AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರಿನಲ್ಲಿ 7 ಕೋಟಿ ರೂ ವೆಚ್ಚದ ಸ್ಕ್ವೇರ್‌ಗೆ ಶ್ರೀಗಳ ಹೆಸರಿಡುವಂತೆ ಪಟ್ಟು: ಡಿಸಿ ಪತ್ರದಿಂದ ವಿವಾದಕ್ಕೆ ಬೀಳುತ್ತಾ ತೆರೆ?

ತುಮಕೂರು ಸ್ಕ್ವೇರ್ ವಿವಾದದಿಂದ ನಗರದಲ್ಲಿ ಗೊಂದಲ ಸೃಷ್ಟಿಯಾಗಿದೆ. 7 ಕೋಟಿ ರೂ ವೆಚ್ಚದ ಎಲ್‌ಇಡಿ ಸ್ಕ್ವೇರ್ ಕಾಮಗಾರಿಗೆ ತುಮಕೂರು ಸ್ಕ್ವೇರ್ ಎಂದು ಹೆಸರಿಟ್ಟಿದ್ದಕ್ಕೆ ಭಕ್ತರು ಸೇರಿದಂತೆ ರಾಜಕಾರಣಿಗಳು ಕೂಡ ಶಿವಕುಮಾರ ಸ್ವಾಮೀಜಿ ಹೆಸರಿಡುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರೂ, ಸ್ಕ್ವೇರ್‌ಗೆ ಶ್ರೀಗಳ ಹೆಸರು ನಾಮಕರಣದ ವಿವಾದಕ್ಕೆ ಮಾತ್ರ ಇನ್ನೂ ತೆರೆ ಬಿದ್ದಿಲ್ಲ.

ತುಮಕೂರಿನಲ್ಲಿ 7 ಕೋಟಿ ರೂ ವೆಚ್ಚದ ಸ್ಕ್ವೇರ್‌ಗೆ ಶ್ರೀಗಳ ಹೆಸರಿಡುವಂತೆ ಪಟ್ಟು: ಡಿಸಿ ಪತ್ರದಿಂದ ವಿವಾದಕ್ಕೆ ಬೀಳುತ್ತಾ ತೆರೆ?
ತುಮಕೂರು ಸ್ಕೈರ್
ಜಗದೀಶ ಬಿ.
| Edited By: |

Updated on: Nov 06, 2026 | 8:53 PM

Share

ಮುಖ್ಯಾಂಶಗಳು

  • ಕಾಮಗಾರಿ ಹಂತದಲ್ಲೇ ಚರ್ಚೆಯ ಕೇಂದ್ರ ಬಿಂದುವಾದ ಯೋಜನೆ
  • ತುಮಕೂರು ಸ್ಕೈರ್ ಪದ ಬಳಕೆ ಮಾಡದಂತೆ ಒತ್ತಾಯ
  • ಶಿವಕುಮಾರ ಸ್ವಾಮೀಜಿ ಸ್ಕೈರ್ ಎಂದೇ ನಾಮಕರಣ ಮಾಡುವಂತೆ ಪಟ್ಟು

ತುಮಕೂರು, ನವೆಂಬರ್​​ 06: ನಗರದ ಹೃದಯಭಾಗದಲ್ಲಿರುವ ಶಿವಕುಮಾರ ಸ್ವಾಮೀಜಿ ಸರ್ಕಲ್​​ನಲ್ಲಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಬೃಹತ್​ ಎಲ್​​​ಇಡಿ ಪರದೆಗಳ ಯೋಜನೆ ನಿರ್ಮಾಣವಾಗುತ್ತಿದೆ. ನಗರದ ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಕೈಗೆತ್ತಿಕೊಂಡಿರುವ ಈ ಯೋಜನೆ ಇದೀಗ ಹೆಸರಿನ ವಿವಾದಕ್ಕೆ ಕಾರಣವಾಗಿದೆ. ಯೋಜನೆಗೆ ಅಧಿಕಾರಿಗಳು ತುಮಕೂರು ಸ್ಕ್ವೇರ್​​ ಎಂದು ಹೆಸರಿಟ್ಟಿರುವುದಕ್ಕೆ ಭಕ್ತರು ಹಾಗೂ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಈ ವಿವಾದಕ್ಕೆ ಇದೀಗ ಜಿಲ್ಲಾಧಿರಿಗಳೇ ಅಧಿಕೃತ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಆದರೂ ಸ್ಕ್ವೇರ್​ ನಾಮಕರಣದ ಗೊಂದಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.

ಏನಿದು ವಿವಾದ?

