ಸರ್ಕಾರಿ ಇಲಾಖೆಗಳೇ ಹೀಗೆ ಮಾಡೋದು ಸರೀನಾ? ತುಮಕೂರಿನ ಕಚೇರಿಗಳಲ್ಲಿ 44 ಕೋಟಿ ರೂಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಬಾಕಿ

ತುಮಕೂರಿನ ಸರ್ಕಾರಿ ಇಲಾಖೆಗಳು ಬೆಸ್ಕಾಂಗೆ 44.05 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಹಲವು ನೋಟಿಸ್‌ಗಳ ಹೊರತಾಗಿಯೂ ಬಿಲ್ ಪಾವತಿಸದ ಕಾರಣ, ಬೆಸ್ಕಾಂ ಸಂಪರ್ಕ ಕಡಿತಗೊಳಿಸಲು ವಾರ್ನಿಂಗ್ ನೀಡಿದೆ. ಜಲಸಂಪನ್ಮೂಲ, ಸಣ್ಣ ನೀರಾವರಿ ಸೇರಿ ಹಲವು ಇಲಾಖೆಗಳು ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿದ್ದು, ನಿಯಮ ಉಲ್ಲಂಘಿಸುತ್ತಿರುವ ಸರ್ಕಾರಿ ಕಚೇರಿಗಳ ಬಗ್ಗೆ ಸಾರ್ವಜನಿಕರಲ್ಲಿ ಆಕ್ರೋಶ ಮೂಡಿದೆ.

ಸರ್ಕಾರಿ ಇಲಾಖೆಗಳೇ ಹೀಗೆ ಮಾಡೋದು ಸರೀನಾ? ತುಮಕೂರಿನ ಕಚೇರಿಗಳಲ್ಲಿ 44 ಕೋಟಿ ರೂಪಾಯಿಗೂ ಹೆಚ್ಚು ವಿದ್ಯುತ್ ಬಿಲ್ ಬಾಕಿ
44 ಕೋಟಿ ರೂಪಾಯಿಗೂ ಹೆಚ್​ಚು ವಿದ್ಯುತ್ ಬಿಲ್ ಬಾಕಿ
Image Credit source: Tv9
Edited By:

Updated on: Jan 30, 2026 | 8:52 AM

ತುಮಕೂರು, ಜನವರಿ 30: ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಗಳ ಆರ್ಥಿಕ ಸ್ಥಿತಿ ಚಿಂತಾಜನಕವಾಗಿದೆ. ತುಮಕೂರಿನ (Tumakuru) ವಿವಿಧ ಸರ್ಕಾರಿ ಕಚೇರಿಗಳು ವಿದ್ಯುತ್ ಬಿಲ್ ಪಾವತಿಸದೇ ಬರೋಬ್ಬರಿ 44 ಕೋಟಿ 05 ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ವರ್ಷವೇ ಈ ಬಿಲ್​ಗಳನ್ನು ಪಾವತಿಸುವಂತೆ ಬೆಸ್ಕಾಂ ಹೇಳಿದ್ದರೂ ಇಲಾಖೆ ನಿರ್ಲಕ್ಷ್ಯ ತೋರಿದೆ ಎಂಬ ಆರೋಪ ಕೇಳಿಬಂದಿದೆ. ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿ ಇನ್ನೂ ಹಲವು ಇಲಾಖೆಗಳು ಕೋಟ್ಯಂತರ ರೂ.ಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ ಎಂದು ಹೇಳಲಾಗುತ್ತಿದೆ.

