ಸ್ವತಃ ಎಸ್​ಪಿಯೇ ಕಾರು ಕಳಿಸಿದ್ದಕ್ಕೆ ಪ್ರಕರಣ ಎಂಡ್​ ಆಯ್ತು ಅಂದ್ಕೊಂಡ್ರಾ? ತುರುವೇಕೆರೆ ಪೊಲೀಸರ ಕಾರುಬಾರಿಗೆ ಇಲ್ಲ ಬ್ರೇಕ್!

ಸ್ವತಃ ಎಸ್​ಪಿಯೇ ಕಾರು ಕಳಿಸಿದ್ದಕ್ಕೆ ಪ್ರಕರಣ ಎಂಡ್​ ಆಯ್ತು ಅಂದ್ಕೊಂಡ್ರಾ? ತುರುವೇಕೆರೆ ಪೊಲೀಸರ ಕಾರುಬಾರಿಗೆ ಇಲ್ಲ ಬ್ರೇಕ್!
ತುಮಕೂರು ಎಸ್​ಪಿ ರಾಹುಲ್ ಕುಮಾರ್ ಶಹಾಪುರವಾಡ್

ದೂರುದಾರರು ತುರುವೇಕೆರೆ ಸಿಪಿಐ (ಹಿಂದಿನ ಎಪಿಸೋಡ್​ನ ಕಳಂಕಿತ ಆರೋಪಿ) ನವೀನ್​ ಅವರನ್ನ ಕಾಣಲು ಬಂದರೆ ಠಾಣೆಯವರು ಇದ್ದರೂ ಕೂಡ ಅವರು ಇಲ್ಲ ವಾಪಸ್ ಹೋಗಿ ಅಂತಾ ಅಮಾಯಕ ಮಹಿಳೆಯರನ್ನು ಗೋಳಾಡಿಸುತ್ತಿದ್ದಾರೆ. ಸದ್ಯ ಟಿವಿ9 ಬಳಿ ಸಂತ್ರಸ್ತೆಯರು ಅಳಲು ತೋಡಿಕೊಂಡಿದ್ದು ನ್ಯಾಯಕ್ಕಾಗಿ ಅಂಗಲಾಚಿದ್ದಾರೆ. ನಮಗೆ ರಕ್ಷಣೆ ಹಾಗೂ ನ್ಯಾಯ ಕೊಡಿಸಿ ಅಂತಾ ಕೇಳಿಕೊಂಡಿದ್ದಾರೆ.

TV9kannada Web Team

| Edited By: sadhu srinath

Jan 18, 2022 | 12:48 PM

ತುಮಕೂರು: ಅದ್ಯಾಕೋ ಜನಸಾಮಾನ್ಯರಿಗೆ ನ್ಯಾಯ ಕೊಡಿಸಲು ಅವರಿಗೆ ಇಷ್ಟವಿಲ್ಲ ಅನ್ನಿಸುತ್ತೆ. ಉನ್ನತ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದರೂ ಕೂಡ ತಲೆಕೆಡಿಸಿಕೊಳ್ಳದೇ ಬೇಜಬ್ದಾರಿತನ ತೋರಿದ್ದಾರೆ. ಇದು ಪದೇ ಪದೇ ರಿಪೀಟ್ ರಿಪೀಟ್ ಆಗ್ತಾಲೇ ಇದೆ. ಆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜನರು ಬೇಸತ್ತು ಹೋಗಿದ್ದಾರೆ. ಮೂರು ದಿನಗಳ ಹಿಂದಷ್ಟೇ ಆ ಠಾಣೆಯ ಪೊಲೀಸರ ವಿರುದ್ಧ ಆರೋಪ ಕೇಳಿಬಂದಿತ್ತು. ಹೌದು. ಆ ಪೊಲೀಸರಿಗೆ ಮೇಲಾಧಿಕಾರಿಗಳ ಕಿಂಚಿತ್ತೂ ಭಯವಿಲ್ಲ. ಇತ್ತ ಜನಸಾಮಾನ್ಯರಿಗೆ ರಕ್ಷಣೆ ನೀಡಿ ಒಳ್ಳೆಯದು ಮಾಡೋ ಗುಣ ಮೊದಲೇ ಇಲ್ಲ. ಕೇವಲ ಸಂಬಳಕ್ಕೆ ಕೆಲಸ ಮಾಡ್ತಾ ಇದ್ದಾರೋ ಅನ್ನೋ ಅನುಮಾನಗಳು ಮೂಡಿವೆ. ಪದೇ ಪದೇ ಇದು ರುಜು ಆಗ್ತಾ ಇರೋದು ಜನರ ದೌರ್ಭಾಗ್ಯನೆ ಸರಿ. ಯಸ್! ಜಸ್ಟ್​ ಮೂರು ದಿನಗಳ ಹಿಂದೆ ಎಫ್​ಐಆರ್ ಆದರೂ ಕ್ರಮ ಕೈಗೋಳ್ಳದೇ ಬೇಜವಾಬ್ದಾರಿ ತೋರಿದ್ದ ಪಿಎಸ್​ ಮತ್ತು ಸಿಪಿಐ ಗೆ ತುಮಕೂರು ಎಸ್​ಪಿ ರಾಹುಲ್​ ಕುಮಾರ್​ ತಮ್ಮದೇ ಕಾರು ಕಳಿಸಿ ತಕ್ಕ ಪಾಠ ಕಲಿಸಿದ್ದರು. ಎಸ್ ಪಿ ಕಾರು ಬಂದ ಕೂಡಲೇ ಕ್ರಮಕೈಗೊಂಡು ಆರೋಪಿಯನ್ನ ಕರೆತಂದಿದ್ದರು‌. ಸದ್ಯ ಅದೇ ಮತ್ತೊಂದು ಯಡವಟ್ಟು ನಡೆದಿರೋದು ಬೆಳಕಿಗೆ ಬಂದಿದೆ

ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮೇಲಿನವಲಗೇರೆನಹಳ್ಳಿ ಗ್ರಾಮದಲ್ಲಿ ಕಳೆದ ವರ್ಷ ಅಕ್ಟೋಬರ್ 10 ರಂದು ಮಾದೇಗೌಡ ಹಾಗೂ ನಾಗಮ್ಮರ ನಡುವೆ ಕೌಟುಂಬಿಕ ಕಲಹಕ್ಕೆ ಜಗಳ ನಡೆದಿತ್ತು. ಆಸ್ತಿಗಾಗಿ ಮಾದೇಗೌಡ ನಾಗಮ್ಮ ಹಾಗೂ ಪುತ್ರಿ ಗಂಗರಾಣಿ ಮೇಲೆ ಪದೇ ಪದೇ ದೌರ್ಜನ್ಯ ದಬ್ಬಾಳಿಕೆ ನಡೆಸಿರುವ ಆರೋಪ ಕೇಳಿಬಂದಿದೆ. ನಾಗಮ್ಮಳಿಗೆ ಮೈದನಾಗಿರುವ ಮಾದೇಗೌಡ ಅವರಿಗೆ ಹೋಗಬೇಕಾಗದ ಮೂರೂವರೆ ಎಕರೆ ಜಮೀನು ಕಬಳಿಸಲು ಪ್ಲಾನ್ ಮಾಡಿದ್ದಾನೆ‌‌.

ಅದರಂತೆ ತಾಯಿ ಮಗಳನ್ನ ಓಡಿಸಿದರೇ ಆಸ್ತಿಯಲ್ಲಾ ನಮಗೇ ಸಿಗಲಿದೆ ಅಂತಾ ತಿಳಿದು ಪದೇ ಪದೇ ಗಲಾಟೆ ಮಾಡಿದ್ದಾನೆ‌. ಜೊತೆಗೆ 8-10-21 ರಂದು ಮನೆಗೆ ನುಗ್ಗಿ ದಾಂಧಲೇ ನಡೆಸಿ ಮನೆಯಲ್ಲಿದ್ದ ಟಿವಿ, ಮನೆಯ ಶೀಟ್ ಸೇರಿದಂತೆ ಹಲವಾರು ವಸ್ತುಗಳನ್ನು ನಾಶ ಮಾಡಿರುವ ಆರೋಪ ಕೇಳಿಬಂದಿದೆ. ಅಲ್ಲದೇ 100 ಗ್ರಾಂ ಚಿನ್ನ, ತಾಮ್ರದ ಪಾತ್ರೆಗಳು ಸೇರಿದಂತೆ ಹಲವು ವಸ್ತುಗಳ ಕಳ್ಳತನ ಕೂಡ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ತುರುವೇಕೆರೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೇ ಅಮಾಯಕ ತಾಯಿ ಮಗಳಿಗೆ ಕ್ಯಾರೇ ಎನ್ನದೇ ನಿರ್ಲಕ್ಷ್ಯ ವಹಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಕ್ರಮ ಕೈಗೊಳ್ಳದ ಬಗ್ಗೆ ಸಂತ್ರಸ್ತೆಯರು ನೇರವಾಗಿ ಡಿಜಿ ಅಂಡ್ ಐಜಿಗೆ ದೂರು ನೀಡಿದ್ದಾರೆ. ಅಲ್ಲಿಂದ ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಗೆ ಸೂಚನೆ ಬಂದಿದೆ. ಖಡಕ್ ಪೊಲೀಸ್​​ ಅಧಿಕಾರಿ ರಾಹುಲ್ ಕುಮಾರ್ ಅವರು ದೂರು ದಾಖಲಿಸಿಕೊಂಡು ಕ್ರಮವಹಿಸುವಂತೆ ತುರುವೇಕೆರೆ ಪೊಲೀಸ್ ಠಾಣೆಯ ಪೊಲೀಸರಿಗೆ ಸೂಚಿಸಿದ್ದಾರೆ. ಆದರೆ ತುರುವೇಕೆರೆ ಪಿಎಸ್ ಐ ಹಾಗೂ ಸಿಪಿಐ ನವೀನ್ ಮಾತ್ರ ನಮಗೆ ಸಂಬಂದ ಇಲ್ಲವೇನೋ ಅನ್ನೋ ರೀತಿಯಲ್ಲಿ ಕೇವಲ ಎಫ್​ಐಆರ್ ದಾಖಲಿಸಿಕೊಂಡು ಪ್ರಕರಣ ಕೈಬಿಟ್ಟಿದ್ದಾರೆ.

