ಹೋಟಲ್ನಲ್ಲಿ ಮಲಗಿದ್ದಲ್ಲೇ ಹೆಣವಾದ ಯುವಕ: ಸಾವಿನ ಹಿಂದೆ ಮಹಿಳೆಯ ಕರಿನೆರಳು?
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಲಕ್ಷ್ಮಿಸಾಗರ ಗ್ರಾಮದ ಬಳಿಯ ಕದಂಬ ಹೋಟೆಲ್ನಲ್ಲೇ ನೆತ್ತರು ಹರಿದಿದೆ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಯುವಕನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಸದ್ಯ ಈ ಪ್ರಕರಣ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ರಾಮನಗರ, ನವೆಂಬರ್ 14: ಆತ ಖಾಸಗಿ ಹೋಟೆಲ್ವೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ (Security guard) ಆಗಿ ಕೆಲಸ ಮಾಡುತ್ತಿದ್ದ. ಎಂದಿನಂತೆ ಗುರುವಾರ ರಾತ್ರಿ ಕೂಡ ಕೆಲಸಕ್ಕೆ ಬಂದವನು ಹೋಟೆಲ್ನಲ್ಲಿ ಮಲಗಿದ್ದ. ಆದರೆ ತಡರಾತ್ರಿ ದುಷ್ಕರ್ಮಿಗಳು ಆತನನ್ನು ಭೀಕರವಾಗಿ ಕೊಲೆ (kill) ಮಾಡಿದ್ದಾರೆ. ನಿಶಾಂತ್ (25) ಕೊಲೆಯಾದ ಯುವಕ. ಹತ್ಯೆ ನಂತರ ಸಿಸಿ ಕ್ಯಾಮೆರಾದ ಡಿವಿಆರ್ ಅನ್ನು ಸಹ ತೆಗೆದುಕೊಂಡು ಹೋಗಿದ್ದಾರೆ. ಸದ್ಯ ಯುವಕನ ಹತ್ಯೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ನಡೆದದ್ದೇನು?
ರಾಮನಗರ ತಾಲೂಕಿನ ಬಿಡದಿ ಸಮೀಪದ ಲಕ್ಷ್ಮಿಸಾಗರ ಗ್ರಾಮದ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಕದಂಬ ಹೋಟೆಲ್ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನಿಶಾಂತ್ನನ್ನು ದುಷ್ಕರ್ಮಿಗಳು ಹೋಟೆಲ್ನಲ್ಲಿಯೇ ಮಾರಕಾಸ್ತ್ರದಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.
ಇದನ್ನೂ ಓದಿ: ಒಂದೇ ಹುಡುಗಿ ಮೇಲೆ ಇಬ್ಬರಿಗೆ ಲವ್: ಹುಬ್ಬಳ್ಳಿಯಲ್ಲಿ ಹರಿದಿದ್ದು ನೆತ್ತರ ಕೋಡಿ
ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕೊಂಡಾಪುರ ಗ್ರಾಮದ ನಿಶಾಂತ್, ಕಳೆದ ಎರಡುವರೆ ತಿಂಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ರಾತ್ರಿ ವೇಳೆ ಹೋಟಲ್ ಕಾವಲು ಕಾಯುತ್ತಿದ್ದ ನಿಶಾಂತ್, ನಿನ್ನೆ ರಾತ್ರಿ ಕೂಡ ಕೆಲಸಕ್ಕೆ ಬಂದಿದ್ದ. 12 ಗಂಟೆ ವೇಳೆ ಹೋಟೆಲ್ಗೆ ಹಾಲು ಸಹ ಇಳಿಸಿಕೊಂಡಿದ್ದ. ಆದರೆ ಆನಂತರ ಎಂಟ್ರಿ ಕೊಟ್ಟ ದುಷ್ಕರ್ಮಿಗಳು ಆತನನ್ನು ಕೊಲೆ ಮಾಡಿದ್ದಾರೆ.
ಮಹಿಳೆಗೆ ಮೆಸೇಜ್ ಮಾಡಿದ್ದ ನಿಶಾಂತ್
ಅಂದಹಾಗೆ ಸೆಕ್ಯೂರಿಟಿ ಗಾರ್ಡ್ ನಿಶಾಂತ್ ಕೊಲೆ ಪ್ರಕರಣ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ರಾತ್ರಿ ವೇಳೆ ಕದಂಬ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ನಿಶಾಂತ್, ಬೆಳಗಿನ ಸಮಯದಲ್ಲಿ ಬೆಂಗಳೂರಿನ ಕೋಣನಕುಂಟೆಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚಿಗೆ ಓರ್ವ ಮಹಿಳೆಗೆ ವಾಟ್ಸಪ್ ಮೂಲಕ ಮೆಸೇಜ್ ಮಾಡಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ನಿಶಾಂತ್ನನ್ನ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು.
ಇನ್ನು ಗ್ರಾಮದಲ್ಲಿ ಯಾರೊಂದಿಗೂ ವೈಷಮ್ಯ ಮಾಡಿಕೊಳ್ಳದ ನಿಶಾಂತ್ಗೆ ಯಾರು ಶತ್ರುಗಳಿರಲಿಲ್ಲ. ಹೀಗಿರುವಾಗ ಕೊಲೆಯಾಗಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಕೂಡ ಬಿಡದಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎಸ್ಪಿ ಶ್ರೀನಿವಾಸ್ ಗೌಡ ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: ಆಸ್ತಿ ಆಸೆ, ಹಣದ ಮೇಲೆ ಮೋಹ: ಸ್ಕೆಚ್ ಹಾಕಿ ಸಾಕು ತಾಯಿಯನ್ನೇ ಮುಗಿಸಿದ ಮಗಳು
ಒಟ್ಟಾರೆ ತಡರಾತ್ರಿ ಹೋಟೆಲ್ನಲ್ಲಿ ನಡೆದಿರುವ ಯುವಕನ ಭೀಕರ ಹತ್ಯೆ ಬಿಡದಿ ಭಾಗದ ಜನರನ್ನ ಬೆಚ್ಚಿ ಬೀಳುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಬಿಡದಿ ಠಾಣೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:57 pm, Fri, 14 November 25



