
ತುಮಕೂರು, ನ.10: ತುಮಕೂರು ನಗರದಲ್ಲಿ ಬಸ್‌ಗಳ ಕೊರತೆಯಿಂದ ಪ್ರತಿನಿತ್ಯ ಗಂಟೆಗಟ್ಟಲೆ ಕಾಯುತ್ತಿದ್ದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಪರದಾಟಕ್ಕೆ ಕೊನೆಗೂ ಮುಕ್ತಿ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ನಗರದ ಸಾರಿಗೆ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಮತ್ತು ಪರಿಸರ ಸ್ನೇಹಿ ಸಂಚಾರ ಕಲ್ಪಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದ್ದು, ಶೀಘ್ರದಲ್ಲೇ 50 ಹೊಸ ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗಿಳಿಯಲಿವೆ. ಕೇಂದ್ರ ಸರ್ಕಾರದ ‘ಪಿಎಂ ಇ-ಬಸ್ ಸೇವಾ’ ಯೋಜನೆಯಡಿ ತುಮಕೂರು ನಗರ ಸಾರಿಗೆಗಾಗಿ ಬರೋಬ್ಬರಿ 50 ಇ-ಬಸ್‌ಗಳನ್ನು ಒದಗಿಸುವಂತೆ ಕೆಎಸ್‌ಆರ್‌ಟಿಸಿ ಪ್ರಸ್ತಾವನೆ ಸಲ್ಲಿಸಿದೆ.
ಸದ್ಯ ತುಮಕೂರು ನಗರ ಸಾರಿಗೆಯಲ್ಲಿ ಕೇವಲ 60 ಬಸ್‌ಗಳು ಮಾತ್ರ ಸಂಚರಿಸುತ್ತಿದ್ದು, ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕೆಂಬ ಸಾರ್ವಜನಿಕ ಬೇಡಿಕೆ ಇತ್ತು. ಸೂಕ್ತ ಸಮಯಕ್ಕೆ ಬಸ್‌ಗಳಿಲ್ಲದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ 50 ಹೊಸ ಇ-ಬಸ್‌ಗಳು ಸೇರ್ಪಡೆಯಾದರೆ ನಗರದ ಸಾರಿಗೆ ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ಸಿಗಲಿದೆ.
ಡೀಸೆಲ್ ಬಸ್‌ಗಳಿಂದ ಉಂಟಾಗುವ ವಾಯು ಮಾಲಿನ್ಯಕ್ಕೆ ಬ್ರೇಕ್ ಹಾಕಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತರುವುದು ಕೆಎಸ್‌ಆರ್‌ಟಿಸಿಯ ಮುಖ್ಯ ಉದ್ದೇಶವಾಗಿದೆ. ನಗರದ ಬಾಳೇಕಟ್ಟೆಯಲ್ಲಿರುವ ಕೆಎಸ್‌ಆರ್‌ಟಿಸಿ ಹಳೆ ಬಸ್ ನಿಲ್ದಾಣ ಕಳೆದ ಎರಡು ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದೆ ಪಾಳುಬಿದ್ದಿತ್ತು. ಇದೀಗ ಈ ನಿರುಪಯುಕ್ತ ಜಾಗವನ್ನು ‘ಇ-ಬಸ್ ಡಿಪೋ’ ಮಾಡಲು ನಿರ್ಧರಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ.
ಇದನ್ನೂ ಓದಿ: ಮೆಟ್ರೋ ರೈಲು ಬರುತ್ತಿರುವಾಗಲೇ ಟ್ರ್ಯಾಕ್ಗೆ ಇಳಿದ ವ್ಯಕ್ತಿ: ನೇರಳೆ ಮಾರ್ಗದಲ್ಲಿ ಸಂಚಾರ ವಿಳಂಬ
ಇ-ಬಸ್‌ಗಳ ಚಾರ್ಜಿಂಗ್ ಮೂಲಸೌಕರ್ಯಕ್ಕಾಗಿ 11 ಕೆ.ವಿ (11 KV) ವಿದ್ಯುತ್ ಫೀಡರ್ ಅಳವಡಿಸಲು ಯೋಜನೆ ರೂಪಿಸಲಾಗಿದ್ದು, ಬೆಸ್ಕಾಂ ಸಂಸ್ಥೆಯು ಬರೋಬ್ಬರಿ 3,000 ಕೆ.ವಿ.ಎ (KVA) ವಿದ್ಯುತ್ ಪೂರೈಕೆಗೆ ಅಗತ್ಯ ಸಿದ್ಧತೆ ನಡೆಸಿದೆ. ಸದ್ಯ ತುಮಕೂರು ಜಿಲ್ಲೆಯಾದ್ಯಂತ ಒಟ್ಟು 711 ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಮೊದಲ ಹಂತದಲ್ಲಿ ನಗರ ಸಾರಿಗೆಗೆ ಮಾತ್ರ ಈ 50 ಇ-ಬಸ್‌ಗಳನ್ನು ಬಳಸಲಾಗುತ್ತದೆ. ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ನಗರದ ಸುತ್ತಮುತ್ತಲಿನ ತಾಲೂಕುಗಳಿಗೂ ಇ-ಬಸ್ ಸೇವೆಯನ್ನು ವಿಸ್ತರಿಸುವ ಯೋಜನೆ ಇದೆ ಎಂದು ತುಮಕೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು ತಿಳಿಸಿದ್ದಾರೆ. ಪ್ರಸ್ತಾವನೆ ಸಲ್ಲಿಕೆಯಾಗಿ ಡಿಪೋ ಕಾಮಗಾರಿ ಆರಂಭವಾಗಿರುವ ಈ 50 ಇ-ಬಸ್‌ಗಳು ಅಧಿಕೃತವಾಗಿ ಯಾವಾಗ ರಸ್ತೆಗಿಳಿಯಲಿವೆ ಎಂಬುದನ್ನು ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