ಮಾದೇಗೌಡ ವಿರುದ್ಧ ದೌರ್ಜನ್ಯ ಕಳ್ಳತನ ಪ್ರಕರಣ ದಾಖಲಾದರೂ ಕೂಡ ಕ್ರಮವಹಿಸದೇ ಬಿಟ್ಟಿದ್ದಾರೆ ಎನ್ನಲಾಗಿದೆ. ಮಹಿಳೆಯರ ಮೇಲೆ ನಿರಂತರ ಹಿಂಸೆ ನಡೆದರೂ ಕೂಡ ಗಮನಿಸದೇ ನಿರ್ಲಕ್ಷ್ಯ ತೋರಿದ್ದಾರೆ ಅಂತಾ ಆರೋಪ ಕೇಳಿಬಂದಿದೆ. ಅಲ್ಲದೇ ಈ ಬಗ್ಗೆ ಕೇಳಲು ಹೋದರೆ ಠಾಣೆಯ ಎಎಸ್​ಐ ಅದೇ ಶಿವಲಿಂಗಪ್ಪ ವೃದ್ಧೆ ನಾಗಮ್ಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊರಹಾಕಿದ್ದಾರೆ ಎನ್ನಲಾಗಿದೆ.

ಇನ್ನು ದೂರುದಾರರು ತುರುವೇಕೆರೆ ಸಿಪಿಐ (ಹಿಂದಿನ ಎಪಿಸೋಡ್​ನ ಕಳಂಕಿತ ಆರೋಪಿ) ನವೀನ್​ ಅವರನ್ನ ಕಾಣಲು ಬಂದರೆ ಠಾಣೆಯವರು ಇದ್ದರೂ ಕೂಡ ಅವರು ಇಲ್ಲ ವಾಪಸ್ ಹೋಗಿ ಅಂತಾ ಅಮಾಯಕ ಮಹಿಳೆಯರನ್ನು ಗೋಳಾಡಿಸುತ್ತಿದ್ದಾರೆ. ಸದ್ಯ ಟಿವಿ9 ಬಳಿ ಸಂತ್ರಸ್ತೆಯರು ಅಳಲು ತೋಡಿಕೊಂಡಿದ್ದು ನ್ಯಾಯಕ್ಕಾಗಿ ಅಂಗಲಾಚಿದ್ದಾರೆ. ನಮಗೆ ರಕ್ಷಣೆ ಹಾಗೂ ನ್ಯಾಯ ಕೊಡಿಸಿ ಅಂತಾ ಕೇಳಿಕೊಂಡಿದ್ದಾರೆ.

ಒಟ್ಟಾರೆ ತುರುವೇಕೆರೆ ಪೊಲೀಸರು ಕರ್ತವ್ಯ ಮಾಡಲು ಬಂದಿದ್ದಾರೋ ಅಥವಾ ಜನಸಾಮಾನ್ಯರ ಮೇಲೆ ಅನುಚಿತ ದಬ್ಬಾಳಿಕೆ ಮಾಡಿ, ಉಚಿತ ಸಂಬಳ ತಗೊಂಡು ಪ್ರಭಾವಿಗಳ ಪರ ಕೆಲಸ ಮಾಡಲು ಬಂದಿದ್ದಾರೋ ತಿಳಿಯುತ್ತಿಲ್ಲ. ಮೇಲಾಧಿಕಾರಿಗಳು ಹೇಳಿದರೂ ಹೀಗೆ ವರ್ತಿಸಿರುವುದು ನಿಜಕ್ಕೂ ದುರಂತ.

-ಮಹೇಶ್, ಟಿವಿ9, ತುಮಕೂರು

Also Read: ಆರೋಪಿಯ ಅರೆಸ್ಟ್ ಮಾಡಲು ತಮ್ಮದೇ ಕಾರು ಕೊಟ್ಟ ತುಮಕೂರು ಜಿಲ್ಲಾ ಎಸ್​ಪಿ, ಬೆಳಗಿನ ಜಾವಕ್ಕೆ ಆರೋಪಿ ಕೊನೆಗೂ ಅಂದರ್!

Follow us on

Related Stories

Most Read Stories

Click on your DTH Provider to Add TV9 Kannada