ಬೆಸ್ಕಾಂನಿಂದ ಖಡಕ್ ವಾರ್ನಿಂಗ್

ಕಳೆದ ನವೆಂಬರ್ ಅಂತ್ಯದೊಳಗಾಗಿ ವಿದ್ಯುತ್ ಬಿಲ್ ಪಾವತಿಸುವಂತೆ ತುಮಕೂರಿನ ಹಲವು ಸರ್ಕಾರಿ ಇಲಾಖೆಗಳಿಗೆ ಬೆಸ್ಕಾಂ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ, ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬರುತ್ತಿದೆ. ತಿಂಗಳಗಟ್ಟಲೆ ಬಿಲ್ ಕಟ್ಟದೇ ಇರುವುದರಿಂದ ಬಾಕಿ ಹಣ ವಸೂಲಿಗೆ ಬೆಸ್ಕಾಂ ಅಧಿಕಾರಿಗಳು ಸುಸ್ತಾಗಿದ್ದು, ಇದೀಗ ಸರ್ಕಾರಿ ಕಚೇರಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಶಾಲಾ ಶಿಕ್ಷಣ, ಕಂದಾಯ, ಸಮಾಜ ಕಲ್ಯಾಣ, ತೋಟಗಾರಿಕೆ ಸೇರಿ ಹಲವು ಇಲಾಖೆಗಳು ಕೋಟಿಗಟ್ಟಲೆ ಹಣದ ವಿದ್ಯುತ್ ಬಿಲ್ ಭರಿಸದ ಹಿನ್ನೆಲೆ ಬೆಸ್ಕಾಂ ಖಡಕ್ ವಾರ್ನಿಂಗ್ ನೀಡಿದೆ. ಸರ್ಕಾರಿ ಕಚೇರಿಗಳೇ ನಿಯಮ ಉಲ್ಲಂಘಿಸುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡ ಜಿಲ್ಲೆಯ ಇಲಾಖೆಗಳು

  • ಜಲಸಂಪನ್ಮೂಲ ಇಲಾಖೆ – 17.73 ಕೋಟಿ ರೂ.
  • ಸಣ್ಣ ನೀರಾವರಿ ಇಲಾಖೆ- 12.72 ಕೋಟಿ ರೂ.
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- 3.63 ಕೋಟಿ ರೂ.
  • ನಗರಾಭಿವೃದ್ಧಿ ಇಲಾಖೆ- 2.65 ಕೋಟಿ ರೂ.
  • ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ- 1.85 ಕೋಟಿ ರೂ.
  • ಶಾಲಾ ಶಿಕ್ಷಣ ಇಲಾಖೆ – 1.10 ಕೋಟಿ ರೂ.
  • ಕಂದಾಯ ಮತ್ತು ಮುಜರಾಯಿ ಇಲಾಖೆ- 1.44 ಕೋಟಿ ರೂ.
  • ಸಮಾಜ ಕಲ್ಯಾಣ ಇಲಾಖೆ -1.09 ಕೋಟಿ ರೂ.
  • ತೋಟಗಾರಿಕೆ ಇಲಾಖೆ – 37 ಲಕ್ಷ ರೂ.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ- 34 ಲಕ್ಷ ರೂ.
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ- 31 ಲಕ್ಷ ರೂ.
  • ಗೃಹ ಇಲಾಖೆ- 23 ಲಕ್ಷ ರೂ.
  • ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ-11.97 ಲಕ್ಷ ರೂ.
  • ಕೃಷಿ ಇಲಾಖೆ- 2.69 ಲಕ್ಷ ರೂ.
  • ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ- 3.16 ಲಕ್ಷ ರೂ.
  • ಲೋಕೋಪಯೋಗಿ ಇಲಾಖೆ- 7.56 ಲಕ್ಷ ರೂ.
  • ಕಾನೂನು ಇಲಾಖೆ – 6.11 ಲಕ್ಷ ರೂ.
  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ- 2.98 ಲಕ್ಷ ರೂ.
  • ಅರಣ್ಯ ಇಲಾಖೆ- 8 ಲಕ್ಷ ರೂ.
  • ಸಾರಿಗೆ- 3.18 ಲಕ್ಷ ರೂ.

ಈ ಎಲ್ಲಾ ಇಲಾಖೆಗಳು ಸೇರಿ ಒಟ್ಟು 44.05 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.