ಕ್ರೀಡಾಂಗಣದ ಆದಾಯ ಕ್ರೀಡಾ ಇಲಾಖೆಗೆ, ವಿದ್ಯುತ್ ಬಿಲ್ ಮಾತ್ರ ವಿವಿಗೆ!: ಅಧಿಕಾರಿಗಳ ನಿರ್ಲಕ್ಷ್ಯದಿಂದ ತುಮಕೂರು ಯೂನಿವರ್ಸಿಟಿಗೆ ಸಂಕಷ್ಟ
ತುಮಕೂರು ವಿಶ್ವವಿದ್ಯಾಲಯ ಆವರಣದ ಟೆನಿಸ್ ಕ್ರೀಡಾಂಗಣದ ಆದಾಯ ಕ್ರೀಡಾ ಇಲಾಖೆಗೆ ಸೇರುತ್ತಿದ್ದರೂ, ಪ್ರತಿ ತಿಂಗಳ ವಿದ್ಯುತ್ ಬಿಲ್ ಮತ್ತು ದಂಡದ ಹೊರೆ ವಿವಿಯ ಮೇಲೆ ಬಿದ್ದಿದೆ. ಪ್ರತ್ಯೇಕ ಮೀಟರ್ ಅಳವಡಿಸುವಂತೆ ಪತ್ರ ಬರೆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಪ್ರತಿ ತಿಂಗಳು 10ರಿಂದ 15 ಸಾವಿರ ರೂಪಾಯಿ ಬಿಲ್ ಪಾವತಿಸಬೇಕಾದ ಅನಿವಾರ್ಯತೆ ಯೂನಿವರ್ಸಿಟಿಗೆ ಬಂದೊದಗಿದೆ.

ತುಮಕೂರು, ನವೆಂಬರ್ 17: ವಿಶ್ವವಿದ್ಯಾಲಯದ ಆವರಣದಲ್ಲಿರುವ ಟೆನಿಸ್ ಕ್ರೀಡಾಂಗಣದ ವಿದ್ಯುತ್ ಬಿಲ್ ಪಾವತಿಯೇ ಈಗ ತುಮಕೂರು ಯೂನಿವರ್ಸಿಟಿಗೆ ಆರ್ಥಿಕ ಹೊರೆಯಾಗಿ ಮಾರ್ಪಟ್ಟಿದೆ. ವಿಚಿತ್ರ ಅಂದರೆ ಈ ಕ್ರೀಡಾಂಗಣದ ಆದಾಯ ಕ್ರೀಡಾ ಇಲಾಖೆಗೆ ಹೋಗುತ್ತಿದ್ದರೂ ವಿದ್ಯುತ್ ಬಿಲ್ ಕಟ್ಟಬೇಕಿರೋದು ವಿಶ್ವವಿದ್ಯಾಲಯದ ಜವಬ್ದಾರಿಯಾಗಿದೆ. ಹೀಗಾಗಿ ಪ್ರತ್ಯೇಕ ಮೀಟರ್ ಅಳವಡಿಸುವಂತೆ ಮೂರು ಬಾರಿ ಪತ್ರ ಬರೆದರೂ ಅಧಿಕಾರಿಗಳು ಕ್ಯಾರೇ ಎನ್ನದ ಕಾರಣ ಈಗಾಗಲೇ ಎರಡು ಲಕ್ಷಕ್ಕೂ ಅಧಿಕ ಹಣ ವಿವಿಯ ಬೊಕ್ಕಸದಿಂದ ಖರ್ಚಾಗಿದೆ.
ಪ್ರತಿ ತಿಂಗಳು 10ರಿಂದ 15 ಸಾವಿರ ರೂಪಾಯಿ ಬಿಲ್!
ಕ್ರೀಡಾಂಗಣ ನಿರ್ಮಾಣಕ್ಕೆ ವಿಶ್ವ ವಿದ್ಯಾಲಯ ಜಾಗ ನೀಡಿದ್ದು, ಇದರ ನಿರ್ವಹಣೆಯನ್ನು ಕ್ರೀಡಾ ಇಲಾಖೆ ಮಾಡುತ್ತಿದೆ. ಇಲ್ಲಿ ಅಭ್ಯಾಸಕ್ಕೆ ಬರುವವರಿಂದ ಶುಲ್ಕ ಸಂಗ್ರಹಿಸುವುದು ಕೂಡ ಇವರೇ. ಆದರೆ ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ಹೈಮಾಸ್ಟ್ ದೀಪಗಳಿಗೆ ಬಳಕೆಯಾಗುವ ವಿದ್ಯುತ್‌ಗೆ ಪ್ರತಿ ತಿಂಗಳು 10ರಿಂದ 15 ಸಾವಿರ ರೂಪಾಯಿ ಬಿಲ್ ಪಾವತಿಸುತ್ತಿರುವುದು ಮಾತ್ರ ತುಮಕೂರು ಯೂನಿವರ್ಸಿಟಿ. ಹೀಗಾಗಿ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಕೆಯಾಗಬೇಕಾದ ಹಣ ಹೀಗೆ ಬೇರೆ ಉದ್ದೇಶಕ್ಕೆ ಖರ್ಚಾಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಇದನ್ನೂ ಓದಿ: ಕೆಎಸ್ಆರ್ಟಿಸಿ ಬಸ್ ರೂಪದಲ್ಲಿ ಬಂದ ಮೃತ್ಯು! ಭೀಕರ ಅಪಘಾತದಲ್ಲಿ ಯುವಕರಿಬ್ಬರು ಸಾವು
ಇನ್ನು ಈ ಸಮಸ್ಯೆ ಬಗೆಹರಿಸುವಂತೆ ವಿಶ್ವವಿದ್ಯಾಲಯ ಅಧಿಕಾರಿಗಳು ಹಲವು ಬಾರಿ ಮನವಿ ಮಾಡಿದ್ದಾರೆ. ಪ್ರತ್ಯೇಕ ವಿದ್ಯುತ್ ಮೀಟರ್ ಅಳವಡಿಸುವಂತೆ ಜನವರಿ 3, ಏಪ್ರಿಲ್ 7 ಹಾಗೂ ಮೇ 14ರಂದು ಜಿಲ್ಲಾಧಿಕಾರಿ ಮತ್ತು ಕ್ರೀಡಾ ಇಲಾಖೆಗೆ ಪತ್ರ ಬರೆದಿದ್ದಾರೆ. ಮೂರು ಬಾರಿ ಪತ್ರ ಬರೆದರೂ ಪ್ರಯೋಜನ ಮಾತ್ರ ಶೂನ್ಯ. ಆರು ತಿಂಗಳು ಕಳೆದರೂ ಕ್ರೀಡಾ ಇಲಾಖೆಯಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಮತ್ತೊಂದೆಡೆ ಹೆಚ್ಚುವರಿ ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ ಬೆಸ್ಕಾಂ ಬರೋಬ್ಬರಿ 19,140 ರೂಪಾಯಿ ದಂಡ ಮತ್ತು ಶುಲ್ಕ ವಿಧಿಸಿದೆ. ಇದರಿಂದ ವಿದ್ಯುತ್ ಬಿಲ್ ಜೊತೆಗೆ ಹೆಚ್ಚುವರಿ ದಂಡದ ಹೊರೆಯೂ ವಿವಿಯ ಮೇಲೆ ಬಿದ್ದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




