ಆ್ಯಪ್​ಗಳನ್ನ ನಂಬಿ ಹಣ ಹಾಕೋರು ಈ ಸ್ಟೋರಿ ಮಿಸ್ ಮಾಡದೇ ಓದಿ

ಎಲ್ಲಿವರೆಗೂ ಮೋಸ ಹೋಗುವವರು ಇರುತ್ತಾರೋ, ಅಲ್ಲಿವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವುದಕ್ಕೆ ಈ ಸ್ಟೋರಿ ಸಾಕ್ಷಿ. ಹೌದು, ಹಾಕಿದ ದುಡ್ಡಿಗೆ ಡಬಲ್ ದುಡ್ಡು ಕೊಡುತ್ತಾರೆ ಎನ್ನುವ ಅತೀ ಆಸೆಗೆ ಬಿದ್ದು, ಇಡೀ ಊರಿನವರೇ ಕೋಟಿಗಟ್ಟಲೇ ಹಣ ಕಳೆದುಕೊಂಡಿದ್ದಾರೆ. ಆ್ಯಪ್​ಗಳನ್ನ ನಂಬಿ ಹಣ ಹಾಕೋರು ಈ ಸ್ಟೋರಿಯನ್ನ ಮಿಸ್ ಮಾಡದೇ ಓದಿ.

ಆ್ಯಪ್​ಗಳನ್ನ ನಂಬಿ ಹಣ ಹಾಕೋರು ಈ ಸ್ಟೋರಿ ಮಿಸ್ ಮಾಡದೇ ಓದಿ
ಪ್ರಾತಿನಿಧಿಕ ಚಿತ್ರ
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 26, 2024 | 9:17 PM

ತುಮಕೂರು‌, ಜು.26: ಜಿಲ್ಲೆಯಲ್ಲಿ ಆನ್​ಲೈನ್ ಟ್ರೇಡಿಂಗ್ ಮೂಲಕ ಕೋಟ್ಯಾಂತರ ರೂಪಾಯಿಯ ಮಹಾದೋಖಾ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗುಬ್ಬಿ ತಾಲ್ಲೂಕಿನ ಕಲ್ಲೂರು ಸೇರಿ ಅಕ್ಕಪಕ್ಕದ ಗ್ರಾಮಗಳ ನೂರಾರು ಮಂದಿ ಈ ಮಹಾವಂಚನೆಯಿಂದ ಇದೀಗ ಕಂಗಾಲಾಗಿದ್ದಾರೆ. ‘DAAI’ ಎಂಬ ಆನ್​ಲೈನ್ ಆ್ಯಪ್ ಹೆಸರಿನಲ್ಲಿ ಸುಮಾರು 5 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆಯಾಗಿರುವ ಬಗ್ಗೆ ಸಿಎಸ್​ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಯಾವುದೇ ಅಧಿಕೃತ ಮಾಹಿತಿ ಇಲ್ಲದ DAAI ಆನ್ ಲೈನ್ ಆ್ಯಪ್​ನ ಮೋಡಿಗೆ ಮರುಳಾದ ಯುವಕರು, ಮಹಿಳೆಯರು, ಪುರುಷರು, 7000 ದಿಂದ 5 ಲಕ್ಷದವರೆಗೂ ಹಣ ಹೂಡಿ ಇದೀಗ ಕಂಗಲಾಗಿದ್ದಾರೆ. ಆರಂಭದಲ್ಲಿ ಒಂದೆರೆಡು ತಿಂಗಳು ಅಸಲಿ ಹಣಕ್ಕೆ ಬಡ್ಡಿ ಹಾಕಿ ಬಳಿಕ ಗ್ರಾಮದಲ್ಲಿ ಕಾರ್ಯಕ್ರಮ ನಡೆಸಿ ಮತ್ತಷ್ಟು ಹಣ ಹಾಕುವಂತೆ ಆಸೆ ತೋರಿಸಿ ಇದೀಗ ಏಕಾಏಕಿ ಆ್ಯಪ್ ಬಂದ್ ಮಾಡುವ ಮೂಲಕ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ.

