ತುಮಕೂರು: ನಿಂತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಶಿರಾ ಹೊರವಲಯದ ಕಾಮತ್ ಹೊಟೇಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಮೂತ್ರ ವಿಸರ್ಜನೆಗೆ ಎಂದು ಕಾರು ನಿಲ್ಲಿಸಿದಾಗ ಘಟನೆ ನಡೆದಿದೆ. ಓರ್ವ ಮೂತ್ರ ವಿಸರ್ಜನೆಗೆ ತೆರಳಿದ್ದು, ಇನ್ನೂ ಇಬ್ಬರು ಕಾರಿನಲ್ಲಿ ಕುಳಿತಿರುವಾಗ ಹಿಂಬದಿಯಿಂದ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ.
ಗೌಡರ ನಾಗಪ್ಪ 42 ಹಾಗೂ ರಜಾಕ್ ಸಾಬ್ 38 ಮೃತ ದುರ್ದೈವಿಗಳು. ಮೃತರು ಬಾದಾಮಿ ತಾಲೂಕಿನ ಗುಳೇದಗುಡ್ಡ ಮೂಲದವರು ಎನ್ನಲಾಗಿದೆ. ಮದುವೆಗೆಂದು ಬೆಂಗಳೂರಿಗೆ ಬರುತ್ತಿರುವಾಗ ತಡರಾತ್ರಿ ಈ ಘಟನೆ ನಡೆದಿದೆ. ಸದ್ಯ ಶಿರಾ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಹಾವೇರಿ: ಕರಿಯಮ್ಮದೇವಿ ದೇವಾಲಯದಲ್ಲಿದ್ದ ಹುಂಡಿ ಕಳ್ಳತನ
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಇರುವ ಕರಿಯಮ್ಮದೇವಿ ದೇವಾಲಯದಲ್ಲಿ ಹುಂಡಿ ಕಳ್ಳತನವಾಗಿದೆ. ದೇವಸ್ಥಾನದ ಆವರಣದ ಡಬ್ಬಿಯಲ್ಲಿದ್ದ ಇಪ್ಪತ್ತೈದು ಸಾವಿರ ಹಣವನ್ನು ಕಳ್ಳರು ದೋಚಿದ್ದಾರೆ. ಎಂದಿನಂತೆ ಬೆಳಿಗ್ಗೆ ಭಕ್ತರು ದೇವಸ್ಥಾನಕ್ಕೆ ಆಗಮಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: ರಾಬರಿಗೆ ಯತ್ನಿಸಿದ ಖದೀಮರನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು
ಶಿವಮೊಗ್ಗದ ಗಾಂಧಿನಗರದಲ್ಲಿ ಬೆಳ್ಳಂಬೆಳಗ್ಗೆ ಲಾಂಗು, ಮಚ್ಚು ಹಿಡಿದು ರಾಬರಿಗೆ ಯತ್ನಿಸಿದವರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ವಾಕಿಂಗ್‌ಗೆ ಬಂದವರ ಬಳಿ ರಾಬರಿ ಮಾಡಲು ಯತ್ನಿಸಿದ ಮೂವರನ್ನು ಹಿಡಿದ ಸ್ಥಳೀಯರು, ಜಯನಗರ ಪೊಲೀಸರಿಗೊಪ್ಪಿಸಿದ್ದಾರೆ. ಮತ್ತೊಬ್ಬ ದರೋಡೆಕೋರ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ತಡವಾಗಿ ಬಂದ ಹಿನ್ನೆಲೆ ಸ್ಥಳೀಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ: ಎಸಿಬಿಗೆ ಅಧಿಕಾರಿಯ ಬಗ್ಗೆ ಮಾಹಿತಿ ನೀಡಿರುವ ಆರೋಪ; ಪಕ್ಕದ ಮನೆಯವರ ಮೇಲೆ ಹಲ್ಲೆಗೆ ಯತ್ನ
ಎಸಿಬಿ ದಾಳಿಗೆ ಮಾಹಿತಿ ನೀಡಿರುವ ಕಾರಣಕ್ಕೆ ಅಧಿಕಾರಿ ಹಾಗೂ ಆತನ ಸಂಬಂಧಿಕರು ಪಕ್ಕದ ಮನೆಯವರ ಮೇಲೆ ಹಲ್ಲೆಗೆ ಯತ್ನಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರು ನಗರಸಭೆಯ ಯೋಜನಾ ನಿರ್ದೇಶಕ ಎಚ್.ಕೆ.ಕೃಷ್ಣಪ್ಪ ಹಾಗೂ ಸಂಬಂಧಿಕರ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ.
