Tumakuru News: ನಡೆದಾಡುವ ಸರ್ಕಾರ ತಂದಿರುವ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತದೆ: ಬಿ.ವೈ.ವಿಜಯೇಂದ್ರ

ಯಡಿಯೂರಪ್ಪ ಅವರಿಗೆ ಈಗ ಯಾವುದೇ ರಾಜಕೀಯ ಸ್ಥಾನಮಾನ ಇಲ್ಲ. ಹಾಗಿದ್ದರೂ ಅವರಿಗೆ ಕೋಟ್ಯಾಂತರ ಜನರು ತಮ್ಮ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನ ಕೊಟ್ಟಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

Tumakuru News: ನಡೆದಾಡುವ ಸರ್ಕಾರ ತಂದಿರುವ ಕೀರ್ತಿ ಯಡಿಯೂರಪ್ಪಗೆ ಸಲ್ಲುತ್ತದೆ: ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ ಮತ್ತು ಬಿ.ಎಸ್.ಯಡಿಯೂರಪ್ಪ
Follow us
| Updated By: Rakesh Nayak Manchi

Updated on: Jan 15, 2023 | 6:10 PM

ತುಮಕೂರು: ಡಾ.ಶಿವಕುಮಾರ ಶ್ರೀಗಳನ್ನು (Dr. Shivakumara Swamiji) ನಡೆದಾಡುವ ದೇವರೆಂದು ಪೂಜಿಸುತ್ತೇವೆ. ಅದೇ ರೀತಿ ನಡೆದಾಡುವ ಸರ್ಕಾರ ತಂದಿರುವ ಕೀರ್ತಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (B.Y.Vijayendra) ಹೇಳಿದರು. ಗುರುಸಿದ್ದರಾಮೇಶ್ವರ ಜಯಂತಿ (Gurusiddarameshwara Jayanti) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಡಿಯೂರಪ್ಪ ಅವರು ಕೊಟ್ಟಿರುವ ಪ್ರತಿಯೊಂದು ಕಾರ್ಯಕ್ರಮಗಳು ಪ್ರತಿಯೊಂದು ಮನೆಗೆ ತಲುಪಿದೆ ಎಂದರು.

ಯಡಿಯೂರಪ್ಪ ಅವರಿಗೆ ಈಗ ಯಾವುದೇ ರಾಜಕೀಯ ಸ್ಥಾನಮಾನ ಇಲ್ಲ. ಅವರು ಈಗ ಮುಖ್ಯಮಂತ್ರಿ ಕೂಡ ಅಲ್ಲ. ಹಾಗಿದ್ದರೂ ಅವರಿಗೆ ಕೋಟ್ಯಾಂತರ ಜನರು ತಮ್ಮ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನ ಕೊಟ್ಟಿದ್ದಾರೆ.‌ ಗುಡಿಯಲ್ಲಿ ದೇವರು ಕಾಣುವುದಕ್ಕಿಂತ ಮನುಷ್ಯನಲ್ಲಿ ದೇವರು ಕಾಣಬೇಕಿದೆ. ಪ್ರತಿಯೊಂದು ಧರ್ಮವೂ ಕೂಡ ದಾನದ ಮಹತ್ವ ಸಾರಿದೆ. ಕಾಣಿಕೆ ಹಾಕುತ್ತೇವೆ, ಅನ್ನದಾನ ಮಾಡುತ್ತೇವೆ. ಎಲ್ಲದಿಕ್ಕಿಂತ ಮಿಗಿಲಾದ ದಾನ ಯಾವುದಾದರೂ ಇದ್ದರೇ ಅದು ಮತ್ತೊಬ್ಬರಿಗೆ ಹಿಂಸೆಯನ್ನ ಕೊಡದೇ ಜೀವನ ಸಾಗಿಸುವುದು ಎಂದರು.

