು ಹೋಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