ತುಮಕೂರು: ಅದೊಂದು ಪುರಾಣ ಪ್ರಸಿದ್ದ ದೇವಾಲಯ (Temple). ಅಪಾರ ಭಕ್ತರ ಸಂಕಷ್ಟಗಳನ್ನ ದೂರವಾಗಿಸುವ ಶಕ್ತಿಯುತ ಭಜರಂಗಿಗೇ ಇದೀಗ ಸಂಕಷ್ಟ ಬಂದೊದಗಿದೆ. ಇಲ್ಲಿನ ಅರ್ಚಕರ ನಡುವಿನ ಗಲಾಟೆ ಭಕ್ತರ ಕಾಪಾಡೋ ದೊಡ್ಡಕಾಯಪ್ಪನಿಗೆ ದಿಗ್ಬಂಧನ ವಿಧಿಸಿದೆ. ದೇವರ ದರ್ಶನವಿಲ್ಲದೇ ಭಕ್ತರು ವಾಪಸ್ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೀಗ ಹಾಕಿ ಮುಚ್ಚಿರುವ ದೇವಾಲಯದ ಬಾಗಿಲು.. ದೇವರ ದರ್ಶನ ಭಾಗ್ಯವಿಲ್ಲದೇ ವಾಪಸ್ಸಾಗ್ತಿರೋ ಅಪಾರ ಭಕ್ತರು.. ದೇವಾಲಯಕ್ಕೆ ಬಂದೊದಗಿರೋ ಸಂಕಷ್ಟದಿಂದ ಕಂಗೆಟ್ಟಿರೋ ಗ್ರಾಮಸ್ಥರು.. ಅಷ್ಟಕ್ಕೂ ಹೀಗೆ ದೇವಾಲಯಕ್ಕೆ ಬೀಗ ಜಡಿದಿರೋದು ಮತ್ಯಾರೋ ಅಲ್ಲ.. ಇದೇ ದೇವಾಲಯದ ಅರ್ಚಕರು. ಹೌದು, ತುಮಕೂರು (Tumakur) ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಪುರಾಣ ಪ್ರಸಿದ್ದ ದೊಡ್ಡಕಾಯಪ್ಪ ಆಂಜನೇಯ ದೇವಾಲಯದ ಅರ್ಚಕರ ನೇಮಕ ವಿಚಾರದಲ್ಲಿ ಮುಜರಾಯಿ ಇಲಾಖೆ (Muzarai Department), ಸೇವಾ ಸಮಿತಿ, ಸ್ಥಳೀಯರು ಮತ್ತು ಪ್ರಸ್ತುತ ಅರ್ಚಕರ (Archak) ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿ ಗರ್ಭಗುಡಿ ಮತ್ತು ದೇವಾಲಯಕ್ಕೆ ಬೀಗ ಹಾಕಲಾಗಿದೆ.
ಪುಣ್ಯಕ್ಷೇತ್ರಕ್ಕೆ ಪ್ರತಿನಿತ್ಯ ಆಗಮಿಸುವ ಸಾವಿರಾರು ಭಕ್ತರಿಗೆ ದೊಡ್ಡಕಾಯಪ್ಪನ ದರ್ಶನ ಸಿಗದಂತಾಗಿದ್ದು, ಭಕ್ತರು ನಿರಾಸೆಯಿಂದ ಹಿಂದಿರುಗುತ್ತಿದ್ದಾರೆ. ಮುಜರಾಯಿ ಇಲಾಖೆ ಅಧೀನದಲ್ಲಿರೋ ಕುರಂಕೋಟೆ (Kuramkote) ಗ್ರಾಮದ ಸುಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ದೊಡ್ಡಕಾಯಪ್ಪ ಸ್ವಾಮಿ ದೇವಾಲಯದಲ್ಲಿ ಇತಿಹಾಸದಲ್ಲಿ ಇದೇ ಮೊದಲ ಸಲ ಈ ರೀತಿಯ ದುರ್ಘಟನೆ ನಡೆದಿದೆ. ಏಪ್ರಿಲ್ 2ರ ಭಾನುವಾರ ಮಧ್ಯಾಹ್ನ ದೊಡ್ಡಕಾಯಪ್ಪ ಸ್ವಾಮಿಯ ಪೂಜಾ ಕೈಂಕರ್ಯ ನಡೆಯುತ್ತಿರುವಾಗಲೇ ಸ್ಥಳೀಯರು, ಸೇವಾ ಸಮಿತಿ ಮತ್ತು ಆರ್ಚಕರ ನಡುವೆ ಜಗಳವಾಗಿ ಅರ್ಚಕ ಶ್ರೀನಿವಾಸಮೂರ್ತಿ ದೇವಾಲಯಕ್ಕೆ ಬೀಗ ಹಾಕಿದ್ದಾರೆ ಎನ್ನಲಾಗಿದೆ. ಬಳಿಕ ನಾಪತ್ತೆಯಾಗಿರೋ ಅರ್ಚಕ ಶ್ರೀನಿವಾಸಮೂರ್ತಿ ಈವರೆಗೂ ಪತ್ತೆಯಾಗಿಲ್ಲ. ಮೂರು ದಿನಗಳಿಂದ ದೇವಾಲಯಕ್ಕೆ ಹಾಕಿರೋ ಬೀಗ ಹಾಗೇ ಇದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಗ್ರಾಮದ ಮುಖಂಡ ಸಿದ್ದರಾಜು ಹೇಳಿದ್ದಾರೆ.
