ತುಮಕೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರ ಜೊತೆ ಸಭೆ ನಡೆಸಿದ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ರಾಜ್ಯ ಉಳಿಸೋಕೆ ಕಾಂಗ್ರೆಸ್ ಪಕ್ಷವನ್ನ ತೆಗೆಯಬೇಕು ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಬಿಜೆಪಿ ಬದಲಾಗಿ ಕಾಂಗ್ರೆಸನ್ನೇ ತೆಗಿಬೇಕು ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಬಾಯ್ತಪಿ ಮಾತನಾಡಿದ ಸಿದ್ದರಾಮಯ್ಯ ಎಸ್.ಆರ್.ಪಾಟೀಲ್ ಹೇಳಿದ ಬಳಿಕ ಸರಿಪಡಿಸಿಕೊಂಡು ಬಿಜೆಪಿ ಎಂದಿದ್ದಾರೆ.
ನಂತರ ಮಾತನಾಡಿದ ವಿಪಕ್ಷ ನಾಯಕ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆ ಯಾವಾಗ ಅಂತಾ ಆಯೋಗ ತೀರ್ಮಾನಿಸುತ್ತದೆ. ಸುರ್ಜೇವಾಲಾ ಅವರು ಪ್ರತಿಯೊಬ್ಬರನ್ನ ಭೇಟಿಯಾಗಿ ಅಭಿಪ್ರಾಯ ಕೇಳುತ್ತಿದ್ದಾರೆ. ಜಿಲ್ಲೆಯ ಪರಿಸ್ಥಿತಿ ಬಗ್ಗೆ, ಚುನಾವಣೆಯ ತಯಾರಿ ಬಗ್ಗೆ, ಪಕ್ಷ ಸಕ್ರಿಯಗೊಳಿಸಲು ಏನ್ ಮಾಡಬೇಕು, ಹೊಂದಾಣಿಕೆ ಇಲ್ಲಾ ಅಂದರೆ ಏನ್ ಮಾಡಬೇಕು? ಹೀಗೆ ಎಲ್ಲವನ್ನೂ ಕೇಳಿ ಎಲ್ಲರ ಅಭಿಪ್ರಾಯಗಳನ್ನ ಸಂಗ್ರಹಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕದಲ್ಲಿ ಭ್ರಷ್ಟ ಸರ್ಕಾರ ಇದೆ. ಯಡಿಯೂರಪ್ಪ ಬದಲಾವಣೆ ಆಗುತ್ತಿದ್ದಾರೆ. ಯಡಿಯೂರಪ್ಪ ಬಳಿಕ ಇನ್ನೊಬ್ಬ ಭ್ರಷ್ಟ ಸಿಎಂ ಬರುತ್ತಾರೆ. ಬಿಜೆಪಿ ಪಕ್ಷವೇ ಭ್ರಷ್ಟ ಪಕ್ಷ. ಐಎಎಸ್, ಐಪಿಎಸ್, ಐಆರ್ಎಸ್ಗಳಿಂದ ಲಂಚ ತೆಗೆದುಕೊಂಡು ಪೋಸ್ಟಿಂಗ್ ಕೊಡ್ತಾರೆ. ನಾನು ಇಂಥಹ ಭ್ರಷ್ಟ ಸರ್ಕಾರವನ್ನ ನೋಡೇ ಇಲ್ಲ. ಅಭಿವೃದ್ದಿ ಕೆಲಸಗಳಿಗೆ ದುಡ್ಡೇ ಇಲ್ಲ. ಮಾತು ಎತ್ತಿದ್ರೆ ಕೊರೊನಾ ಅಂತಾರೆ. ರಾಜ್ಯ ಉಳಿಸೋಕೆ ಬಿಜೆಪಿ ಪಕ್ಷವನ್ನ ತೆಗಿಯಬೇಕು ಅಂತ ಸಿದ್ದರಾಮಯ್ಯ ಹೇಳಿದರು.
ಸಂಕಲ್ಪ ಯಾತ್ರೆ ಆರಂಭಿಸಲು ಚಿಂತಿಸಲಾಗಿದೆ. ಮುಂದಿನ ಚುನಾವಣೆಗೆ ಈಗಿಂದಲೇ ತಯಾರಿ ನಡೆಸುತಿದ್ದೇವೆ. ಇಡೀ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರದ ಮತ್ತು ಬಿಜೆಪಿ ಸರ್ಕಾರದ ಆಡಳಿತ ಹೋಲಿಕೆ ಮಾಡುತಿದ್ದಾರೆ. ಉತ್ತಮ ಆಡಳಿತ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಸಿಎಂ ಬದಲಾವಣೆ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ವೇಳೆ ಮಾತನಾಡಿದ ರಣದೀಪ್ ಸುರ್ಜೇವಾಲಾ, ಸಂಘಟನೆಯ ತಿಳುವಳಿಕೆ, ಶಕ್ತಿಯುತಗೊಳಿಸುವುದು ಮತ್ತು ನಾಯಕರ ಅಭಿಪ್ರಾಯ ಸಂಗ್ರಹ. ಇದು ಇಂದಿನ ಸಭೆಯ ಉದ್ದೇಶ. ಭೂತ್ ಕಮಿಟಿ, ಬ್ಲಾಕ್ ಕಮಿಟಿಯಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಒಬಿಸಿ, ಎಸ್ಸಿ ಎಸ್ಟಿ, ಅಲ್ಪಸಂಖ್ಯಾತ ಘಟಕಗಳಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು. ಜೊತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧಿಸಿದಂತೆ ಚರ್ಚೆ ಮಾಡಲಾಗಿದೆ. ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಕೈ ಹಿಡಿಯುತ್ತಾರೆ. ಕರ್ನಾಟಕದ ಬಿಜೆಪಿ ಸರ್ಕಾರ ಜನರ ಆಯ್ಕೆಯಿಂದ ಆಗಿದ್ದಲ್ಲ. ಬಿಜೆಪಿ ಸರ್ಕಾರ ಹೈಜಾಕ್ ಸರ್ಕಾರ, ಪ್ಯಾರಾಚುಟ್ ಸರ್ಕಾರ. ಇದು ಭ್ರಷ್ಟಾಚಾರದಿಂದ ಕೂಡಿದ ಸರ್ಕಾರ. ಈಗ ನಾಯಕತ್ವ ಬದಲಾವಣೆ ನಾಟಕ ಶುರುವಾಗಿದೆ. ಏನೂ ಅಭಿವೃದ್ಧಿ ಮಾಡುತ್ತಿಲ್ಲ ಅಂತ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ
ಎಂ.ಬಿ.ಪಾಟೀಲ್, ಶಿವಶಂಕರಪ್ಪ ಜತೆ ನಾನು ಮಾತಾಡುತ್ತೇನೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ
(Siddaramaiah says Congress should be destroyed in Karnataka by mis tongue in Tumakur Press meet)
Published On - 2:57 pm, Sat, 24 July 21