ತುಮಕೂರು: ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂವರ ಅಪರಿಚಿತ ಶವಗಳು ಪತ್ತೆ
ಮೂರು ಅಪರಿಚಿತ ಶವಗಳು ತುಮಕೂರು(Tumakuru)ತಾಲೂಕಿನ ಕುಚ್ಚಂಗಿ ಕೆರೆಯ ಬಳಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ, ಮೃತರ ವಿವರ ಇನ್ನೂ ಪತ್ತೆಯಾಗಿಲ್ಲ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿ ಕಾರಿಗೆ ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.
ತುಮಕೂರು, ಮಾ.22: ತುಮಕೂರು(Tumakuru)ತಾಲೂಕಿನ ಕುಚ್ಚಂಗಿ ಕೆರೆಯ ಬಳಿ ಸುಟ್ಟ ಸ್ಥಿತಿಯಲ್ಲಿ ಮೂರು ಅಪರಿಚಿತ ಶವಗಳು ಪತ್ತೆಯಾಗಿದ್ದು, ಮೃತರ ಗುರುತು ತಿಳಿದುಬಂದಿಲ್ಲ. ನಿನ್ನೆ(ಮಾ.21) ರಾತ್ರಿ ನಡೆದಿರುವ ಘಟನೆ ಇದಾಗಿದ್ದು, ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಕೆರೆಗೆ ಕಾರು ತಳ್ಳಿರುವ ಶಂಕೆ ವ್ಯಕ್ತವಾಗಿದೆ. ಇದು ದಕ್ಷಿಣ ಕನ್ನಡ ಮೂಲದ ರಫಿಕ್ ಎಂಬುವರಿಗೆ ಸೇರಿದ ಕಾರು ಎನ್ನಲಾಗಿದೆ. ಸ್ಥಳಕ್ಕೆ ತುಮಕೂರು ಎಸ್ ಪಿ ಅಶೋಕ್ ಕೆ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಘಟನೆ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನು ಭೇಟಿ ಬಳಿಕ ಮಾತನಾಡಿದ ತುಮಕೂರು ಎಸ್ ಪಿ ಅಶೋಕ್ ಕೆ.ವಿ, ಘಟನೆ ಕುರಿತು ಇವತ್ತು ಮಧ್ಯಾಹ್ನ 1 ಗಂಟೆಗೆ ನಮಗೆ ಮಾಹಿತಿ ಬಂದಿದೆ. ತುಮಕೂರು ಗ್ರಾಮಾಂತರದ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕುಚ್ಚಂಗಿ ಕೆರೆಯ ಮಧ್ಯದಲ್ಲಿ ವೈಟ್ ಕಲರ್ ಮಾರುತಿ ಎಸ್ ಪ್ರೆಸ್ ಕಾರಿನಲ್ಲಿ ಮೂರು ಮೃತದೇಹಗಳು ಸುಟ್ಟು ಸ್ಥಿತಿಯಲ್ಲಿ ಸಿಕ್ಕಿವೆ. ಕೂಡಲೇ ನಮ್ಮ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಗ ಎಫ್ಎಸ್ಎಲ್ ಟೀಂ ಬಂದಿದೆ, ತಪಾಸಣೆ ನಡಿತಿದೆ. ಕಾರಿನ ನಂಬರ್ ಬೇಸ್ ಮೇಲೆ ಕಾರು ಎಲ್ಲಿಂದ ಬಂತು, ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ನಡೆಸಲಾಗಿದೆ. ಈ ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸಿಕೊಂಡು. ಪ್ರಕರಣವನ್ನ ಆದಷ್ಟು ಬೇಗ ಪತ್ತೆ ಮಾಡುತ್ತೇವೆ ಎಂದರು.
ಸಮುದ್ರದಲ್ಲಿ ಮೀನು ಹಿಡಿಯಲೆಂದು ಹೋಗಿದ್ದ ವಿದ್ಯಾರ್ಥಿ, ನೀರಿನ ರಭಸಕ್ಕೆ ಸಿಲುಕಿ ಸಾವು
ಮಂಗಳೂರು: ತೋಟಬೇಂಗ್ರೆಯಲ್ಲಿ ಸಮುದ್ರಕ್ಕೆ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ. ಪ್ರಜೀತ್ ಎಂ ತಿಂಗಳಾಯ(15) ಮೃತಪಟ್ಟ ವಿದ್ಯಾರ್ಥಿ. ಇತ ಸಮುದ್ರದಲ್ಲಿ ಮೀನು ಹಿಡಿಯಲೆಂದು ಹೋಗಿದ್ದ. ಈ ವೇಳೆ ಜೋರಾಗಿ ಬೀಸಿದ ಗಾಳಿ ಹಾಗೂ ನೀರಿನ ರಭಸಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಮನೆಯ ಬಡತನ ಹಾಗೂ ವಿದ್ಯಾಭ್ಯಾಸದ ಖರ್ಚಿಗೆ ತಂದೆಯೊಂದಿಗೆ ಮೀನುಗಾರಿಕೆಗೆ ಹೋಗುತ್ತಿದ್ದ ಮೃತ ಪ್ರಜೀತ್, ಗುರುವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಬಳಿಕ ಪ್ರಜೀತ್ಗಾಗಿ ಸ್ಥಳೀಯರು ಹುಡುಕಾಟ ನಡೆಸಿದ್ದು, ಈ ವೇಳೆ ಗಂಭೀರ ಸ್ಥಿತಿಯಲ್ಲಿ ಪತ್ತೆಯಾದರೂ ಆಸ್ಪತ್ರೆ ಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದ. ಈ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರು ಸಾವು ಪ್ರಕರಣ; ಡಿಸಿಪಿ ಹೇಳಿದ್ದಿಷ್ಟು
ಸಿಂಗನೋಡಿ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದ 4 ಲಕ್ಷ ಹಣ ಜಪ್ತಿ
ರಾಯಚೂರು: ತಾಲೂಕಿನ ಸಿಂಗನೋಡಿ ಚೆಕ್ಪೋಸ್ಟ್ನಲ್ಲಿ ಲಕ್ಷಾಂತರ ನಗದು ಜಪ್ತಿ ಮಾಡಲಾಗಿದೆ. ಯಾಪಲದಿನ್ನಿ ಪಿಎಸ್ಐ ಸಿದ್ದರಾಮ ಬಿದರ್ನಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ಹೈದರಾಬಾದ್ನಿಂದ ರಾಯಚೂರಿನ ಶಕ್ತಿನಗರ ಕಡೆ ಹೊರಟಿದ್ದ ಕಾರಿನಲ್ಲಿ ದಾಖಲೆ ಇಲ್ಲದ 4 ಲಕ್ಷ ಹಣ ಪತ್ತೆಯಾಗಿದೆ. ಪ್ರಭಾಸ್ ಹಾಗೂ ಬ್ಯಾನರ್ಜಿ ಎನ್ನುವವರ ಕಾರು ಇದಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Fri, 22 March 24