ತುಮಕೂರು ನಗರದ ಹೃದಯಭಾಗದಲ್ಲಿರುವ ಶಿವಕುಮಾರ ಸ್ವಾಮೀಜಿ ಸರ್ಕಲ್​ನಲ್ಲಿ ಸುಮಾರು 7 ಕೋಟಿ ರೂ ವೆಚ್ಚದಲ್ಲಿ ಬೃಹತ್ ಎಲ್‌ಇಡಿ ಪರದೆಗಳ ಸ್ಕ್ವೈರ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ಯೋಜನೆ ಆರಂಭದಲ್ಲೇ ವಿವಾದದ ಸುಳಿಗೆ ಸಿಲುಕಿದೆ. ಏಕೆಂದರೆ ಕಾಮಗಾರಿ ಆರಂಭವಾದಾಗಿನಿಂದಲೇ ಅಧಿಕಾರಿಗಳು ಇದನ್ನು ‘ತುಮಕೂರು ಸ್ಕ್ವೇರ್’ ಎಂದು ಕರೆಯುತ್ತಾ ಬಂದಿದ್ದಾರೆ. ಆದರೆ ಶಿವಕುಮಾರ ಸ್ವಾಮೀಜಿಗಳ ಹೆಸರಿನ ಸರ್ಕಲ್‌ನಲ್ಲಿ ತುಮಕೂರು ಸ್ಕ್ವೇರ್ ಎಂಬ ಹೆಸರು ಮುನ್ನೆಲೆಗೆ ಬಂದಿದ್ದೇ ಭಕ್ತರು ಮತ್ತು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದೆ ಇದೇ ಹೆಸರು ಜನಪ್ರಿಯವಾಗಿ ಸರ್ಕಲ್‌ನ ಮೂಲ ಹೆಸರೇ ಮರೆಯಾಗಬಹುದೆಂಬ ಆತಂಕ ಶುರುವಾಗಿದೆ.

ತುಮಕೂರು ಸ್ಕ್ವೇರ್ ಹೆಸರಿನ ವಿರುದ್ಧ ಆರಂಭವಾದ ಆಕ್ಷೇಪಕ್ಕೆ ಈಗ ರಾಜಕೀಯ ನಾಯಕರು ಎಂಟ್ರಿ ಕೊಟ್ಟಿದ್ದಾರೆ. ಶಿವಕುಮಾರ ಸ್ವಾಮೀಜಿ ಸರ್ಕಲ್‌ನ ಹೆಸರು ಯಾವುದೇ ಕಾರಣಕ್ಕೂ ಬದಲಾಗಬಾರದು. ಹೊಸದಾಗಿ ನಿರ್ಮಾಣವಾಗುತ್ತಿರುವ ಎಲ್‌ಇಡಿ ಪರದೆಗಳ ಸ್ಕ್ವೇರ್‌ಗೂ ಶಿವಕುಮಾರ ಸ್ವಾಮೀಜಿಗಳ ಹೆಸರನ್ನೇ ಇಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಇದನ್ನೂ ಓದಿ: ತುಮಕೂರು ಹಾಲು ಒಕ್ಕೂಟ ನೇಮಕಾತಿಯಲ್ಲೂ ಅಕ್ರಮ: 77 ಅಂಕ ಪಡೆದವನಿಗೆ ಕೆಲಸ; ಕೋರ್ಟ್​ ಮೆಟ್ಟಿಲೇರಲು ಮುಂದಾದ ಅಭ್ಯರ್ಥಿಗಳು

ಈ ಸಂಬಂಧ ಕೇಂದ್ರ ಸಚಿವ ವಿ. ಸೋಮಣ್ಣ, ಸಿಎಂ ಡಿಕೆ ಶಿವಕುಮಾರ್​ಗೆ ಪತ್ರ ಬರೆದಿದ್ದಾರೆ. ಮಾಜಿ ಸಚಿವ ಸೊಗಡು ಶಿವಣ್ಣ ಕೂಡ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​​ಗೆ ಪತ್ರ ಬರೆದಿದ್ದಾರೆ. ಇನ್ನು ಸ್ಥಳೀಯ ಶಾಸಕ ಜಿ.ಬಿ. ಜ್ಯೋತಿಗಣೇಶ್ ಕೂಡ ಇದೇ ಬೇಡಿಕೆಗೆ ಧ್ವನಿಗೂಡಿಸಿದ್ದಾರೆ. ಹೀಗೆ ಒಂದು ಯೋಜನೆಯ ಹೆಸರಿನ ವಿಚಾರ ಈಗ ರಾಜಕೀಯ ನಾಯಕರ ಪತ್ರ ಸಮರಕ್ಕೂ ಕಾರಣವಾಗಿದೆ.

