ಕೇಂದ್ರ ಸರಕಾರ ಕೊವಿಡ್ ನಿಯಂತ್ರಣಕ್ಕಾಗಿ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. 45 ವರ್ಷ ವಯಸ್ಸಿನ ಮೇಲ್ಪಟ್ಟವರು ಚುಚ್ಚುಮದ್ದು ಹಾಕಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು (ಮಾರ್ಚ್ 24) ಟಿವಿ9 ಕನ್ನಡ ಡಿಜಿಟಲ್ ಲೈವ್ನಲ್ಲಿ ಚರ್ಚಿಸಲಾಗಿದೆ. ಚರ್ಚೆಯಲ್ಲಿ ಡಾ. ಚೇತನ್, ಡಾ.ಸುನೀಲ್, ಡಾ.ಸುಶೀಲ್ ಹಾಗೂ ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ ಪಾಲ್ಗೊಂಡಿದ್ದರು. ಚರ್ಚೆಯನ್ನು ಆ್ಯಂಕರ್ ಆನಂದ್ ಬುರಲಿ ನಡೆಸಿಕೊಟ್ಟರು.
ಈ ಮುಂಚೆ 60 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್ ಪಡೆಯಬಹುದಿತ್ತು. ಇತರೆ ಕಾಯಿಲೆಗೆ ಒಳಪಟ್ಟವರಿಗೆ ಲಸಿಕೆ ಪಡೆಯಲು ಅವಕಾಶ ಮಾಡಿಕೊಡಲಾಗುತ್ತಿತ್ತು. ಇದೀಗ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪಡೆಯಲು ಕೇಂದ್ರ ಸರ್ಕಾರ ಹೇಳಿದೆ. ಈ ಕುರಿತಂತೆ ತಜ್ಞರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಡಾ.ಸುನೀಲ್ ಮಾತನಾಡಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಪಡೆಯಲು ಹೇಳಿರುವ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ನಾವು ಮೊದಲಿನಿಂದಲೂ 50 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಬೇಕು ಎಂದು ಮಾತಾಡಿದ್ದೆವು. ಆದರೆ ಇದೀಗ ಸರ್ಕಾರ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಹೇಳಿರುವುದು ಒಳ್ಳೆಯ ಸಂದೇಶ. 18 ವರ್ಷ ವಯಸ್ಸಿನವರಿಗೂ ವ್ಯಾಕ್ಸಿನ್ ಅವಶ್ಯಕತೆ ಇದ್ದರೆ ಅವರಿಗೆ ಲಸಿಕೆ ಕೊಡಬೇಕು.
ಸರಕಾರ ಇನ್ನಷ್ಟು ಸಡಿಲಿಕೆ ಮಾಡುತ್ತಾ ಎಲ್ಲರಿಗೂ ಲಸಿಕೆ ಕೊಡುವಂತೆ ಆಗುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ.ಚೇತನ್, ಇದೇ ವರ್ಷ ಎಲ್ಲ ವಯಸ್ಸಿನವರು ಲಸಿಕೆ ಪಡೆಯುವ ಅವಶ್ಯಕತೆ ಇದ್ದೇ ಇದೆ ಎಂದಾದಲ್ಲಿ ಲಸಿಕೆ ಪಡೆಯಬೇಕು ಎಂದು ಹೇಳಿದರು. ಇದೀಗ ಜನರಿಗೆ ಸ್ಥೈರ್ಯ ಜಾಸ್ತಿಯಾಗುತ್ತಿದೆ. ಹೆಚ್ಚು ಜನರು ಬಂದು ಲಸಿಕೆ ಪಡೆಯುತ್ತಿದ್ದಾರೆ ಎಂದು ಹೇಳಿದರು. ನಮ್ಮ ಆರೋಗ್ಯದ ಮೇಲೆ ನಮಗೆ ಕಾಳಜಿ ಇರಬೇಕು. ಇದಕ್ಕೆ ಉತ್ತಮ ಆಹಾರ ವ್ಯವಸ್ಥೆ, ವ್ಯಾಯಾಮವನ್ನು ರೂಢಿಗೆ ತಂದುಕೊಳ್ಳಿ ಇದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಮಾತನಾಡಿದರು.
ಸಾವಿರಾರು ಜನ ಬಂದು ಲಸಿಕೆ ಪಡೆಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದು ಸತ್ಯವೇ ಎಂಬ ಮಾತಿಗೆ ಉತ್ತರಿಸಿದ ಡಾ.ಸುಶೀಲ್ ಮಾತನಾಡಿ, ಇದೀಗ ಹೆಚ್ಚು ಜನ ಬಂದು ಲಸಿಕೆ ಪಡೆಯುತ್ತಿದ್ದಾರೆ. ಮೊದಲು ಸ್ಲಂಗಳಲ್ಲಿ ವಾಸುತ್ತಿರುವ ಜನ ಅಥವಾ ಇತರೆ ಜನ ಲಸಿಕೆ ಪಡೆಯಲು ಹೆಚ್ಚು ಬರುತ್ತಿರಲಿಲ್ಲ. ಆದರೆ ಇದೀಗ ಕೇಂದ್ರ ಸರಕಾರ ತಂದ ಹೊಸ ಮಾರ್ಗಸೂಚಿಯಂತೆ ಹೆಚ್ಚು ಜನ ಬಂದು ಲಸಿಕೆ ಪಡೆಯುತ್ತಿದ್ದಾರೆ. ಕೊರೊನಾ ಕೇಸ್ ದಿನೇದಿನೇ ಹೆಚ್ಚಾಗುತ್ತಿದೆ. ಅದರ ಜೊತೆ ಜೊತೆಗೇ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆಯೂ ವೇಗವಾಗಿ ಸಾಗಬೇಕು. ಜನರಲ್ಲಿ ಲಸಿಕೆಯ ಬಗ್ಗೆ ಜಾಗೃತಿ ಹೆಚ್ಚಾಗುತ್ತಾ ಹೋಗುತ್ತದೆ. ಮೊದಲು ಕೊರೊನಾಕ್ಕೆ ನಿಯಮಾವಳಿ ತಂದಾಗ ಯಾರೂ ನಿಯಮ ಪಾಲಿಸುತ್ತಿರಲಿಲ್ಲ. ಕೊರೊನಾ ಬಗ್ಗೆ ಜನರಿಗೆ ತಿಳಿಯುತ್ತಾ ಹೋದಂತೆ ಜನರೂ ಕೂಡಾ ಅರಿತರು. ಅದೇ ರೀತಿ ಲಸಿಕೆಯ ಬಗೆಗೂ ಜನರಿಗೆ ಅರಿವಾಗಲು ಸಮಯ ಹಿಡಿದಿದೆ. ಇದೀಗ ಜನ ಹೆಚ್ಚು ಲಸಿಕೆ ಪಡೆಯಲು ಬರುತ್ತಿದ್ದಾರೆ ಎಂದು ಅಭಿಪ್ರಾಯ ಹಂಚಿಕೊಂಡರು.
ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ ಮಾತನಾಡಿ, ಅಂದಾಜಿಗೆ ಒಂದು ದಿನಕ್ಕೆ ಸುಮಾರು 2 ಲಕ್ಷ ಜನ ಲಸಿಕೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಸರಿ ಸುಮಾರು 45 ವರ್ಷ ಮೇಲ್ಪಟ್ಟವರಲ್ಲಿ 70 ಲಕ್ಷ ಜನ ಇದ್ದಾರೆ. ಎಲ್ಲರಿಗೂ ಲಸಿಕೆ ಸೌಲಭ್ಯವಾಗುತ್ತದೆ ಯಾರಿಗೂ ಯಾವುದೇ ಕೊರತೆಯಾಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: Tv9 Digital Live | ಪೊಲೀಸ್ ಇಲಾಖೆ ಮೇಲೆ ರಾಜಕಾರಣಿಗಳ ಹಿಡಿತ ತಪ್ಪಬೇಕಿದೆ
ಇದನ್ನೂ ಓದಿ: TV9 Digital Live | ಯುವಜನರಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ಕೊರೊನಾ; ತಜ್ಞರ ಸಲಹೆ ಏನು?