ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಮುದ್ದಲಿಂಗಯ್ಯನದೊಡ್ಡಿಯಲ್ಲಿ ತಡರಾತ್ರಿ ಶಿವಣ್ಣ ಎಂಬುವರ ಮನೆಗೆ ಚಿರತೆ ನುಗ್ಗಿದೆ. ಅದನ್ನು ಕಂಡು ಗಾಬರಿಗೊಂಡ ಕುಟುಂಬದವರು ಚಿರತೆಯನ್ನು ಮನೆಯಲ್ಲಿ ಕೂಡಿಹಾಕಿ ಹೊರಬಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನ ಸೆರೆ ಹಿಡಿದಿದ್ದಾರೆ. ಚಿರತೆ ಸೆರೆಯಿಂದ ಮುದ್ದಲಿಂಗಯ್ಯನದೊಡ್ಡಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಈ ಘಟನೆ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು: ಯಾದವಗಿರಿ ಆಕಾಶವಾಣಿ ಬಳಿ ಕಾಣಿಸಿಕೊಂಡ ಚಿರತೆ
ಮೈಸೂರಿನ ಸಿಎಫ್‌ಟಿಆರ್‌ಐ ಬಳಿಯಿರುವ ಆಕಾಶವಾಣಿ ಬಳಿ ಚಿರತೆ ಕಾಣಿಸಿಕೊಂಡಿದೆ. ಈ ಮೂಲಕ ಜನರಲ್ಲಿ ಆತಂಕ ಮೂಡಿದೆ. ಸ್ಥಳಕ್ಕೆ ಮೈಸೂರು ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದು, ಅರಣ್ಯಾಧಿಕಾರಿಗಳು ಚಿರತೆ ಸೆರೆಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇನ್ನು ಕಳೆದ ಐದು ದಿನಗಳ ಹಿಂದೆ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ(CFTRI)ಶಾಲಾ ಆವರಣದಲ್ಲಿ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗೆ ಬಂದಿದ್ದ ಮಕ್ಕಳನ್ನು ಶಿಕ್ಷಕರು ವಾಪಾಸ್ ಮನೆಗೆ ಕಳುಹಿಸಿ ಶಾಲೆಗೆ ರಜೆ ಘೋಷಣೆ ಮಾಡಿದ್ದರು. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, CFTRI ಆವರಣದಲ್ಲಿ ಕಾಣಿಸಿಕೊಂಡ ಚಿರತೆ ಸೆರೆಗೆ ಬಲೆ ಬಿಸಿದ್ದು, ಇದೀಗ ನಗರದ ಆಕಾಶವಾಣಿ ಬಳಿ ಚಿರತೆ ಕಾಣಿಸಿಕೊಂಡಿದೆ.
ನೆಲಮಂಗಲದಲ್ಲಿ ತಡರಾತ್ರಿ ಚಿರತೆ ಓಡಾಟ, ಮೊಬೈಲ್‌ನಲ್ಲಿ ಸೆರೆ ಹಿಡಿದ ಗ್ರಾಮಸ್ಥರು
ನೆಲಮಂಗಲ ತಾಲೂಕು ಕೆಂಪಲಿಂಗಹಳ್ಳಿ ಸಮೀಪದ ದೇವಾಂಗ ಮಠದ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷವಾಗಿದೆ. ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ಸ್ಥಳೀಯ ಗ್ರಾಮಸ್ಥರು ಚಿರತೆ ಸಂಚಾರವನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ದೃಶ್ಯ ಸೆರೆ ಹಿಡಿಯುವ ವೇಳೆ ಯಲಚಗೆರೆ ಗ್ರಾಮದ ಕಡೆಗೆ ಚಿರತೆ ಹೋಗಿದೆ. ಇನ್ನು ಚಿರತೆ ಉಪಟಳದ ಬಗ್ಗೆ ಪ್ರತಿನಿತ್ಯ ಅರಣ್ಯ ಇಲಾಖೆ ಕಛೇರಿಗೆ ತಾಲ್ಲೂಕಿನ ಹಲವು ಗ್ರಾಮಗಳಿಂದ ಹಲವಾರು ದೂರು ಬರುತ್ತಿದೆ. ಈಗಲೇ ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ನಗರಕ್ಕೆ ಲಗ್ಗೆ ಇಡುವ ಆತಂಕ ವ್ಯಕ್ತವಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