ತುಮಕೂರು: ಪುಟಾಣಿ ಅಕ್ಕ- ತಂಗಿಯರು ಮನೆ ಬಳಿಯ ಕಟ್ಟೆಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ (Death) ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಬಳಿಯ ವರಣಸಂದ್ರದಲ್ಲಿ ನಡೆದಿದೆ. ಕವನ (7), ಯೋಕ್ಷಿತಾ (3) ಮೃತ ಅಕ್ಕ ತಂಗಿಯರು. ತಾಯಿ ಮಂಜುಳಾ ಕಟ್ಟೆಯಲ್ಲಿ ಬಟ್ಟೆ ತೊಳೆಯುವ ವೇಳೆ ಸ್ಥಳಕ್ಕೆ ಹೋಗಿದ್ದ ಕವನ, ಯೋಕ್ಷಿತಾ ಆಟವಾಡುತ್ತಿದ್ದರು. ಈ ವೇಳೆ ಕಾಲು ಜಾರಿ ಕಟ್ಟೆಯೊಳಗೆ ಮಕ್ಕಳು ಬಿದ್ದಿದ್ದಾರೆ. ಮಕ್ಕಳನ್ನು (Children) ಕಾಪಾಡಲು ತಾಯಿ (Mother) ಮಂಜುಳಾ ಕೂಡ ಹಾರಿದ್ದಾರೆ. ಮೂವರು ಬಿದ್ದದ್ದನ್ನು ಕಂಡು ಕೂಡಲೇ ಕಟ್ಟೆಗೆ ಊರಿನ ಕೆಲ ವ್ಯಕ್ತಿಗಳು ಹಾರಿದ್ದಾರೆ. ಆದರೆ ತಾಯಿ ಬಚಾವ್ ಆಗಿದ್ದು, ದುರಾದೃಷ್ಟವಶಾತ್ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ.
ನಿನ್ನೆ (ನವೆಂಬರ್ 18) ಸಂಜೆ 5 ಗಂಟೆಗೆ ಈ ಘಟನೆ ನಡೆದಿದ್ದು, ಮಕ್ಕಳನ್ನು ಕಳೆದುಕೊಂಡು ಪೋಷಕರು ರೋಧಿಸುತ್ತಿದ್ದಾರೆ. ಸದ್ಯ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ತುಮಕೂರು: ಶಾಲೆಗೆ ಎರಡು ದಿನಗಳ ರಜೆ ಘೋಷಣೆ
ತುಮಕೂರು ಜಿಲ್ಲಾದ್ಯಂತ ರಾತ್ರಿ ಪೂರ್ತಿ ಬಿಡದೇ ಸುರಿಯುತ್ತಿರುವ ಮಳೆಗೆ ಜನರು ಹೈರಾಣಾಗಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಇಂದು ಮತ್ತು ನಾಳೆ ಜಿಲ್ಲಾದ್ಯಂತ ಅಂಗನವಾಡಿ ಶಿಶುವಿಹಾರ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿದೆ. ಹೆಚ್ಚಿನ ಮಳೆ ಹಿನ್ನೆಲೆಯಲ್ಲಿ ಎರಡು ದಿನಗಳ ರಜೆ ಘೋಷಣೆ ಮಾಡಿದ್ದು, ಜಿಲ್ಲಾದ್ಯಂತ ಅಪಾಯಮಟ್ಟ ಮೀರಿ ಹರಿಯಿತ್ತಿರುವ ನದಿ ಕೆರೆ ಹಳ್ಳ ಕೊಳ್ಳಗಳ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮಳೆಯಿಂದಾಗಿ ಕೆರೆಯಂತಾದ ಎಲೆಕೋಸು ತೋಟ
ತುಮಕೂರು ಜಿಲ್ಲಾದ್ಯಂತ ಭಾರಿ ಮಳೆ ಹಿನ್ನೆಲೆ ಎಲೆಕೋಸು ತೋಟ ಕೆರೆಯಂತಾಗಿದೆ. ತುಮಕೂರು ಹೊರವಲಯದ ಹನುಮಂತಪುರ ರಾಷ್ಟ್ರೀಯ ಹೆದ್ದಾರಿ 48 ರ ಪಕ್ಕದಲ್ಲಿ ಇರುವ ಎಲೆಕೋಸು ಜಮೀನಿನಲ್ಲಿ 3-4 ಅಡಿ ನೀರು ನಿಂತಿದೆ. ರಾಜಗಾಲುವೆಯಿಂದ ಇನ್ನೂ ರಭಸವಾಗಿ ಹರಿಯುತ್ತಿದ್ದು, ಅಪಾಯಮಟ್ಟ ಮೀರಿ ನದಿಗಳು ಹರಿಯುತ್ತಿವೆ.
ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು
ತುಮಕೂರು ಜಿಲ್ಲಾದ್ಯಂತ ಭಾರಿ ಮಳೆ ಹಿನ್ನೆಲೆ ತುಮಕೂರು ನಗರದ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹೀಗಾಗಿ ನಗರ ವಾಸಿಗಳು ಹೈರಾಣಾಗಿದ್ದು, ಮಳೆಗೆ ರಾತ್ರಿಯಿಡಿ ಯುವಕರು ನಿದ್ದೆಗೆಟ್ಟಿದ್ದಾರೆ. ತುಮಕೂರು ಹೊರವಲಯದ ಹನುಮಂತಪುರ ಅಣ್ಣೆತೋಟದಲ್ಲಿ ಮನೆಗೆ ನೀರು ನುಗ್ಗಿದ ಕಾರಣ ಕುಳಿತುಕೊಂಡೆ ಯುವಕರು ರಾತ್ರಿ ಕಳೆದಿದ್ದಾರೆ. ಮನೆಯ ಜೊತೆಗೆ ಟ್ರಾಕ್ಟರ್ ಕೂಡ ನೀರಿನಲ್ಲಿ ಮುಳುಗುವ ಆತಂಕ ಎದುರಾಗಿದೆ. ತುಮಕೂರು ನಗರದ ಬಹುತೇಕ ರಸ್ತೆಗಳು ಜಲಾವೃತ್ತವಾಗಿದ್ದು, ತುಮಕೂರು ನಗರದ ಸದಾಶಿವನಗರ, ಕೋತಿ ತೋಪು, ಆರ್.ಟಿ ನಗರ ರಸ್ತೆಗಳು ಜಲಾವೃತವಾಗಿದೆ.
ಇದನ್ನೂ ಓದಿ:
ಚಿಕ್ಕಬಳ್ಳಾಪುರ: ಸ್ನೇಹಿತರಿಗೆ ಚಾಲೆಂಜ್ ಹಾಕಿ ಕೆರೆಯಲ್ಲಿ ಈಜಲು ಹೋದ ಯುವಕ ನೀರು ಪಾಲು; ಇನ್ನೂ ಸಿಗದ ಮೃತದೇಹ
ಭಾರಿ ಮಳೆಗೆ ಬೆಂಗಳೂರಿನಲ್ಲಿ ಕೆರೆಯಂತಾದ ರಸ್ತೆಗಳು; ವಾಹನ ಸವಾರರ ಪರದಾಟ, ಜನಜೀವನ ಅಸ್ತವ್ಯಸ್ತ