LIVE TV

ಹೆಸರು ಬದಲಿಸುವ ಯಾವುದೇ ಉದ್ದೇಶ ಇಲ್ಲ: ಡಿಸಿ ಸ್ಪಷ್ಟನೆ 

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಸರ್ಕಲ್‌ನ ಹೆಸರು ಬದಲಾವಣೆಯಾಗುತ್ತಾ ಎಂಬ ಪ್ರಶ್ನೆಗೆ ಈಗಾಗಲೇ ಉತ್ತರ ನೀಡಲಾಗಿತ್ತು. ‘ಶಿವಕುಮಾರ ಸ್ವಾಮೀಜಿ ಸರ್ಕಲ್‌ನ ಹೆಸರನ್ನು ಬದಲಿಸುವ ಯಾವುದೇ ಉದ್ದೇಶ ಇಲ್ಲ’ ಎಂದು ತುಮಕೂರು ಮಹಾನಗರ ಪಾಲಿಕೆ ಸ್ಪಷ್ಟಪಡಿಸಿತ್ತು. ಡಿಸಿಎಂ ಜಿ. ಪರಮೇಶ್ವರ್ ಕೂಡ ಇದೇ ವಿಚಾರವಾಗಿ ಸ್ಪಷ್ಟನೆ ನೀಡಿದ್ದರು. ಆದರೂ ಸಾರ್ವಜನಿಕರ ಆತಂಕ ಮಾತ್ರ ದೂರವಾಗಿರಲಿಲ್ಲ. ತುಮಕೂರು ಸ್ಕ್ವೇರ್ ಎಂಬ ಹೆಸರು ಬಳಕೆಯಲ್ಲಿದ್ದರೆ ಮುಂದೊಂದು ದಿನ ಶಿವಕುಮಾರ ಸ್ವಾಮೀಜಿಗಳ ಹೆಸರಿನ ಬದಲಿಗೆ ಅದೇ ಹೆಸರು ಚಾಲ್ತಿಗೆ ಬರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಹೀಗಾಗಿ ಎಸ್​ಎಸ್​ ಸರ್ಕಲ್ ಸ್ಕ್ವೇರ್ ಎಂದು ನಾಮಕರಣ ಮಾಡುವಂತೆಯೂ ಒತ್ತಾಯ ಕೇಳಿಬಂದಿತ್ತು.

ಸ್ಕ್ವೇರ್ ನಾಮಕರಣದ ವಿವಾದಕ್ಕೆ ಇನ್ನೂ ತೆರೆ ಬಿದ್ದಿಲ್ಲ

ಜಿಲ್ಲಾಧಿಕಾರಿಗಳ ಪತ್ರದಿಂದ ಶಿವಕುಮಾರ ಸ್ವಾಮೀಜಿ ಸರ್ಕಲ್‌ನ ಹೆಸರಿನ ಕುರಿತ ಗೊಂದಲಕ್ಕೆ ಸ್ಪಷ್ಟನೆ ಸಿಕ್ಕಿದ್ದರೂ, ಹೊಸದಾಗಿ ನಿರ್ಮಾಣವಾಗುತ್ತಿರುವ ಎಲ್‌ಇಡಿ ಸ್ಕ್ವೇರ್‌ನ ನಾಮಕರಣದ ವಿಚಾರ ಇನ್ನೂ ಬಗೆಹರಿದಿಲ್ಲ. ಸ್ಕ್ವೇರ್‌ಗೂ ಶಿವಕುಮಾರ ಸ್ವಾಮೀಜಿಗಳ ಹೆಸರನ್ನೇ ಇಡಬೇಕು ಎಂಬ ಬೇಡಿಕೆಗೆ ಜಿಲ್ಲಾಡಳಿತ ಯಾವ ರೀತಿಯಲ್ಲಿ ಸ್ಪಂದಿಸಲಿದೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ತುಮಕೂರು: ವಿದೇಶಿ ವಲಸಿಗರ ಕೇಂದ್ರದಿಂದ ಮಹಿಳೆ ಪರಾರಿ; ಕಿಟಕಿ ಸರಳು ಕಟ್ ಮಾಡಿ ಎಸ್ಕೇಪ್

ಒಟ್ಟಿನಲ್ಲಿ, ಸರ್ಕಲ್‌ನ ಹೆಸರು ಬದಲಾವಣೆ ಇಲ್ಲ ಎಂಬ ಜಿಲ್ಲಾಧಿಕಾರಿಗಳ ಸ್ಪಷ್ಟನೆಯಿಂದ ಸಾರ್ವಜನಿಕರ ಆತಂಕ ದೂರವಾಗುತ್ತದೆಯೇ? ಎಲ್‌ಇಡಿ ಸ್ಕ್ವೇರ್‌ಗೆ ಶಿವಕುಮಾರ ಸ್ವಾಮೀಜಿಗಳ ಹೆಸರಿಡುವ ಬೇಡಿಕೆ ಈಡೇರುತ್ತದೆಯೇ? ಜಿಲ್ಲಾಧಿಕಾರಿಗಳ ಅಧಿಕೃತ ಪತ್ರವೇ ನಾಮಕರಣದ ವಿವಾದಕ್ಕೆ ಪೂರ್ಣವಿರಾಮ ಇಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More