
ತುಮಕೂರು, ನ.25: ಆಡಿ ನಲಿಯಬೇಕಾದ 11ನೇ ವಯಸ್ಸಿನಲ್ಲಿ ನಾಲ್ಕನೇ ಹಂತದ ಮಾರಕ ಬ್ರೈನ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಪುಟ್ಟ ಬಾಲಕಿ ಯೋಗಿತಾಳ ಮನದಾಳದ ಆಸೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾವನಾತ್ಮಕವಾಗಿ ಸ್ಪಂದಿಸಿದ್ದಾರೆ. ದೂರದ ಜಪಾನ್ ಪ್ರವಾಸದಲ್ಲಿದ್ದರೂ ಬಾಲಕಿಯ ಹಂಬಲದ ವಿಷಯ ತಿಳಿಯುತ್ತಿದ್ದಂತೆಯೇ ವಿಡಿಯೋ ಕಾಲ್ ಮೂಲಕ ಯೋಗಿತಾ ಹಾಗೂ ಆಕೆಯ ಪೋಷಕರೊಂದಿಗೆ ಮಾತನಾಡಿದ ಸಿಎಂ, ಧೈರ್ಯ ತುಂಬುವುದರ ಜೊತೆಗೆ ವಾಪಸ್ ಬಂದ ತಕ್ಷಣ ಖುದ್ದಾಗಿ ಭೇಟಿಯಾಗುವ ಭರವಸೆ ನೀಡಿದ್ದಾರೆ.
ಗುಬ್ಬಿ ತಾಲೂಕಿನ ಅರಿವೇಸಂದ್ರ ಗ್ರಾಮದ ಮಂಜುನಾಥ್ ಅವರ ಪುತ್ರಿಯಾದ 11 ವರ್ಷದ ಯೋಗಿತಾ, 5ನೇ ತರಗತಿಯ ವಿದ್ಯಾರ್ಥಿನಿ. ಒಂದು ವರ್ಷದ ಹಿಂದೆ ಕಾಣಿಸಿಕೊಂಡ ಬ್ರೈನ್ ಕ್ಯಾನ್ಸರ್ ಇದೀಗ ನಾಲ್ಕನೇ ಹಂತ ತಲುಪಿದ್ದು, ಮಗಳನ್ನು ಉಳಿಸಿಕೊಳ್ಳಲು ಪೋಷಕರು ಇನ್ನಿಲ್ಲದ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಯೋಗಿತಾಗೆ ಎಂಟು ಬಾರಿ ಕೀಮೋಥೆರಪಿ ಚಿಕಿತ್ಸೆ ಕೊಡಿಸಲಾಗಿದೆ.
ಚಿಕಿತ್ಸೆಯ ತೀವ್ರ ನೋವಿನ ನಡುವೆಯೂ ಕಳೆದ ಒಂದು ತಿಂಗಳಿಂದ ಯೋಗಿತಾ ತನ್ನ ಪೋಷಕರ ಬಳಿ ಒಂದು ಆಸೆಯನ್ನು ವ್ಯಕ್ತಪಡಿಸುತ್ತಿದ್ದಾಳೆ. ತನ್ನ ಕೊನೆಯ ಸಮಯಕ್ಕೂ ಮುನ್ನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರನ್ನು ಭೇಟಿಯಾಗಬೇಕು, ಅದರಲ್ಲೂ ಡಿ.ಕೆ. ಶಿವಕುಮಾರ್ ಅವರನ್ನು ಕಣ್ಣಾರೆ ಕಾಣಬೇಕು ಎಂದು ಹಂಬಲಿಸುತ್ತಿದ್ದಾಳೆ. ಆದರೆ, ಯಾಕೆ ಈ ಮೂವರು ನಾಯಕರನ್ನೇ ಭೇಟಿಯಾಗಬೇಕು ಎಂಬ ಕಾರಣವನ್ನು ಬಾಲಕಿ ಬಿಟ್ಟುಕೊಟ್ಟಿಲ್ಲ; “ಅವರ ಎದುರಲ್ಲೇ ನನ್ನ ಮನದ ಮಾತು ಹೇಳುತ್ತೇನೆ” ಎನ್ನುತ್ತಿರುವ ಮಗಳ ಮಾತು ಕೇಳಿ ಪೋಷಕರು ಕಣ್ಣೀರಾಗಿದ್ದಾರೆ.
ಇದನ್ನೂ ಓದಿ: ತಿಪ್ಪೆಯಲ್ಲಿ ಕಸ ಹಾಕುವ ವಿಚಾರಕ್ಕೆ ಜಗಳ: ಮೊಬೈಲ್‌ನಲ್ಲಿ ಸೆರೆಯಾಯಿತು ಭೀಕರ ದೃಶ್ಯ
ವಿಷಯ ತಿಳಿದ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಬಾಲಕಿಯ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಕುಣಿಗಲ್ ಶಾಸಕ ಡಾ. ರಂಗನಾಥ್ ಹಾಗೂ ಎಸ್.ಆರ್. ಶ್ರೀನಿವಾಸ್ ಮೂಲಕ ಬಾಲಕಿಯ ಆಸೆಯ ವಿಚಾರ ಜಪಾನ್ ಪ್ರವಾಸದಲ್ಲಿದ್ದ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಲುಪಿದೆ. ತಕ್ಷಣವೇ ಜಪಾನ್‌ನಿಂದ ವಿಡಿಯೋ ಕಾಲ್ ಮಾಡಿದ ಡಿ.ಕೆ. ಶಿವಕುಮಾರ್, ಯೋಗಿತಾಳ ಆರೋಗ್ಯ ವಿಚಾರಿಸಿ ಪೋಷಕರಿಗೂ ಸಾಂತ್ವನ ಹೇಳಿದರು. “ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡ. ಜಗತ್ತಿನಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ. ಈ ಕಷ್ಟದ ಸಮಯದಲ್ಲಿ ನಿಮ್ಮ ಜೊತೆ ನಾವಿದ್ದೇವೆ, ಭಗವಂತ ಇದ್ದಾನೆ, ಎಲ್ಲವೂ ಒಳ್ಳೆಯದಾಗುತ್ತದೆ” ಎಂದು ಧೈರ್ಯ ತುಂಬಿದ್ದಾರೆ. ಅಲ್ಲದೆ, ಜಪಾನ್ ಪ್ರವಾಸ ಮುಗಿಸಿ ವಾಪಸ್ ಬಂದ ತಕ್ಷಣ ಬಾಲಕಿಯನ್ನು ಖುದ್ದಾಗಿ ಭೇಟಿಯಾಗುವುದಾಗಿ ಭರವಸೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