ಎಸಿಬಿ ಅಧಿಕಾರಿಗಳಿಗೆ ತಮ್ಮ ಆಸ್ತಿ ಬಗ್ಗೆ ಮಾಹಿತಿ ನೀಡಿದ ಆರೋಪ ಮಾಡಿ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೆ ನಿತ್ಯ ಕಿರುಕಳ ನೀಡುತ್ತಿದ್ದಾರೆ ಎಂದು ಇದೇ ಗ್ರಾಮದ ಎಚ್. ಜೆ.ಗಣೇಶ ಎಂಬುವವರು ಆರೋಪ ಮಾಡಿದ್ದಾರೆ. ಜುಲೈ 15 ರಂದು ಕೃಷ್ಣಪ್ಪ ಅವರ ಮನೆ ಮೇಲೆ ಎಸಿಬಿ ದಾಳಿ ಮಾಡಿತ್ತು. ಬೆಂಗಳೂರು, ಶಿವಮೊಗ್ಗ ಹಾಗೂ ಸ್ವ ಗ್ರಾಮವಾದ ಚನ್ನಗಿರಿ ತಾಲೂಕಿನ ದೇವರಹಳ್ಳಿಯಲ್ಲಿ ಮನೆ, ತೋಟ, ಚಿನ್ನ ಸೇರಿ ಕೋಟ್ಯಾಂತರ ರೂಪಾಯಿ ಅಕ್ರಮ ಆಸ್ತಿ ಪತ್ತೆಯಾಗಿತ್ತು.
ಶಿವಮೊಗ್ಗದ ಶಿವಪ್ಪ ನಾಯಕ ಬಡಾವಣೆಯಲ್ಲಿ ಒಂದು ಬೃಹತ್ ಮನೆ, ಶಿವಮೊಗ್ಗ ವಿವಿಧ ಕಡೆ 3200 ಚದರ್ ಅಡಿ ಸೈಟ್, ಬೆಂಗಳೂರಿನ ನೆಲಗದ್ದೆಯಲ್ಲಿ 3399 ಅಳತೆಯ ಒಂದು ಸೈಟ್, ವಿಜಯನಗರ ಬಡಾವಣೆಯಲ್ಲಿ ಮೂರು ಅಂತಸ್ತಿನ ಮನೆ,
ಸ್ವಗ್ರಾಮ ದೇವರಹಳ್ಳಿಯಲ್ಲಿ 15 ಜಮೀನು, ಮನೆ, ಒಂದು ಕೆಜಿ ಚಿನ್ನ, 565 ಗ್ರಾಂ ಬೆಳ್ಳಿ, ಇನ್ನೊವಾ ಕಾರ್ ಪತ್ತೆಯಾಗಿತ್ತು. ಈ ಎಲ್ಲ ಮಾಹಿತಿ ಎಸಿಬಿಗೆ ಗಣೇಶ ನೀಡಿದ್ದಾರೆ ಎಂದು ಆರೋಪಿಸಿ ಕಿರುಕಳ ನೀಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದಿದೆ. ಸದ್ಯ ಚನ್ನಗಿರಿ ಪೊಲೀಸ್ ಠಾಣೆಗೆ ಗಣೇಶ್ ದೂರು ನೀಡಿದ್ದಾರೆ.
ಇದನ್ನೂ ಓದಿ:
ಬೆಂಗಳೂರಿನಲ್ಲಿ ರಾತ್ರಿ ಮತ್ತೊಂದು ಶಾಸಕ ಪುತ್ರಿ ಕಾರ್ ಅಪಘಾತ: ಯಲಹಂಕ ಫ್ಲೈ ಓವರ್ ಮೇಲೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಕಾರು
ಶಿವಮೊಗ್ಗದಲ್ಲಿ ಕಾರಿಗೆ ಖಾಸಗಿ ಬಸ್ ಡಿಕ್ಕಿ; ಕಾರು ಚಾಲಕ ಸ್ಥಳದಲ್ಲೇ ಸಾವು
Published On - 10:30 am, Wed, 8 September 21