
ತುಮಕೂರು, ಜುಲೈ 26: ಒಂದೆಡೆ ಬೆಂಗಳೂರಿನಲ್ಲಿ ಬೀದಿನಾಯಿಗಳಿಗೆ (Stray Dogs) ಪೌಷ್ಟಿಕಾಹಾರ ನೀಡಲು ಬಿಬಿಎಂಪಿ ಮುಂದಾಗಿದೆ. ಇತ್ತ ತುಮಕೂರಿನಲ್ಲಿ (Tumkur) ಬೀದಿ ನಾಯಿಗಳ ಹೆಸರು ಕೇಳಿದರೆ ಜನ ಬೆಚ್ಚಿ ಬೀಳುತ್ತಾರೆ! ಹೌದು, ಅಂಥ ಸ್ಥಿತಿ ತುಮಕೂರಿನಲ್ಲಿ ಬಂದೊದಗಿಗೆ. ಇತ್ತೀಚಿಗೆ ತುಮಕೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ನಾಯಿ ಕಚ್ಚಿದ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಬೀದಿ ನಾಯಿಗಳು ಮಕ್ಕಳು, ವೃದ್ಧರು ಹಾಗೂ ಬೈಕ್ನಲ್ಲಿ ತೆರಳುವವರನ್ನೇ ಅಟ್ಟಾಡಿಸಿ ಕಚ್ಚುತ್ತಿವೆ. ಕಳೆದ ಆರು ತಿಂಗಳ ಅಂಕಿ ಅಂಶ ಗಮನಸಿದರೆ ನಿಜಕ್ಕೂ ಬೆಚ್ಚಿ ಬೀಳಬೇಕು, ಅಥ ಸಂಗತಿ ಬಯಲಾಗಿದೆ. ತುಮಕೂರಿನಲ್ಲಿ ಕಳೆದ ಆರು ತಿಂಗಳ ನಾಯಿ ಕಡಿತ ಪ್ರಕರಣ ಸಂಖ್ಯೆ 10 ಸಾವಿರಕ್ಕೂ ಅಧಿಕವಾಗಿದೆ.
ತುಮಕೂರು ಜಿಲ್ಲೆಯ ಬೀದಿ ನಾಯಿ ಕಡಿತ ಪ್ರಕರಣಗಳ ವಿವರಗಳನ್ನು ಗಮನಿಸಿದರೆ, ಮೊದಲನೇ ಸ್ಥಾನ ಹಾಗೂ ಅತಿಹೆಚ್ಚು ನಾಯಿ ಕಡಿತ ಪ್ರಕರಣ ದಾಖಲಾಗಿರುವುದು ತುಮಕೂರು ನಗರ ಹಾಗೂ ತುಮಕೂರು ಗ್ರಾಮಾಂತರದಲ್ಲಿ. ಇಲ್ಲಿ ದಾಖಲಾದ ಒಟ್ಟು ಸಂಖ್ಯೆ 2013 ಪ್ರಕರಣಗಳಾಗಿದ್ದು, ನಾಯಿ ಕಡಿತ ಪ್ರಕರಣದಲ್ಲಿ ಒಂದು ಸಾವು ಸಹ ಸಂಭವಿಸಿದೆ.
ಬೀದಿ ನಾಯಿ ಕಡಿತದಲ್ಲಿ ಎರಡನೇ ಸ್ಥಾನದಲ್ಲಿ ಗುಬ್ಬಿ ತಾಲೂಕು ಇದೆ. ಇಲ್ಲಿ 1281 ಪ್ರಕರಣ ವರದಿಯಾಗಿದ್ದು, ಈ ತಾಲೂಕಿನಲ್ಲೂ ಒಂದು ಸಾವು ಸಂಭವಿಸಿದೆ.
ನಂತರ ಮೂರನೇ ಸ್ಥಾನದಲ್ಲಿ ಕೊರಟಗೆರೆ ಇದ್ದು, ಇಲ್ಲಿ 1,224 ಪ್ರಕರಣಗಳು ವರದಿಯಾಗಿವೆ. ಮಧುಗಿರಿಯಲ್ಲಿ 1,214 ಪ್ರಕರಣಗಳು ವರದಿಯಾಗಿವೆ. ತಿಪಟೂರಿನಲ್ಲಿ 1169, ಪಾವಗಡದಲ್ಲಿ 938 ಕಡಿತ ಹಾಗೂ ಒಂದು ಸಾವು ಸಂಭವಿಸಿದರೆ, ತುರುವೇಕೆರೆಯಲ್ಲಿ 917, ಕುಣಿಗಲ್ನಲ್ಲಿ 843, ಚಿಕ್ಕನಾಯಕನಹಳ್ಳಿಯಲ್ಲಿ 601 ಹಾಗೂ ಶಿರಾದಲ್ಲಿ 311 ಪ್ರಕರಣಗಳು ವರದಿಯಾಗಿವೆ. ಇನ್ನು ಶಿರಾ ಒಂದರಲ್ಲೇ ನಾಯಿ ಕಡಿತಕ್ಕೆ ಕಳೆದ ಆರು ತಿಂಗಳಲ್ಲಿ ಇಬ್ಬರು ಸಾವನಪ್ಪಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಮೂರು ದಿನದಲ್ಲಿ 35ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳ ದಾಳಿ
ತುಮಕೂರು ಜಿಲ್ಲೆಯಲ್ಲೇ ಇಷ್ಟೊಂದು ಪ್ರಮಾಣದಲ್ಲಿ ಬೀದಿ ನಾಯಿ ಕಡಿತ ಪ್ರಕರಣ ವರದಿಯಾಗಲು, ಬಿದಿ ನಾಯಿಗಳ ಸಂತಾನೋತ್ಪತ್ತಿ ಹೆಚ್ಚಾಗಿರುವುದೇ ಕಾರಣ ಎನ್ನುತ್ತಾರೆ ಜನ.
ಬೆಂಗಳೂರು ಹಾಗೂ ನೆಲಮಂಗಲ್ಲಿ ಹಿಡಿದ ನಾಯಿಗಳನ್ನು ತುಮಕೂರಿಗೆ ತಂದು ಬಿಡುತಿದ್ದಾರೆಂದು ತುಮಕೂರಿನ ಜನ ಆರೋಪಿಸಿದ್ದಾರೆ. ಜೊತೆಗೆ ಹೋಟೆಲ್ ಹಾಗೂ ಮಾಂಸದ ಅಂಗಡಿಯ ಜನ ಮಾಂಸಗಳ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ರಕ್ತದ ರುಚಿ ಕಂಡ ಬೀದಿ ನಾಯಿಗಳು ಮಕ್ಕಳು ಹಾಗೂ ವಯೋವೃದ್ಧರ ಮೇಲೆ ದಾಳಿ ಮಾಡುತ್ತಿವೆ ಎನ್ನಲಾಗಿದೆ. ಇದರ ಬಗ್ಗೆ ಪಾಲಿಕೆ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.