ನಿದ್ದೆಗೆ ಕಿರಿಕಿರಿ ಆರೋಪ: ಸಿದ್ಧಗಂಗಾ ಮಠದಲ್ಲಿ ಮುಂಜಾನೆ ಸುಪ್ರಭಾತ ಬಂದ್
ಪ್ರತಿ ದಿನ ಬೆಳಗಿನ ಜಾವ ಹಾಕ್ತಿದ್ದ ಸುಪ್ರಭಾತವೂ ಈಗ ನಿದ್ದೆ ಮಾಡಲು ತೊಂದೆಯಾಗುತ್ತಿದೆ ಎನ್ನೋ ಆರೋಪ ಕೇಳಿಬಂದಿದೆ. ಈ ಕಾರಣಕ್ಕೆ ಸುಪ್ರಭಾತ ಹಾಕದಿರಲು ಸ್ವಾಮೀಜಿ ಸೂಚಿಸಿದ್ದಾರೆ ಎನ್ನಲಾಗಿದೆ.
ತುಮಕೂರು: ರಾಜ್ಯದಲ್ಲಿ ಮಾತ್ರವಲ್ಲದೆ ದೇಶ, ವಿದೇಶಗಳಲ್ಲೂ ಪ್ರಸಿದ್ಧಿ ಪಡೆದ ಜಿಲ್ಲೆಯ ಕ್ಯಾತ್ಸಂದ್ರ ಬಳಿಯಿರುವ ಸಿದ್ಧಗಂಗಾ ಮಠದಲ್ಲಿ (Siddaganga Mutt) ಕಳೆದ ಹಲವು ವರ್ಷಗಳಿಂದ ಹಾಕಿಕೊಂಡು ಬರುತ್ತಿದ್ದ ಸುಪ್ರಭಾತವನ್ನು (Siddaganga Mutt Suprabhatha) ಸ್ಥಗಿತಗೊಳಿಸಲಾಗಿದೆ. ಬೆಳಗ್ಗಿನ ಸುಪ್ರಭಾತ ನಿದ್ದೆಗೆ ಭಂಗ ಉಂಟುಮಾಡುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನಲೆ ಮಠದ ಸ್ವಾಮೀಜಿ ಸುಪ್ರಭಾತ ಹಾಕದಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇನ್ನು, ಸುಪ್ರಭಾತದ ವಿರುದ್ಧ ಠಾಣೆ ಮೆಟ್ಟಿಲೇರಿದ ವ್ಯಕ್ತಿ ಗಿರಿನಗರ ನಿವಾಸಿಯಾಗಿದ್ದು, ಬೆಂಗಳೂರಿನ ವಿಧಾನಸೌಧದಲ್ಲಿ ಸರ್ಕಾರಿ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಈತನ ವಿರುದ್ಧ ಭಕ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಸಿದ್ಧಗಂಗಾ ಮಠ ಯಾರಿಗೂ ಗೊತ್ತಿಲ್ಲ ಹೇಳಿ? ಹಳ್ಳಿಯಿಂದ ದಿಲ್ಲಿವರೆಗೂ ದೇಶದಿಂದ ವಿದೇಶದವರೆಗೂ ಪ್ರಸಿದ್ಧವಾಗಿರುವ ಕ್ಷೇತ್ರ ಸಿದ್ದಗಂಗಾ ಮಠ. ಇದುವರೆಗೆ ಯಾರೇ ಆಡಳಿತ ನಡೆಸಿದರೂ ಆ ಸರ್ಕಾರದ ಮುಖ್ಯಸ್ಥರಿಂದಲೂ ಹಿಡಿದು ಪ್ರತಿಯೊಬ್ಬರೂ ಕೂಡ ಮಠಕ್ಕೆ ಬಂದು ಹೋಗಿದ್ದಾರೆ. ಪ್ರಧಾನಿಗಳಿಂದ ಹಿಡಿದು ಎಲ್ಲಾ ಪಕ್ಷದ ನಾಯಕರು ಕೂಡ ಮಠಕ್ಕೆ ಭೇಟಿ ನೀಡಿದ್ದಾರೆ. ಹೀಗಿರುವಾಗ ಮಠದಲ್ಲಿ ಬೆಳಗಿನ ಜಾವ ಪ್ರತಿ ದಿನ ಬೆಳಗಿನ ಜಾವ ಹಾಕುತ್ತಿದ್ದ ಸುಪ್ರಭಾತವೂ ಈಗ ನಿದ್ರೆ ಮಾಡಲು ತೊಂದೆಯಾಗುತ್ತಿದೆ ಎಂದು ವ್ಯಕ್ತಿಯೊಬ್ಬರು ಠಾಣೆ ಮೆಟ್ಟಿಲೇರಿದ್ದಾರೆ.
ಬೆಳಗಿನ ಜಾವ 4.45 ರಿಂದ 5 ಗಂಟೆವೆಗೆ ಹಾಕಲಾಗುತ್ತಿದ್ದ ಸುಪ್ರಭಾತ ಧ್ವನಿವರ್ದಕ ನಿದ್ರೆಗೆ ತೊಂದರೆಯಾಗಿ ಕಿರಿಕಿರಿ ಉಂಟು ಮಾಡುತ್ತಿದೆ. ಇದನ್ನ ನಿಲ್ಲಿಸುವಂತೆ ವ್ಯಕ್ತಿವೋರ್ವ ಕ್ಯಾತ್ಸಂದ್ರ ಪೊಲೀಸ್ ಠಾಣೆ ಹಾಗೂ ತುಮಕೂರು ಎಸ್ಪಿ ಕಚೇರಿಗೆ ಮೇಲ್ ಮೂಲಕ ದೂರು ನೀಡಿದ್ದಾರೆ ಎನ್ನಲಾಗಿದೆ. ಇದನ್ನ ಗಮನಿಸಿದ ಕ್ಯಾತ್ಸಂದ್ರ ಪೊಲೀಸರು ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗ ಶ್ರೀಗಳ ಗಮನಕ್ಕೆ ತಂದಿದ್ದಾರೆ.
ಮಠದ ಸುಪ್ರಭಾತ ಜನರಿಗೆ ತೊಂದರೆಯಾಗುತ್ತಿದ್ದರೆ ಸುಪ್ರಭಾತ ಹಾಕುವುದು ಬೇಡ ಅಂತಾ ಸ್ವಾಮೀಜಿ ಹೇಳಿದ್ದಾರೆ ಎನ್ನಲಾಗಿದೆ. ಪೊಲೀಸರು ಈ ಬಗ್ಗೆ ಹೇಳಿದ ಕೂಡಲೇ ಸರಿ ಆಯ್ತು ಅಂತಾ ಸ್ವಾಮಿಜಿಯವರು ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೂ ಮೇಲ್ ಮೂಲಕ ಧ್ವನಿವರ್ಧಕ ಬಗ್ಗೆ ದೂರು ನೀಡಿರುವ ವ್ಯಕ್ತಿ ಮಠದ ಪಕ್ಕದಲ್ಲೇ ಇರುವ ಗಿರಿನಗರ ನಿವಾಸಿಯಾಗಿದ್ದು, ಬೆಂಗಳೂರಿನ ವಿಧಾನಸೌಧದಲ್ಲಿ ಸರ್ಕಾರಿ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಪೊಲೀಸರು ಆ ವ್ಯಕ್ತಿ ಯಾರು? ಏನು? ಅಂತಾ ಮಾಹಿತಿ ನೀಡಿಲ್ಲ.
ಸದ್ಯ ಮೇಲ್ ಮೂಲಕ ಬಂದ ದೂರನ್ನ ಆಧರಿಸಿ ಮಠಕ್ಕೆ ಮಾಹಿತಿ ನೀಡಿದ ಬಳಿಕ ಸದ್ಯ ಸಿದ್ಧಗಂಗಾ ಮಠದಲ್ಲಿ ಬೆಳಗಿನ ಜಾವ ಹಾಕುತ್ತಿದ್ದ ಸುಪ್ರಭಾತ ನಿಲ್ಲಿಸಲಾಗಿದೆ. ಈ ಬಗ್ಗೆ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದ್ದು, ದೂರು ನೀಡಿರುವ ವ್ಯಕ್ತಿ ಬಗ್ಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೆನಾದರೂ ಆಗಲಿ ಸುಪ್ರಭಾತ ಹಾಕಿ ಅಂತಾ ಸಾಕಷ್ಟು ಭಕ್ತರು ಆಗ್ರಹಿಸಿದ್ದಾರಂತೆ. ಒಟ್ಟಾರೆ ನಿದ್ರೆಗೆ ಕಿರಿಕಿರಿಯಾಗುತ್ತಿದೆ ಎಂದು ವ್ಯಕ್ತಿಯೋರ್ವ ದೂರು ನೀಡಿದ್ದರಿಂದಾಗಿ ಹಲವು ವರ್ಷಗಳಿಂದ ಕೇಳಿಸುತ್ತಿದ್ದ ಸುಪ್ರಭಾತ ನಿಲ್ಲಿಸಲಾಗಿದೆ.
ವರದಿ: ಮಹೇಶ್, ಟಿವಿ9 ತುಮಕೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:18 pm, Mon, 16 January 23