ತುಮಕೂರು: ಹಂದಿ ಬೇಟೆಗೆ ಬಳಸುವ ಸ್ಫೋಟಕ ಉಂಡೆಯನ್ನು ಬಾಲ್ ಎಂದು ಆಟವಾಡಿದ ಮಕ್ಕಳು, ಆಮೇಲೇನಾಯ್ತು?

ಮಾಟ ಮಂತ್ರದ ಬಾಲ್ ಇರಬೇಕೆಂದು ಭಾವಿಸಿ ಬಾಲಕನ ತಂದೆ ಎಸೆದಿದ್ದ ಬಾಲ್​ ಅನ್ನು ಬೀದಿನಾಯಿಯೊಂದು ಕಚ್ಚಿದೆ. ಅಷ್ಟರಲ್ಲಿ ಅದು ಸ್ಫೋಟಗೊಂಡಿದೆ. ಬಾಯಿ ಛಿದ್ರಗೊಂಡು ನಾಯಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ತುಮಕೂರು: ಹಂದಿ ಬೇಟೆಗೆ ಬಳಸುವ ಸ್ಫೋಟಕ ಉಂಡೆಯನ್ನು ಬಾಲ್ ಎಂದು ಆಟವಾಡಿದ ಮಕ್ಕಳು, ಆಮೇಲೇನಾಯ್ತು?
ಸ್ಫೋಟಕದ ಉಂಡೆ ದೊರೆತ ಬಾಲಕರು ಮತ್ತು ದೊರೆತ ಸ್ಥಳ
Updated By: Ganapathi Sharma

Updated on: Jan 05, 2024 | 8:43 AM

ತುಮಕೂರು, ಜನವರಿ 5: ಶಾಲೆ ಪಕ್ಕದಲ್ಲೇ ಎಸೆದಿದ್ದ ಸಿಡಿಮದ್ದಿನ ಉಂಡೆ ಮಕ್ಕಳ ಕೈಗೆ ಸಿಕ್ಕಿದ್ದು, ಅದೃಷ್ಟವಶಾತ್ ಸಂಭಾವ್ಯ ದುರಂತ ಸ್ವಲ್ಪದರಲ್ಲೇ ತಪ್ಪಿದೆ. ತುಮಕೂರು (Tumkur) ಜಿಲ್ಲೆ ಚಿಕ್ಕನಾಯನಕನಹಳ್ಳಿ ತಾಲ್ಲೂಕಿನ ಮಾದೇನಹಳ್ಳಿಯಲ್ಲಿ ಹಂದಿ ಬೇಟೆಗೆ ಬಳಸುವ ಸಿಡಿ ಮದ್ದಿನ ಉಂಡೆಯನ್ನು (Explosive) ಶಾಲೆಯೊಂದರ ಪಕ್ಕದಲ್ಲಿ ಎಸೆಯಲಾಗಿತ್ತು. ಇದನ್ನು ಬಾಲ್ ಅಂತ ಭಾವಿಸಿದ್ದ ಬಾಲಕನೊಬ್ಬ ಎತ್ತಿಕೊಂಡು ಶಾಲೆಯತ್ತ ತೆರಳಿದ್ದ. ಬಳಿಕ ಆ ಸಿಡಿ ಮದ್ದಿನ ಉಂಡೆಯನ್ನು ಕೈಯಲ್ಲಿ ಹಿಡಿದುಕೊಂಡು ಮಕ್ಕಳು ಓಡಾಡಿದ್ದರು.

ಯುವರಾಜ ಎಂಬ ಬಾಲಕನಿಗೆ ಸ್ಫೋಟಕ ಸಿಕ್ಕಿದ್ದು, ಆತ ಅದನ್ನು ಶ್ರೀನಿವಾಸ್ ಎಂಬ ಹುಡುಗನಿಗೆ ನೀಡಿದ್ದ. ಆ ಸ್ಫೋಟಕ ಉಂಡೆಯನ್ನು ಮನೆಗೆ ತೆಗೆದುಕೊಂಡು ಹೋಗಿದ್ದ ಶ್ರೀನಿವಾಸ್ ತಂದೆಗೆ ನೀಡಿದ್ದ. ಇದು ಯಾವುದೋ ಮಾಟ ಮಂತ್ರದ ಬಾಲ್ ಇರಬೇಕೆಂದು ಭಾವಿಸಿದ ಶ್ರೀನಿವಾಸ್ ತಂದೆ ಅದನ್ನು ದೂರಕ್ಕೆ ಎಸೆದಿದ್ದರು.

ಶ್ರೀನಿವಾಸ್ ತಂದೆ ಎಸೆದಿದ್ದ ಬಾಲ್​ ಅನ್ನು ಬೀದಿನಾಯಿಯೊಂದು ಕಚ್ಚಿದ್ದು, ಅಷ್ಟರಲ್ಲಿ ಅದು ಸ್ಫೋಟಗೊಂಡಿದೆ. ಬಾಯಿ ಛಿದ್ರಗೊಂಡು ನಾಯಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಸ್ಫೋಟಗೊಂಡಿರುವುದು ಹಂದಿ ಬೇಟೆಯಾಡಲು ಬಳಸುವ ಮದ್ದಿನ ಉಂಡೆಯಾಗಿದೆ. ಅದನ್ನು ಶಾಲೆ ಪಕ್ಕದಲ್ಲಿ ಎಸೆದರು ಯಾರು ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಮಕ್ಕಳಿಂದ ಮಾಹಿತಿ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ತುಮಕೂರಿನಲ್ಲೂ ಇದೆ ರಾಮ ಸಂಚರಿಸಿರುವ ಕುರುಹು: ನಾಮದ ಚಿಲುಮೆ ಹೇಳುತ್ತಿದೆ ಅಯೋಧ್ಯಾಪತಿ ಬಂದು ಹೋಗಿರುವ ಕಥೆ

ದಿಢೀರ್ ಹೊತ್ತಿ ಉರಿದ ಕಾರು

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೊಸಪಾಳ್ಯ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಕಾರೊಂದು ಹೊತ್ತಿ ಉರಿದಿದೆ. ಗುಬ್ಬಿಯಿಂದ ತುಮಕೂರು ಕಡೆ ಬರ್ತಿದ್ದ ಹೋಂಡಾ ಐಕಾನ್ ಕಾರಿನಲ್ಲಿ ಚಲಿಸುತ್ತಿರುವಾಗ ದಿಢೀರ್ ಆಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರಿನಿಂದ ಕೆಳಗೆ ಇಳಿದ ನಾಲ್ವರು ಸವಾರರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ‌ ನಂದಿಸಿದ್ದಾರೆ. ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