ನಶೆರಾಣಿ ಆಗಲು ಹೋಗಿ ಖಾಕಿ ಕೈಲಿ ತಗಲಾಕಿಕೊಂಡ ಮಹಿಳೆ: ಗ್ಯಾಂಗ್​​ ಅಂದರ್​​

ಹೊಸ ವರ್ಷಾಚರಣೆ ಸಿದ್ಧತೆಗಳ ನಡುವೆ, ತುಮಕೂರು ಮತ್ತು ಮೈಸೂರಿನಲ್ಲಿ ಪೊಲೀಸರು ಡ್ರಗ್ಸ್ ಜಾಲದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ತುಮಕೂರಿನಲ್ಲಿ ಓರ್ವ ಮಹಿಳೆ ಸೇರಿದಂತೆ ಹಲವಾರು ಡ್ರಗ್ ಡೀಲರ್‌ಗಳನ್ನು ಬಂಧಿಸಿ, ಲಕ್ಷಾಂತರ ಮೌಲ್ಯದ ಎಂಡಿಎಂಎ ಹಾಗೂ ಗಾಂಜಾ ಜಪ್ತಿ ಮಾಡಲಾಗಿದೆ. ಮೈಸೂರಿನಲ್ಲೂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಇಬ್ಬರನ್ನು ಖಾಕಿ ಲಾಕ್​​ ಮಾಡಿದೆ.

ನಶೆರಾಣಿ ಆಗಲು ಹೋಗಿ ಖಾಕಿ ಕೈಲಿ ತಗಲಾಕಿಕೊಂಡ ಮಹಿಳೆ: ಗ್ಯಾಂಗ್​​ ಅಂದರ್​​
ಬಂಧಿತ ಆರೋಪಿಗಳು
Updated By: ಪ್ರಸನ್ನ ಹೆಗಡೆ

Updated on: Dec 12, 2025 | 3:55 PM

ತುಮಕೂರು, ಡಿಸೆಂಬರ್​​ 12: ಹೊಸವರ್ಷ 2026ಕ್ಕೆ ಕೌಂಟ್​​ಡೌನ್​​ ಶುರುವಾಗಿದೆ. ಇದಕ್ಕೆಂದೇ ಬೆಂಗಳೂರಿನಲ್ಲಿ ಭಾರಿ ತಯಾರಿ ನಡೆದಿದ್ದು, ಸಿಟಿ ಪಾರ್ಟಿ ಹಬ್ ಆಗಿ ಬದಲಾಗುತ್ತಿದೆ. ಈ‌ ನಡುವೆ ಮಾದಕ ಜಗತ್ತಿನ ಚಟುವಟಿಕೆಗಳೂ ಗರಿಗೆದರಿದ್ದು, ಬೆಂಗಳೂರು ಬಿಟ್ಟು ತುಮಕೂರಿನತ್ತ ಒಂದಷ್ಟು ಡ್ರಗ್ ಡೀಲರ್​​ಗಳು ಎಂಟ್ರಿ ಕೊಟ್ಟಿದ್ದಾರೆ. ಮಾಹಿತಿಯ ಆಧಾರದಲ್ಲಿ ಅಲರ್ಟ್​​ ಆಗಿರೋ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಹತ್ತಕ್ಕೂ ಅಧಿಕ ಪೆಡ್ಲರ್​​ಗಳನ್ನು ಲಾಕ್ ಮಾಡಿದ್ದಾರೆ.

ತುಮಕೂರು ನಗರ ಪೊಲೀಸರು ಆಯಿಷಾ ಎಂಬ ಮಹಿಳೆ ಸೇರಿ ಆಕೆಯ ಗ್ಯಾಂಗ್​​ ಹೆಡೆಮುರಿ ಕಟ್ಟಿದ್ದು, ಒಂದು ಲಕ್ಷ ಮೌಲ್ಯದ ಎಂಡಿಎಂ ಜಪ್ತಿ ಮಾಡಿದೆ. ಬೆಂಗಳೂರು ನಿವಾಸಿಯಾಗಿರೋ ಈ ಆಯಿಷಾ ಬಿಕಾಂ ಮುಗಿಸಿದ್ದು, ಹತ್ತು ವರ್ಷಗಳ ಹಿಂದೆ ಈಕೆಗೆ ವಿವಾಹವೂ ಆಗಿದೆ. ಪತಿ ದುಬೈನಲ್ಲಿ ಕೆಲಸ ಮಾಡುತಿದ್ದು, ಒಂಟಿಯಾಗಿದ್ದ ಈಕೆ ಡ್ರಗ್ ಜಾಲಕ್ಕೆ ಬಿದಿದ್ದಾಳೆ. ಆರಂಭದಲ್ಲಿ ಡ್ರಗ್ ಬಳಸುತಿದ್ದ ಆಯಿಷಾ ಈಗ ಡ್ರಗ್ ಡೀಲರ್ ಆಗಿದ್ದು, ತನ್ನದೇ ಗ್ಯಾಂಗ್ ಮೂಲಕ ಡ್ರಗ್ ಮಾರಲು ಬಂದು ತುಮಕೂರಲ್ಲಿ ಲಾಕ್ ಆಗಿದ್ದಾಳೆ.

ಇದನ್ನೂ ಓದಿ: ದೇಶದ ಹಲವು ನಗರಗಳಲ್ಲಿ ಡ್ರಗ್ಸ್ ದಾಸರಾಗುತ್ತಿದ್ದಾರೆ ಮಕ್ಕಳು; ಸಮೀಕ್ಷೆ ಪಟ್ಟಿಯಲ್ಲಿದೆ ಕರ್ನಾಟಕದ ಈ ನಗರದ ಹೆಸರು

ಮತ್ತೊಂದೆಡೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸರ ಮೂರು ಪ್ರಕರಣಗಳ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಒಂದು ಗ್ಯಾಂಗ್ ಎಂಡಿಎಂಎ ಮಾರಲು ಬಂದು ಲಾಕ್ ಆದ್ರೆ, ಮತ್ತೊಂದು ಗ್ಯಾಂಗ್ ಮಹಾರಾಷ್ಟ್ರ, ಒರಿಸ್ಸಾ ಹಾಗೂ ಆಂಧ್ರದಿಂದ ಗಾಂಜಾ ತಂದು ಮಾರಾಟಕ್ಕೆ ಮುಂದಾಗಿತ್ತು. ಈ ಬಗ್ಗೆ ಪಕ್ಕಾ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು ಒಟ್ಟು ಎಂಟು ಲಕ್ಷ ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಮೈಸೂರಲ್ಲಿ 17 ಲಕ್ಷ ರೂ. ಮೌಲ್ಯದ ಗಾಂಜಾ ವಶ

ಮೈಸೂರು ನಗರ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯ ನಾಯ್ಡು ನಗರದಲ್ಲಿ ಸುಮಾರು 17 ಲಕ್ಷ ರೂ. ಮೌಲ್ಯದ 176 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ. ಹೈಡ್ರೋ ಗಾಂಜಾ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ ಅಫ್ತಾಬ್ ಅಲಿ ಬೇಗ್ ಮತ್ತು ಪ್ರತಾಪ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಎನ್. ಆರ್. ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.