ಉರುಳಿಗೆ ಬಿದ್ದು ಪ್ರಾಣ ಬಿಟ್ಟ ಚಿರತೆ ಸುಟ್ಟ ದುರುಳರು: ತನಿಖೆ ವೇಳೆ ಸ್ಫೋಟಕ ವಿಚಾರಗಳು ಬಯಲು
ತುಮಕೂರಿನ ಗೌರಗೊಂಡನಹಳ್ಳಿಯಲ್ಲಿ ಉರುಳಿಗೆ ಬಿದ್ದು ಮೃತಪಟ್ಟ ಚಿರತೆಯನ್ನು ಸುಟ್ಟುಹಾಕಿದ ಮೂವರನ್ನು ಅರಣ್ಯ ಇಲಾಖೆ ಬಂಧಿಸಿದ್ದು, ಸ್ಥಳದಲ್ಲಿ ಕರಡಿ ಹಲ್ಲು ಹಾಗೂ ಬೇಟೆ ಸಾಮಗ್ರಿಗಳು ಪತ್ತೆಯಾಗಿರುವುದು ವನ್ಯಜೀವಿ ಬೇಟೆ ಜಾಲದ ಶಂಕೆ ಮೂಡಿಸಿದೆ. ಜೊತೆಗೆ ಚಿರತೆ ಸುಟ್ಟ ವ್ಯಾಪ್ತಿಯಲ್ಲಿ ಐದಾರು ಉರುಳುಗಳನ್ನು ಭದ್ರ ಟೈಗರ್ ರಿಸರ್ವ್ನ ಡಾಗ್ ಸ್ಕ್ವಾಡ್ ಪತ್ತೆ ಮಾಡಿದೆ. ಸಾಲದ್ದಕ್ಕೆ ತೋಟದೊಳಗೊಂದು ಗರಿಗಳಿಂದ ನಿರ್ಮಿಸಿದ ಮನೆಯೂ ಕಂಡುಬಂದಿದ್ದು, ಅದರಲ್ಲಿ ಬೇಟೆಗೆ ಸಂಬಂಧಿತ ವಸ್ತುಗಳು ಸಿಕ್ಕಿರೋದು ಅನುಮಾನ ಹೆಚ್ಚಿಸಿದೆ.

ತುಮಕೂರು, ಆಗಸ್ಟ್ 23: ಕಾಡು ಪ್ರಾಣಿಗಳಿಂದ ಬೆಳೆ ಹಾನಿ ತಪ್ಪಿಸಲು ಹಾಕಿದ್ದ ಉರುಳಿಗೆ ಬಿದ್ದು ಮೃತಪಟ್ಟಿದ್ದ ಚಿರತೆಯನ್ನು ಸುಟ್ಟಿರುವ ಘಟನೆ ತುಮಕೂರು ತಾಲೂಕಿನ ಗೌರಗೊಂಡನಹಳ್ಳಿಯಲ್ಲಿ ನಡೆದಿದೆ. ಬೆಟ್ಟದ ಬುಡದಲ್ಲಿ ನಾರಾಯಣಪ್ಪ ಎಂಬುವವರಿಗೆ ಸೇರಿದ ಜಮೀನಿಗೆ ಹಾಕಿದ್ದ ಉರುಳಿಗೆ ಚಿರತೆ ಬಿದ್ದಿತ್ತು. ಮೃತಪಟ್ಟಿದ್ದ ಚಿರತೆಯನ್ನು ಗ್ರಾಮದ ಕೆಲ ಯುವಕರೇ ಸುಟ್ಟಿದ್ದು, ಅದನ್ನು ವಿಡಿಯೋ ಮಾಡಿ ತಮ್ಮ ಗೆಳೆಯರ ವಾಟ್ಸ್ಯಾಪ್ ಗ್ರೂಪ್ಗಳಲ್ಲಿ ಹಂಚಿಕೊಂಡಿದ್ದರು. ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳಾದ ನಾರಾಯಣಪ್ಪ, ರಾಮಚಂದ್ರಯ್ಯ ಹಾಗೂ ಶಿವಕುಮಾರ್ ಎಂಬವರನ್ನು ಬಂಧಿಸಿದ್ದಾರೆ. ಸುಟ್ಟು ಕರಕಲಾದ ಚಿರತೆ ಅವಶೇಶದ ಪರಿಶೀಲನೆಯನ್ನೂ ನಡೆಸಲಾಗಿದೆ.
ತುಮಕೂರಲ್ಲಿ ವನ್ಯ ಜೀವಿ ಬೇಟೆಗಾರರ ಜಾಲ?