ಇವತ್ತು ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅನ್ನೋದು ನಾನು ಹೇಳಬೇಕಿಲ್ಲಾ. ಸಮಾಜವನ್ನ ಸರಿದಾರಿಯಲ್ಲಿ ಕರೆದುಕೊಂಡು ಹೋಗುವ ಜವಾಬ್ದಾರಿ ಈ ವೇದಿಕೆಯಲ್ಲಿರುವ ಹರಗುರುಚರಮೂರ್ತಿಗಳಲ್ಲಿ ಎಷ್ಟಿದೆಯೋ ವೇದಿಕೆ ಮುಂದೆ ಇರಿವ ಎಲ್ಲರಿಗೂ ಅಷ್ಟೆ ಜವಾಬ್ದಾರಿ ಇದೆ. ಇವತ್ತು ಜ್ಯೋತಿಯಲ್ಲಿ ಬೆಳಕು ಕಾಣುವ ಅವಶ್ಯಕತೆ ಬಹಳ ಇದೆ. ಆದರೆ ದೀಪದಲ್ಲಿ ಬೆಂಕಿಯನ್ನ ಕಾಣುತ್ತಿರುವ ಜನ ಹೆಚ್ಚು ಬೆಳಿತಾ ಇದ್ದಾರೆ ಎಂದರು.

ಇದನ್ನೂ ಓದಿ: Karnataka Assembly Polls: ಚುನಾವಣೆ ಸಂದರ್ಭದಲ್ಲಿ ಬಿವೈ ವಿಜಯೇಂದ್ರಗೆ ಹೆಚ್ಚಿನ ಜವಾಬ್ದಾರಿ?

ವೀರಶೈವ ಲಿಂಗಾಯಿತ ಸಮಾಜ ದೊಡ್ಡ ಆಲದಮರ ಇದ್ದ ಹಾಗೆ. ನಮ್ಮ ಸಮಾಜದ ನಡತೆ, ಸಮಾಜದ ನಾಯಕರ ನಡತೆ ಅಷ್ಟೆ ಮುಖ್ಯವಾಗಿರುತ್ತದೆ. ಈ ಶತಮಾನ ಯುವಕರಿಗೆ ಸೇರಿರುವ ಶತಮಾನ ಇಂದಿನ ಯುವಕರು ದಾರಿ ತಪ್ಪಿ ಬೇರೆ ವ್ಯಸನಗಳಿಗೆ ತುತ್ತಾಗುತ್ತಿರುವುದನ್ನು ನೋಡುತ್ತಾ ಇದ್ದೇವೆ. ಯುವಕರು ಸರಿ ದಾರಿಯಲ್ಲಿ ಹೋದಲ್ಲಿ ಮಾತ್ರ ದೇಶ ಮುನ್ನಡೆಯಲು ಸಾಧ್ಯ ಎಂದರು.

ಯುವಕರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲಸ ಮಾಡುತ್ತಿದ್ದಾರೆ. ನಾನು ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದೇನೆ. ಏನೇ ಸವಾಲು ಬಂದರೂ ಮೆಟ್ಟಿನಿಲ್ಲುವ ಶಕ್ತಿಯನ್ನ ಯಡಿಯೂರಪ್ಪ ಮತ್ತು ರಾಜ್ಯದ ಜನ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ರಾಜಕೀಯ ಏಳುಬೀಳುಗಳನ್ನ ನಾನು ಹತ್ತಿರದಿಂದ ನೋಡಿದ್ದೇನೆ. ಏನೇ ಸಮಸ್ಯೆ ಬಂದರೂ, ಸೋಲಾದರೂ ಸೋಲನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಂಡು ನಾಡಿನ ಸೇವೆ ಮಾಡಲು ಸಿದ್ದನಿದ್ದೇನೆ. ನಿಮ್ಮ ಆಶಿರ್ವಾದ ಇರಬೇಕು ಅಂತಾ ಕೇಳುತ್ತೇನೆ ಎಂದು ಅಬ್ಬರದ ಭಾಷಣ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