Also Read:
ಕುರಂಕೋಟೆ ಆಂಜನೇಯನಿಗೆ ಕರ್ನಾಟಕ ರಾಜ್ಯದ ನಾನಾ ಭಾಗಗಳಿಂದ ಪ್ರತಿನಿತ್ಯ ಭಕ್ತರು ದರ್ಶನಕ್ಕೆ ಆಗಮಿಸ್ತಾರೆ. ದೇವಾಲಯದಲ್ಲೇ ಉಳಿದುಕೊಂಡು ಪ್ರತಿ ಮುಂಜಾನೆಯೇ ಪೂಜೆ ಸಲ್ಲಿಸೋ ಮೂಲಕ ಭಕ್ತರು ವಿವಿಧ ರೀತಿಯ ಹರಕೆಗಳನ್ನ ತೀರಿಸ್ತಾರೆ. ಆದರೆ ಇದೀಗ ಎಲ್ಲದಕ್ಕೂ ಅಡ್ಡಿಯುಂಟಾಗಿದೆ. ಅರ್ಚಕರ ನಡುವಿನ ಒಳ ಜಗಳದಿಂದ ಇಷ್ಟೆಲ್ಲಾ ರಾದ್ದಾಂತವಾಗಿದೆ ಎನ್ನಲಾಗಿದೆ. ದೊಡ್ಡಕಾಯಪ್ಪ ದೇವಾಲಯಕ್ಕೆ ಇತಿಹಾಸ ಪೂರ್ವದಿಂದಲೂ ಕುರಂಕೋಟೆ ಗ್ರಾಮದ ವೆಂಕಟೇಶ್, ಶ್ರೀನಿವಾಸಮೂರ್ತಿ, ಪ್ರದೀಪ್ ಎಂಬ ಅರ್ಚಕರು ವರ್ಷಕ್ಕೆ ಒಬ್ಬರಂತೆ ನೇಮಕ ಮಾಡಲಾಗಿದೆ. ಪ್ರಸ್ತುತ ಅರ್ಚಕ ಶ್ರೀನಿವಾಸಮೂರ್ತಿ ತಮ್ಮ ಒಂದು ವರ್ಷದ ಅವಧಿ ಮುಗಿಸಿದ್ದು, ಮತ್ತೋರ್ವ ಅರ್ಚಕ ವೆಂಕಟೇಶ್ ಗೆ ಪೂಜೆ ಕೈಂಕರ್ಯ ಹಸ್ತಾಂತರಿಸಬೇಕಿತ್ತು. ಆದರೆ ಇದಕ್ಕೆ ಒಪ್ಪದೇ ದೇವಾಲಯ ಮತ್ತು ಗರ್ಭಗುಡಿಗೆ ಏಕಾಏಕಿ ಬೀಗ ಹಾಕಿ ಕಾಣೆಯಾಗಿದ್ದಾರೆ.
ಬೀಗ ಜಡಿದ ಅರ್ಚಕ ಶ್ರೀನಿವಾಸಮೂರ್ತಿ ವಿರುದ್ದ ಭಕ್ತರು ಹಿಡಿಶಾಪ ಹಾಕುತ್ತಿದ್ದಾರೆ. ದೊಡ್ಡಕಾಯಪ್ಪ ಸ್ವಾಮಿ ದೇವಾಲಯದ ದರ್ಶನ ಪಡೆಯುತ್ತಿದ್ದ ಸಾವಿರಾರು ಭಕ್ತರನ್ನು ಹೊರಗಡೆ ಕಳುಹಿಸಿ ಗರ್ಭಗುಡಿ ಮತ್ತು ದೇವಾಲಯಕ್ಕೆ ಬಾಗಿಲು ಹಾಕಿರುವ ಮಾಹಿತಿ ಮುಜರಾಯಿ ಇಲಾಖೆಗೆ ಲಭ್ಯವಿದ್ರು ಮೌನಕ್ಕೆ ಶರಣಾಗಿ ನಿರ್ಲಕ್ಷ್ಯ ವಹಿಸಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬರ್ತಿದೆ. ಸದ್ಯ ಕುರಂಕೋಟೆ ದೊಡ್ಡಕಾಯಪ್ಪ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಗ್ರಾಮಸ್ಥರು ಮುಜರಾಯಿ ಇಲಾಖೆ ಮತ್ತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂಬಿ ಬಂದ ಭಕ್ತರನ್ನ ಕಾಯೋ ಭಜರಂಗಿಯನ್ನೇ ಕೂಡಿಹಾಕಿದ್ದು, ಅರ್ಚಕರ ಒಳಜಗಳ ಎಲ್ಲಿಗೆ ಮುಟ್ಟುತ್ತೆ ಕಾದುನೋಡ್ಬೇಕಿದೆ.
ವರದಿ: ಮಹೇಶ್, ಟಿವಿ 9, ತುಮಕೂರು