ಕೊಡಗು: ಸಾವು ಯಾರನ್ನು ಹೇಗೆ ಹಿಂಬಾಲಿಸುತ್ತದೆ ಎಂದು ಹೇಳಲಾಗುವುದಿಲ್ಲ. ವಿಧಿಯಾಟಕ್ಕೆ ಇಬ್ಬರು ಅಮಾಯ ಮಕ್ಕಳು ಬಲಿಯಾಗಿದ್ದಾರೆ. ಜೋಕಾಲಿ ಆಡುವಾಗ ಸೀರೆ ಉರುಳಾಗಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಗಣಗೂರಲ್ಲಿ ನಡೆದಿದೆ.
ಅಮ್ಮನ ಸೀರೆ ಬಳಸಿ ಜೋಕಾಲಿ ಆಡುತ್ತಿದ್ದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಗಣಗೂರಿನ ನಿವಾಸಿ ಕಾರ್ಮಿಕ ರಾಜು ಹಾಗೂ ಜಯಂತಿ ಎಂಬುವರ ಪುತ್ರಿ ಮಣಿಕ್ ಶಾ(14), ಪೂರ್ಣೇಶ್ (12) ಮೃತ ಮಕ್ಕಳು. ಮನೆಯಲ್ಲಿ ಇಬ್ಬರೇ ಜೋಕಾಲಿ ಆಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.
ಅಟವಾಡುತ್ತಿದ್ದಾಗ ಜೋಕಾಲಿ ಉರುಳಾಗಿ ಸುತ್ತಿಕೊಂಡ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಕೆಲಸಕ್ಕೆ ತೆರಳಿದ್ದ ತಾತ ರಾಮಣ್ಣ ಮನೆಗೆ ಬಂದು ನೋಡಿದಾಗ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಅಕ್ಕ-ತಮ್ಮ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ತಕ್ಷಣವೇ ರಾಮಣ್ಣ ಸೀರೆಯನ್ನು ಕತ್ತರಿಸಿ ಮಕ್ಕಳನ್ನು ಕೆಳಗಿಳಿಸಿದ್ದಾರೆ. ಆದರೆ ಈ ವೇಳೆಗಾಗಲೇ ಇಬ್ಬರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಸೋಮವಾರಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗೋವಾ ಪೊಲೀಸರ ಕಿರುಕುಳಕ್ಕೆ ಬೇಸತ್ತು ವಿಜಯಪುರದ ಮೂವರು ಆತ್ಮಹತ್ಯೆ?