ಇನ್ನು ಪ್ರಕರಣ ಸಂಬಂಧ ಅರಣ್ಯ ಇಲಾಖೆ ಪರಿಶೀಲನೆ ವೇಳೆ ಸ್ಪೋಟಕ ಅಂಶಗಳು ಬಯಲಾಗಿವೆ. ಚಿರತೆ ಸುಟ್ಟ ಜಾಗದಲ್ಲಿ ಬನ್ನೇರುಘಟ್ಟ ವನ್ಯಜೀವಿಗಳ ತನಿಖಾ ತಂಡದ ಪರಿಶೀಲನೆ ವೇಳೆ ಚಿರತೆ ಕಳೆಬರಹದ ಜೊತೆ ಕರಡಿ ಹಲ್ಲು, ಕೂದಲು ಕೂಡ ಪತ್ತೆಯಾಗಿದೆ. ಹೀಗಾಗಿ ಈ ಜಾಗದಲ್ಲಿ ಈ ಹಿಂದೆ ಹಲವು ವನ್ಯ ಜೀವಿಗಳ ಸುಟ್ಟ ಬಗ್ಗೆ ಅನುಮಾನ ಕೂಡ ವ್ಯಕ್ತವಾಗಿದೆ. ಜೊತೆಗೆ ಚಿರತೆ ಸುಟ್ಟ ವ್ಯಾಪ್ತಿಯಲ್ಲಿ ಐದಾರು ಉರುಳುಗಳನ್ನು ಭದ್ರ ಟೈಗರ್ ರಿಸರ್ವ್ನ ಡಾಗ್ ಸ್ಕ್ವಾಡ್ ಪತ್ತೆ ಮಾಡಿದೆ. ಸಾಲದ್ದಕ್ಕೆ ತೋಟದೊಳಗೊಂದು ಗರಿಗಳಿಂದ ನಿರ್ಮಿಸಿದ ಮನೆಯೂ ಕಂಡುಬಂದಿದ್ದು, ಅದರಲ್ಲಿ ಬೇಟೆಗೆ ಸಂಬಂಧಿತ ವಸ್ತುಗಳು ಸಿಕ್ಕಿವೆ. ಹೀಗಾಗಿ ಮೇಲ್ನೋಟಕ್ಕೆ ವನ್ಯ ಜೀವಿಗಳ ಬೇಟೆಗಾರರ ತಂಡವೇ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಚಿರತೆ ಕಳೆಬರಹ, ಕರಡಿ ಹಲ್ಲು ಹಾಗೂ ಕೂದಲು ಸೇರಿ ಸ್ಥಳದಲ್ಲಿ ಪತ್ತೆಯಾದ ಕಳೆಬರಹಗಳ ಸ್ಯಾಂಪಲ್ಗಳನ್ನು ಫೋರೆನ್ಸಿಕ್ಗೆ ರವಾನಿಸಲಾಗಿದ್ದು, ಅಲ್ಲಿಂದ ವರದಿ ಬಂದ ಬಳಿಕ ಇನ್ನಷ್ಟು ಅಸಲಿಯತ್ತುಗಳು ಬಯಲಾಗಬೇಕಿವೆ.
ಇದನ್ನೂ ಓದಿ: ಉದ್ಘಾಟನೆಯಾಗಿ 10 ತಿಂಗಳಾದರೂ ಆರಂಭವಾಗದ ತುಮಕೂರು ಕ್ಯಾನ್ಸರ್ ಆಸ್ಪತ್ರೆ: ಬಡ ರೋಗಿಗಳಿಗೆ ತಪ್ಪದ ಬೆಂಗಳೂರು ಅಲೆದಾಟ!
ಘಟನೆ ಬಗ್ಗೆ ಎಸಿಎಫ್ ಹೇಳಿದ್ದೇನು?
ಇನ್ನು ಘಟನೆ ಬಗ್ಗೆ ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿರುವ ತುಮಕೂರು ಅರಣ್ಯ ಇಲಾಖೆಯ ಎಸಿಎಫ್ ಪವಿತ್ರಾ, ಗೌರಗೊಂಡನಹಳ್ಳಿಯಲ್ಲಿ ವನ್ಯ ಪ್ರಾಣಿ ದಹನ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ಸಿಬ್ಬಂದಿ ವರ್ಗ ತೆರಳಿ ಪರಿಶೀಲಿಸಿದಾಗ ಸುಟ್ಟಿರೋದು ಕಂಡು ಬಂದಿದೆ. ಕೂಡಲೇ ಅವಶೇಷಗಳ ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಚಿರತೆಯನ್ನೇ ಸುಟ್ಟಿರೊದಾಗಿ ಹೇಳಿದ್ದಾರೆ. ವಶಕ್ಕೆ ಪಡೆದಿರುವ ಮಾದರಿಗಳನ್ನು ಹೈದರಾಬಾದ್ನ ಸಿಸಿಎಂಬಿಗೆ ಕಳುಹಿಸುತ್ತೇವೆ. ಅಲ್ಲಿ ನಮಗೆ ವನ್ಯ ಜೀವಿಗಳ ಬಗ್ಗೆ ಗುರುತು ಪತ್ತೆಯಾಗಲಿದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:37 am, Sun, 23 August 26