ಇದನ್ನೂ ಓದಿ:ಆ್ಯಪ್​​ಗಳ​​​ ಮೂಲಕ ಹೂಡಿಕೆ ಹೆಸರಿನಲ್ಲಿ ವಂಚನೆ ಪ್ರಕರಣ: ಕರ್ನಾಟಕ ಸೇರಿ 30 ಕಡೆಗಳಲ್ಲಿ ಸಿಬಿಐ ದಾಳಿ

ಮೊದಲು DAAI ಆ್ಯಪ್​ನ ಇನ್​ಸ್ಟಾಲ್​ ಮಾಡಿಸಿ ಹಣ ವರ್ಗಾಯಿಸಲು ಆಪ್ಷನ್​ ನೀಡಿ, ಹಣವನ್ನ ಆನ್ಲೈನ್ ಟ್ರಾನ್ಸಾಕ್ಷನ್ ಮೂಲಕ ವರ್ಗಾಯಿಸಿಕೊಂಡಿದ್ದಾರೆ. ಆ್ಯಪ್​ನಲ್ಲಿ 7 ಸಾವಿರದಿಂದ 5 ಲಕ್ಷದವರೆಗೂ ಹಣ ಹಾಕುವ ಆಪ್ಷನ್ ನೀಡಲಾಗಿದೆ‌. ಮೊದಮೊದಲು ಜನರು ಹಾಕಿದ ಹಣಕ್ಕೆ ದಿನಕ್ಕೆ 16% ಬಡ್ಡಿ ನೀಡಿದ್ದಾರೆ. ಆ್ಯಪ್​ನಲ್ಲಿ ಹೂಡಿಕೆ ಮಾಡಿದ ಜನರ ಹಣವನ್ನ ತಮ್ಮ ಖಾತೆಗೆ ವಾಪಸ್ ವರ್ಗಾಯಿಸಿಕೊಳ್ಳಲು 25 ದಿನಗಳ ವ್ಯಾಲಿಡಿಟಿ ನೀಡಲಾಗಿದೆ. 25 ದಿ‌ನಗಳ ವರೆಗೂ ನೀಡುತ್ತಿದ್ದ ಬಡ್ಡಿಯನ್ನ ಕೂಡಲೇ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬಹುದಿತ್ತು. ಇದೇ ಬಡ್ಡಿಯ ಆಸೆಗೆ ಬಿದ್ದ ಜನರು ನಮ್ಮ ಹಣ ಮತ್ತಷ್ಟು ಹೆಚ್ಚಾಗಲಿ ಎಂದು ಆ್ಯಪ್​ನಲ್ಲೇ ಹಣ ಬಿಟ್ಟು ಇದೀಗ ಅಸಲು ಇಲ್ಲ, ಬಡ್ಡಿಯೂ ಇಲ್ಲ ಎನ್ನುವಂತಾಗಿದೆ.

ರೈತರು, ವ್ಯವಸಾಯ ಮಾಡುವವರು, ಕೂಲಿ ಕಾರ್ಮಿಕರು, ಯುವಕರು, ಮಹಿಳೆಯರು ಹಣದಾಸೆಗೆ ಬಿದ್ದು ಮೋಸ ಹೋಗಿದ್ದಾರೆ‌. ಸದ್ಯ ಒಂದು ವಾರದಿಂದ ಆ್ಯಪ್​ನ ಸಂಪೂರ್ಣ ವಹಿವಾಟು ನಿಂತಿದ್ದು, ಯಾವುದೇ ವಹಿವಾಟು ನಡೆಯದಂತೆ ಲಾಕ್ ಆಗಿದೆ. ತುಮಕೂರು, ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಈ ಆ್ಯಪ್ ಆಕ್ಟೀವ್ ಆಗಿರೋ ಬಗ್ಗೆ ಮಾಹಿತಿ ದೊರೆತಿದೆ.

ಇಡೀ ಕಲ್ಲೂರು ಗ್ರಾಮ ರಾಜ್ಯದಲ್ಲಿ ರೇಷ್ಮೆ ಸೀರೆಗೆ ಹೆಸರುವಾಸಿಯಾಗಿದೆ. ಅನೇಕರು ರೇಷ್ಮೆ ಸೀರೆ ಮಾರಿ ಬಂದ ಹಣವನ್ನೂ ಈ ಆ್ಯಪ್​ಗೆ ಹಾಕಿ ಕಳೆದುಕೊಂಡಿದ್ದಾರೆ. ಒಬ್ಬೊಬ್ಬರು 7 ಸಾವಿರದಿಂದ ಲಕ್ಷಗಟ್ಟಲೇ ಹಣವನ್ನ ಹಾಕಿ‌ ದಿಕ್ಕು ತೋಚದಂತಾಗಿದ್ದಾರೆ. ಇದೀಗ ತಂಡೋಪತಂಡವಾಗಿ ಬಂದು ಸಿಎಸ್ ಪುರ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಾರೆ. ಅತೀ ಆಸೆಗೆ ಬಿದ್ದ ಜನರು, ಹಾಕಿದ ಅಸಲು ಇಲ್ಲದೇ, ಬಡ್ಡಿಯೂ ಇಲ್ಲದೇ ದಿಕ್ಕು ಕಾಣದಂತಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:12 pm, Fri, 26 July 24