
ತುಮಕೂರು, ನವೆಂಬರ್ 14: ಹಳೆ ದ್ವೇಷಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಕೊಲೆಯಾಗಿ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರಿನ ಜಯನಗರ ಠಾಣಾ ವ್ಯಾಪ್ತಿಯ ಮಂಜುನಾಥ ನಗರದಲ್ಲಿ ನಡೆದಿದೆ. ಲಾಂಗು-ಮಚ್ಚುಗಳಿಂದ ನಡೆದ ಫೈಟ್ನಲ್ಲಿ ಕ್ಯಾತ್ಸಂದ್ರದ ನಿವಾಸಿ ಅಭಿಷೇಕ್ ಎಂಬಾಂತ ಮೃತಪಟ್ಟಿದ್ದು, ಎನ್ಇಪಿಎಸ್ ಠಾಣೆಯ ರೌಡಿಶೀಟರ್ ಮನೋಜ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕಳೆದ ಕೆಲ ದಿನಗಳ ಹಿಂದೆ ಅಭಿಷೇಕ್ ಮತ್ತು ಮನೋಜ್ ಗುಂಪಿನ ಹುಡುಗರು ಬಾರ್ನಲ್ಲಿ ಕಿರಿಕ್ ಮಾಡಿಕೊಂಡಿದ್ದರು. ಇದೇ ವಿಚಾರವಾಗಿ ಕಳೆದ ತಿಂಗಳು ಒಂದೆರಡು ಬಾರಿ ರಾಜಿ ಸಂಧಾನದ ಯತ್ನವೂ ನಡೆದಿತ್ತು. ನಿನ್ನೆ (ನ.13) ರಾತ್ರಿಯೂ ಇದೇ ವಿಚಾರವಾಗಿ ಮಾತುಕತೆ ನಡೆದಿದ್ದು, ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅಭಿಷೇಕ್ ತನ್ನ ಇಬ್ಬರು ಗೆಳೆಯರ ಜೊತೆ ಬಂದು ಮನೋಜ್ ಮೇಲೆ ಮೊದಲು ಅಟ್ಯಾಕ್ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಮನೋಜ್ ತನ್ನ ಜೊತೆಗಾರರನ್ನು ಕರೆಸಿ ಅಭಿಷೇಕ್ ಮೇಲೆ ದಾಳಿ ಮಾಡಿ ಹತ್ಯೆಮಾಡಿದ್ದಾನೆ. ಮತ್ತೊಂದು ಗುಂಪಿನ ದಾಳಿಯಿಂದ ಮನೋಜ್ಗೂ ಗಂಭೀರ ಗಾಯವಾಗಿ ಎನ್ನಲಾಗಿದೆ. ಆದರೆ ನಿಜಕ್ಕೂ ಅಲ್ಲಾಗಿದ್ದೇನು ಎಂಬುದು ಸದ್ಯಕ್ಕೆ ಗೊಂದಲದ ಗೂಡಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಭಿಷೇಕ್ ಹತ್ಯೆ ಸಂಬಂಧ ಕೊಲೆ ಪ್ರಕರಣ ಹಾಗೂ ರೌಡಿಶೀಟರ್ ಮನೋಜ್ ಮೇಲಿನ ಹಲ್ಲೆ ಸಂಬಂಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹೋಟೆಲ್ನಲ್ಲಿ ಮಲಗಿದ್ದಲ್ಲೇ ಹೆಣವಾದ ಯುವಕ, ಸಾವಿನ ಹಿಂದೆ ಮಹಿಳೆಯ ಕರಿನೆರಳು?
ಘಟನೆ ಬೆನ್ನಲ್ಲೇ ಇಷ್ಟು ದಿನ ತಣ್ಣಗಿದ್ದ ತುಮಕೂರಿನಲ್ಲಿ ಮತ್ತೆ ಗ್ಯಾಂಗ್‌ವಾರ್ ಆರಂಭವಾಯ್ತಾ ಎನ್ನುವ ಅನುಮಾನ ಶುರುವಾಗಿದೆ. ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ಮಾರಮಾರಿಯೇ ನಡೆದಿರೋದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಲಾಂಗು-ಮಚ್ಚುಗಳಿಂದ ಅಟ್ಟಹಾಸ ನಡೆದು ರಕ್ತ ಹರಿದಿದ್ದು, ರೌಡಿಗಳು ಫೀಲ್ಡ್ನಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.