ಮಹಾರಾಷ್ಟ್ರ ಮತ್ತೆ ಗಡಿ ವಿವಾದದ ಕ್ಯಾತೆ ತೆಗೆದಿದೆ. ಸಂಸತ್ತಿನಲ್ಲಿ ಈ ವಿಚಾರವನ್ನೆತ್ತಿ ಮುಖಭಂಗ ಮಾಡಿಸಿಕೊಂಡರೂ ಮಹಾರಾಷ್ಟ್ರ ಬಿಡುತ್ತಿಲ್ಲ. ಈಗ ಗಡಿ ಭಾಗದಲ್ಲಿ ವ್ಯಾಪಾರ ವ್ಯವಹಾರಕ್ಕೆ ತೊಂದರೆ ಕೊಡಲು ಎಮ್ಇಎಸ್ ಮುಂದಾಗಿದೆ. ಈ ಕುರಿತಾಗಿ ಟಿವಿ9 ಕನ್ನಡ ಡಿಜಿಟಲ್ ಬುಧವಾರ ಲೈವ್ ಚರ್ಚೆ ನಡೆಸಿದೆ. ಕನ್ನಡ ಪರ ಹೋರಾಟಗಾರರಾದ ಪ್ರವೀಣ್ ಶೆಟ್ಟಿ, ಕನ್ನಡ ಕ್ರಿಯಾ ಸಂಘದ ಅಧ್ಯಕ್ಷರಾದ ಅಶೋಕ್ ಚಂದರಗಿ ಹಾಗೂ ವಕೀಲರಾದ ರಮೇಶ್ ಚಂದ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆ್ಯಂಕರ್ ಮಾಲ್ತೇಶ್ ಕಾರ್ಯಕ್ರಮ ನಡೆಸಿಕೊಟ್ಟರು.
ವಕೀಲರಾದ ರಮೇಶ್ ಚಂದ್ರ ಮಾತನಾಡಿ, ಬೆಳಗಾವಿ ಜನ ಮಹಾರಾಷ್ಟ್ರಕ್ಕೆ ಹೋಗಬೇಕಂತಿಲ್ಲ. ಅಲ್ಲಿಗೆ ಹೋದರೆ ಜನರಿಗೆ ಅನುಕೂಲವೂ ಇಲ್ಲ. ಜನರು ವಾಸ್ತವತೆಯನ್ನು ಅರಿತುಕೊಳ್ಳುತ್ತಿಲ್ಲ. ನಾವು 2021ರಲ್ಲಿ ಇದ್ದೇವೆ. 2004 ರಿಂದ ಪ್ರಾರಂಭವಾದ ಗಡಿಕ್ಯಾತೆ ಇನ್ನೂ ಮುಗಿದಿಲ್ಲ. ಬೆಳಗಾವಿ, ಕಾರವಾರ ಜಿಲ್ಲೆಗಳೆಲ್ಲ ಬೇಕು ಎಂದು ಮಹಾರಾಷ್ಟ್ರ ಮಾತನಾಡುತ್ತಿತ್ತು. ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಎಂಬ ಕ್ಯಾತೆ ತೆಗೆದಿತ್ತು. ಆದರೆ ಕೆಂದ್ರ ಸರ್ಕಾರ ಇದಕ್ಕೆ ಒಪ್ಪಿಲ್ಲ. ಇದು ಸಮಾಧಾನಕರ ಸಂಗತಿ. ಕೇಂದ್ರಾಡಳಿತ ಪ್ರದೇಶವನ್ನು ಮಾಡಬೇಕು ಅಂತ ನಿರ್ಧಾರ ಮಾಡಿದ್ದರೆ, ಒಂದೊಂದೇ ಭಾಗವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಸಾರ್ವಜನಿಕರ ವಸ್ತುವನ್ನು ಹಾಳು ಮಾಡುವುದು. ಆಸ್ತಿ-ಪಾಸ್ತಿ ನಾಶ ಮಾಡುವವರನ್ನು ಮಟ್ಟ ಹಾಕಬೇಕು. ಕನ್ನಡದ ವಿಚಾರ ಬಂದಾಗ, ನಮ್ಮ ಸರಕಾರದಿಂದ ಏನನ್ನೂ ನಿರೀಕ್ಷಿಸುವುದು ಕಷ್ಟ. ಸರಕಾರಕ್ಕೆ ಬದ್ಧತೆ ಇಲ್ಲ ಈ ಕುರಿತಾಗಿ ಸರಕಾರ ಸ್ಪಷ್ಟವಾಗಿ ಮುನ್ನಡೆಯಲೇ ಬೇಕು ಎಂದು ರಮೇಶ್ ಚಂದ್ರ ಮಾತನಾಡಿದರು.
ಕನ್ನಡ ಕ್ರಿಯಾ ಸಂಘದ ಅಧ್ಯಕ್ಷರಾದ ಅಶೋಕ್ ಚಂದರಗಿ ಮಾತನಾಡಿ, 2004ರಲ್ಲಿ ಮಹಾರಾಷ್ಟ್ರದವರು ಗಡಿಕ್ಯಾತೆ ಕುರಿತು ಚರ್ಚೆ ಪ್ರಾರಂಭಗೊಳಿಸಿದ್ದಾರೆ. ಆದರೆ, ಅವರು ಹೇಳುವಂತೆ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಜೊತೆಗೆ ಮಹಾರಾಷ್ಟ್ರದ ನಿಲುವು ತಪ್ಪು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ತೆರೆದಿಡಬೇಕಿದೆ. ನಮ್ಮ 25 ಲೋಕಸಭಾ ಸದಸ್ಯರೂ ಸುಪ್ರೀಂ ಕೋರ್ಟ್ ಮುಂದೆ ಹೋಗಿ ಮಾತನಾಡಬೇಕು. ಈಗಿನ ಮುಖ್ಯಮಂತ್ರಿಗಳಿಗೆ ಕರ್ನಾಟಕ ಗಡಿ ಭಾಗದ ಕುರಿತು ಯಾವುದೇ ಲಕ್ಷ್ಯವಿಲ್ಲ. ಸುಪ್ರೀಂ ಕೋರ್ಟ್ನಲ್ಲಿನ ಕೇಸ್ಗೆ ಸಂಬಂಧಿಸಿ ಅರ್ಜಿಯನ್ನು ತಿರಸ್ಕರಿಸುವಂತೆ ಮಾಡಿದರೆ ಮಾತ್ರ ಈ ಗೊಂದಲ ಇತ್ಯರ್ಥವಾಗುತ್ತದೆ ಎಂದು ತಿಳಿಸಿದ್ದಾರೆ.
ಕನ್ನಡ ಪರ ಹೋರಾಟಗಾರರಾದ ಪ್ರವೀಣ್ ಶೆಟ್ಟಿ ಮಾತನಾಡಿ, ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆಯಿಂದ ಮಹಾರಾಷ್ಟ್ರದ ಗಡಿ ಭಾಗದವರೆಗೆ ಹೋಗಿ ಕನ್ನಡ ಧ್ವಜವನ್ನು ಹಾರಿಸುತ್ತೇವೆ. ನಮ್ಮನ್ನು ತಡೆಯುವವರಿಗೆ ಸವಾಲು ಹಾಕುತ್ತಿದ್ದೇವೆ. ಮುಂಬೈ ನಗರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು. ನಮ್ಮ ಮೇಲೆ ಇಂದು ಶಿವಸೇನೆ ದಾಳಿ ಮಾಡುತ್ತಿದೆ. ಕರ್ನಾಟಕ ಅಚ್ಚ ಪ್ರದೇಶ ಯಳ್ಳೂರಿನಲ್ಲಿ ಮಹಾರಾಷ್ಟ್ರಕ್ಕೆ ಸೇರಿದೆ ಎಂದು ನಾಮಫಲಕ ಹಾಕಿದಾಗಲೂ ನಮ್ಮ ಸರಕಾರದಿಂದ ಆ ನಾಮಫಲಕವನ್ನು ತೆಗೆದು ಹಾಕಲು ಆಗಲಿಲ್ಲ. ಕನ್ನಡದ ಧ್ವಜವನ್ನು ಕಿತ್ತು ಹಾಕಲು ನಮ್ಮ ಕರ್ನಾಟಕಕ್ಕೆ ಬರುತ್ತಾರೆ ಎಂದಾದರೆ ನಮ್ಮ ಸರ್ಕಾರ ಕಣ್ಣು ಮುಚ್ಚು ಕುಳಿತಿದೆಯಾ? ಕನ್ನಡಿಗರು ನಮ್ಮ ಜಾಗವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: TV9 Digital Live: ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಬೇಕಿಲ್ಲ; ಮಾಸ್ಕ್-ಸಾಮಾಜಿಕ ಅಂತರ ಬೇಕೇ ಬೇಕು
ಇದನ್ನೂ ಓದಿ: TV9 Digital Live: ಒಂದು ದೇಶ-ಒಂದು ಚುನಾವಣೆ; ಅರ್ಥಪೂರ್ಣ ಚರ್ಚೆಗೆ ವೇದಿಕೆ ಕಲ್ಪಿಸಿದ ಟಿವಿ9 ಡಿಜಿಟಲ್ ಲೈವ್
Published On - 6:26 pm, Wed, 17 March 21