ತುಮಕೂರು: ನಾಡಿನ ಪ್ರಮುಖ ಲಿಂಗಾಯತ ಮಠಗಳಲ್ಲಿ ಒಂದಾದ, ದೇಶಕ್ಕೆ ತ್ರಿವಿಧ ದಾಸೋಹ ನೀಡುತ್ತಿರುವ ಪ್ರಸಿದ್ಧ ತುಮಕೂರಿನ (Tumakuru) ಸಿದ್ಧಗಂಗಾ ಮಠದ (Siddaganga Mutt) ಉತ್ತರಾಧಿಕಾರಿ ಪಟ್ಟಾಭಿಷೇಕ ಕಾರ್ಯಕ್ರಮ ಇಂದು (ಏ.23) ಸರಳವಾಗಿ ನಡೆಯುತ್ತಿದೆ. ಶ್ರೀ ಮಠದ ಉತ್ತರಾಧಿಕಾರಿ ಮನೋಜ್ ಕುಮಾರ್ (Manoj Kumar) ಅವರ ಪಟ್ಟಾಭಿಷೇಕವನ್ನು ಸಿದ್ದಗಂಗಾ ಹಳೆಯ ಮಠದ ಆವರಣದಲ್ಲಿ ನಡೆಸಲಾಗುತ್ತಿದ್ದು, ಕೆಲವರಿಗೆ ಮಾತ್ರ ಆಹ್ವಾನವಿದೆ. ಶಿವಕುಮಾರ ಶ್ರೀಗಳ (Shivakumara Shree) ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗುತ್ತವೆ.
ಜಗಜ್ಯೋತಿ ಬಸವೇಶ್ವರರ ಜಯಂತಿ ದಿನದಂದು ಶ್ರೀಮಠಕ್ಕೆ ನೇಮಿಸಲಾಗಿರುವ ಉತ್ತರಾಧಿಕಾರಿ ಮನೋಜ ಕುಮಾರ್ ಅವರ ಪಟ್ಟಾಭಿಷೇಕ ಸಮಾರಂಭ ಸರಳವಾಗಿ ನಡೆಯಲಿದೆ. ಇದೇ ವೇಳೆ, ಶಾಖಾ ಮಠವಾದ ಬಂಡೇಮಠಕ್ಕೆ ಹರ್ಷ ಕೆ.ಎಂ, ಬೆಂಗಳೂರು ಗ್ರಾಮಂರದ ವಿಜಯಪುರದ ಬಸವಕಲ್ಯಾಣ ಮಠಕ್ಕೆ ಗೌರೀಶ್ ಕುಮಾರ್ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದ್ದು, ಮೂವರಿಗೂ ಇಂದು ಪಟ್ಟಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.
ಬೆಳಗ್ಗೆ 5 ಗಂಟೆಯಿಂದ ಶ್ರೀಮಠದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿ 6:30ಕ್ಕೆ ದೀಕ್ಷಾ ಸಂಸ್ಕಾರ ಮುಗಿಯುತ್ತದೆ. ನಂತರ ಬೆಳಿಗ್ಗೆ 7:30ಕ್ಕೆ ಪಟ್ಟಾಭಿಷೇಕ ಸರಳವಾಗಿ ಆರಂಭವಾಗುತ್ತದೆ. ಈ ಕಾರ್ಯಕ್ರಮದಲ್ಲಿ ಸತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಹಾಗೂ ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವಮೂರ್ತಿ ಮಹಾಸ್ವಾಮಿಗಳು ಸೇರಿ ಅನೇಕ ಮಠಾಧೀಶರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಸಾರ್ವಜನಿಕರು ಹಾಗೂ ಹಿತೈಷಿಗಳು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಸರಳವಾಗಿ ಈ ಸಮಾರಂಭ ಆಯೋಜನೆ ಮಾಡಲಾಗುತ್ತಿದ್ದು, ಮಠದ ಭಕ್ತಾದಿಗಳು ಸಹಕಾರ ನೀಡಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿಯಿಂದ ಮನವಿ ಮಾಡಿದೆ.
ನಮ್ಮ ದೇಶದಲ್ಲಿ ಧಾರ್ಮಿಕ ಕೇಂದ್ರಗಳಿಗೆ ಭಾರಿ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತದೆ. ದೇಶದ ಹಲವು ಧಾರ್ಮಿಕ ಮಠಗಳು, ಮಂದಿರಗಳು ಹಾಗೂ ಸಂಸ್ಥೆಗಳು ಕೂಡ ತಮ್ಮ ಸೇವೆಯನ್ನು ನಿರಂತರವಾಗಿ ಸಲ್ಲಿಸುತ್ತಾ ಬಂದಿವೆ. ಹೀಗೆ ಸ್ವಾತಂತ್ರ್ಯದ ಪೂರ್ವದಿಂದಲೂ ಊಟ, ವಸತಿ ಹಾಗೂ ಶಿಕ್ಷಣ ಸೇರಿ ತ್ರಿವಿಧ ದಾಸೋಹ ನೆರವೇರಿಸುತ್ತಾ ಬಂದಿರುವ ತುಮಕೂರಿನ ಸಿದ್ದಗಂಗಾ ಮಠ ದೇಶದಲ್ಲಿಯೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈಗ ಸುಮಾರು 10 ಸಾವಿರ ವಿದ್ಯಾರ್ಥಿಗಳು ಮಠದಲ್ಲಿ ಅಭ್ಯಾಸ ಮಾಡತ್ತಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಉತ್ತರಾಧಿಕಾರಿಗಳ ನೂತನ ಅಭಿದಾನವನ್ನು ವಿವಿಧ ಮಠಾಧ್ಯಕ್ಷರು ಹಾಗೂ ಮಠದ ಪ್ರಮುಖರು ಘೋಷಣೆ ಮಾಡಿದ್ದಾರೆ. ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗಿ ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ( ಪೂರ್ವಾಶ್ರಮದ ಹೆಸರು ಮನೋಜ್ ಕುಮಾರ್), ಬಂಡೇ ಮಠದ ಉತ್ತರಾಧಿಕಾರಿಯಾಗಿ ಮಹಾಲಿಂಗ ಸ್ವಾಮೀಜಿ ( ಪೂರ್ವಾಶ್ರಮದ ಹೆಸರು ಹರ್ಷ) ದೇವನಹಳ್ಳಿಯ ಬಸವ ಕಲ್ಯಾಣ ಮಠದ ಉತ್ತರಾಧಿಕಾರಿಯಾಗಿ ಸದಾಶಿವ ಸ್ವಾಮೀಜಿ ( ಪೂರ್ವಾಶ್ರಮದ ಹೆಸರು ಗೌರಿಶ್ ಕುಮಾರ್).
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:02 am, Sun, 23 April 23