ಬೆಂಗಳೂರು, ಜುಲೈ 5: ಸೀಲ್ಡ್ ತಂಪು ಪಾನೀಯ ಬಾಟಲ್ ಒಂದರಲ್ಲಿ ಜೇಡರ ಹುಳು ಪತ್ತೆಯಾದ ಘಟನೆ ತುಮಕೂರಿನಿಂದ ವರದಿಯಾಗಿದೆ. ತುಮಕೂರಿನ ನಿವಾಸಿಯೊಬ್ಬರು ತಂಪು ಪಾನೀಯ ಬಾಟಲಿಯೊಳಗೆ ಜೇಡ ಹುಳ ಇದ್ದುದಾಗಿ ಆರೋಪಿಸಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಬಹಿರಂಗವಾಗಿದೆ. ಪ್ಯಾಕ್ ಮಾಡಿದ ಆಹಾರ ಮತ್ತು ಪಾನೀಯಗಳಲ್ಲಿ ಕೀಟಗಳನ್ನು ಕಂಡ ಬಗ್ಗೆ ಜನ ದೂರುವ ಹಲವಾರು ಘಟನೆಗಳಲ್ಲಿ ಇದೀಗ ತುಮಕೂರಿನ ಘಟನೆಯೂ ಸೇರ್ಪಡೆಯಾಗಿದೆ.
ಕರ್ನಾಟಕದ ತುಮಕೂರಿನಲ್ಲಿ ಸೀಲ್ಡ್ ತಂಪು ಪಾನೀಯ ಬಾಟಲಿಯೊಳಗೆ ಜೇಡರ ಹುಳ ಕಂಡುಬಂದಿದೆ ಎಂದು ಪಿಟಿಐ ಸುದ್ದಿಸಂಸ್ಥೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋವನ್ನೂ ಲಗತ್ತಿಸಿದೆ.
VIDEO | Spider mite found inside sealed cold drink bottle in Tumkur, Karnataka.
(Full video available on PTI Videos – https://t.co/n147TvqRQz) pic.twitter.com/OddE1s2vQi
— Press Trust of India (@PTI_News) July 5, 2024
ಜೇಡರ ಹುಳು ಪತ್ತೆಯಾದ ತಂಪು ಪಾನೀಯದ ಕಂಪನಿ, ಸ್ಥಳ ಅಥವಾ ತಯಾರಿಕೆಯ ದಿನಾಂಕದ ಕುರಿತು ಯಾವುದೇ ಮಾಹಿತಿ ಈವರೆಗೆ ದೊರೆತಿಲ್ಲ. ಈ ಬಗ್ಗೆ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
ಪ್ಯಾಕ್ ಮಾಡಿದ ಆಹಾರ ಮತ್ತು ಪಾನೀಯಗಳಲ್ಲಿ ಕೀಟಗಳು ಪತ್ತೆಯಾದ ಘಟನೆ ಇದೇ ಮೊದಲಲ್ಲ. ಏಕೆಂದರೆ ಪ್ಯಾಕ್ ಮಾಡಿದ ಆಹಾರಗಳಲ್ಲಿ ಜಿರಳೆಗಳು, ನೊಣಗಳು ಪತ್ತೆಯಾದ ಬಗ್ಗೆ ಈ ಹಿಂದೆಯೂ ಅನೇಕ ದೂರುಗಳು ಕೇಳಿಬಂದಿವೆ.
ಕಳೆದ ತಿಂಗಳು, ಮುಂಬೈ ಮೂಲದ ವ್ಯಕ್ತಿಯೊಬ್ಬರಿಗೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಐಸ್ ಕ್ರೀಮ್ ಕೋನ್‌ನಲ್ಲಿ ಮಾನವ ಬೆರಳಿನ ತುಂಡು ದೊರೆತಿತ್ತು. ಘಟನೆ ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ಈ ಘಟನೆಯು ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ನಂತರ ಪೊಲೀಸರು ಐಸ್ ಕ್ರೀಂ ಉತ್ಪಾದಕ ಕಂಪನಿಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರು. ಬೆರಳಿನ ಎಫ್ಎಸ್ಎಲ್ ವರದಿಯು ಐಸ್ ಕ್ರೀಮ್ ಉತ್ಪಾದನಾ ಘಟಕದ ಉದ್ಯೋಗಿಗೆ ಸೇರಿದ್ದು ಎಂಬುದನ್ನು ಬಹಿರಂಗಪಡಿಸಿತ್ತು.
ಇದನ್ನೂ ಓದಿ: ಐಸ್ಕ್ರೀಂನಲ್ಲಿ ಬೆರಳು ಪತ್ತೆ ಪ್ರಕರಣ: ನೂರಕ್ಕೂ ಹೆಚ್ಚು ಐಸ್ಕ್ರೀಂಗಳು ಸೋಂಕು ಹೊಂದಿರಬಹುದು
ಮತ್ತೊಂದು ಘಟನೆಯಲ್ಲಿ, ನೋಯ್ಡಾದ ಮಹಿಳೆಯೊಬ್ಬರು ಅಮುಲ್ ಐಸ್ ಕ್ರೀಮ್ ಟಬ್‌ನಲ್ಲಿ ಹೆಪ್ಪುಗಟ್ಟಿದ ಶತಪದಿ ಸಿಕ್ಕಿದ್ದಾಗಿ ದೂರಿದ್ದರು. ಅದನ್ನು ಅವರು ಬ್ಲಿಂಕಿಟ್ ಮೂಲಕ ಆರ್ಡರ್ ಮಾಡಿದ್ದರು. ಐಸ್ ಕ್ರೀಮ್ ಟಬ್‌ನ ಫೋಟೋ ಮತ್ತು ವೀಡಿಯೊವನ್ನು ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಕಂಪನಿ ವಿರುದ್ಧ ಪ್ರಕರಣವನ್ನೂ ದಾಖಲಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