ಎಂಟು ತೆಂಗಿನ ಮರದ ನಂಟು ಕಲ್ಪನೆಯೊಂದಿಗೆ ನೂತನ ಪ್ರಯೋಗ; ಮಾರುಕಟ್ಟೆಗೆ ಕಲ್ಪರಸ ಬಿಡುಗಡೆಗೊಳಿಸಲು ಉಡುಪಿಯಲ್ಲಿ ಸಿದ್ಧತೆ

| Updated By: preethi shettigar

Updated on: Jun 25, 2021 | 3:48 PM

ಕುಂದಾಪುರ ತಾಲೂಕಿನ ಜಪ್ತಿ ಎಂಬಲ್ಲಿ ಕಲ್ಪರಸ ತೆಗೆಯುವ ಸಂಸ್ಕರಣಾ ಘಟಕ ಆರಂಭಿಸಲಾಗಿದೆ. 14 ಯುವಕರಿಗೆ 45 ದಿನದ ತರಬೇತಿ ಈಗಾಗಲೇ ನೀಡಲಾಗಿದೆ. ತೆಂಗಿನ ಮರ ಹತ್ತುವುದು, ಹೊಂಬಾಳೆಗೆ ಕಟ್ಟು ಬಿಗಿದು ಐಸ್ ಬಾಕ್ಸ್ ಜೋಡಿಸುವುದು, ದಿನಕ್ಕೇರಡು ಬಾರಿ ಕಲ್ಪರಸ ತೆಗೆದು ಕೆಡದಂತೆ ಕಾಪಾಡುವ ತರಬೇತಿ ಕೊಡಲಾಗುತ್ತಿದೆ.

ಎಂಟು ತೆಂಗಿನ ಮರದ ನಂಟು ಕಲ್ಪನೆಯೊಂದಿಗೆ ನೂತನ ಪ್ರಯೋಗ; ಮಾರುಕಟ್ಟೆಗೆ ಕಲ್ಪರಸ ಬಿಡುಗಡೆಗೊಳಿಸಲು ಉಡುಪಿಯಲ್ಲಿ ಸಿದ್ಧತೆ
ಹೊಂಬಾಳೆಗೆ ಕಟ್ಟು ಬಿಗಿದು ಐಸ್ ಬಾಕ್ಸ್ ಜೋಡಿಸುತ್ತಿರುವುದು
Follow us on

ಉಡುಪಿ: ಕೊರೊನಾ ಎರಡನೇ ಅಲೆಯಿಂದ ಜನರು ಚೇತರಿಸಿಕೊಂಡರೂ, ಲಾಕ್​ಡೌನ್ ಉಂಟು ಮಾಡಿದ ಆರ್ಥಿಕ ಹೊಡೆತದಿಂದ ಮೇಲೇಳುವುದು ಅಷ್ಟು ಸುಲಭವಲ್ಲ. ಹೀಗಾಗಿ ಆರ್ಥಿಕವಾಗಿ ಸಧೃಡರಾಗಲು ವೃತ್ತಿಯ ಜೊತೆಗೆ ನಾನಾ ಉಪವೃತ್ತಿಗಳನ್ನು ಆಶ್ರಯಿಸಿವುದು ಅನಿವಾರ್ಯವಾಗಿದೆ. ಅದರಂತೆ ಹೊಸದೊಂದು ಯೋಜನೆಗೆ ಮುಂದಾಗಿದ್ದು, ಕರಾವಳಿ ಭಾಗದಲ್ಲಿ ಎಂಟು ತೆಂಗಿನ ಮರದ ನಂಟು ಎಂಬ ಕಲ್ಪನೆಯೊಂದು ಜಾರಿಗೆ ಬಂದಿದೆ. ನಿಮ್ಮ ತೋಟದಲ್ಲಿ ಎಂಟು ತೆಂಗಿನ ಮರವಿದ್ದರೆ ಸಾಕು, ಮೂರು ಹೊತ್ತು ನೆಮ್ಮದಿಯ ಊಟ ಮಾಡುವ ಮಾರ್ಗವೊಂದು ಇದೆ ಎಂಬ ಆಶಯದೊಂದಿಗೆ ಮಾರುಕಟ್ಟೆಗೆ ಕಲ್ಪರಸ ಬಿಡುಗಡೆಗೊಳಿಸಲು ಉಡುಪಿಯಲ್ಲಿ ಸಿದ್ಧತೆ ಮಾಡಲಾಗಿದೆ.

ಉಡುಪಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತೆಂಗು. ಬಹುಪಯೋಗಿ ತೆಂಗಿನ ಮರವೀಗ ತನ್ನ ಹೊಸ ಸಾಧ್ಯತೆಯಿಂದ ಸುದ್ದಿಯಾಗುತ್ತಿದೆ. ಕೊರೊನಾ ಕಾಲಘಟ್ಟದಲ್ಲಿ ಜನರ ಕಿಸೆ ತುಂಬಿಸುವ ಕಾಯಕಕ್ಕೆ ಕಲ್ಪರಸ ಕಾಮಧೇನುವಾಗಿ ಸುರಿಯಲಿದೆ. ತೆಂಗು ಬೆಳೆಗಾರರ ಹಿತರಕ್ಷಣೆ ಹಾಗೂ ತೆಂಗು ಉತ್ಪನ್ನಗಳ ಮೌಲ್ಯವರ್ಧನೆಯ ದೃಷ್ಟಿಯಿಂದ ಉಡುಪಿಯಲ್ಲಿ ಈ ಯೋಜನೆಯನ್ನು ಚಾಲ್ತಿಗೆ ತರಲಾಗಿದೆ.

ಕುಂದಾಪುರ ತಾಲೂಕಿನ ಜಪ್ತಿ ಎಂಬಲ್ಲಿ ಕಲ್ಪರಸ ತೆಗೆಯುವ ಸಂಸ್ಕರಣಾ ಘಟಕ ಆರಂಭಿಸಲಾಗಿದೆ. 14 ಯುವಕರಿಗೆ 45 ದಿನದ ತರಬೇತಿ ಈಗಾಗಲೇ ನೀಡಲಾಗಿದೆ. ತೆಂಗಿನ ಮರ ಹತ್ತುವುದು, ಹೊಂಬಾಳೆಗೆ ಕಟ್ಟು ಬಿಗಿದು ಐಸ್ ಬಾಕ್ಸ್ ಜೋಡಿಸುವುದು, ದಿನಕ್ಕೇರಡು ಬಾರಿ ಕಲ್ಪರಸ ತೆಗೆದು ಕೆಡದಂತೆ ಕಾಪಾಡುವ ತರಬೇತಿ ಕೊಡಲಾಗುತ್ತಿದೆ. ಜುಲೈ ಮೊದಲ ವಾರದಲ್ಲಿ ಅಧಿಕೃತವಾಗಿ ಕಲ್ಪರಸ ಸಿಗುವ ಔಟ್ ಲೆಟ್​ಗಳು ಆರಂಭವಾಗಿಲಿದೆ. ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೀಡಾದ ಸಣ್ಣಪುಟ್ಟ ರೈತರಿಗೆ ಈ ಹೊಸ ಉದ್ಯಮ ಆಶಾದೀಪವಾಗುವ ಭರವಸೆಯಿದೆ ಎಂದು ಉ.ಕಾ.ಸ ಸಂಸ್ಥೆಯ ನಿರ್ದೇಶಕರಾದ ಸತ್ಯನಾರಾಯಣ ಉಡುಪ ತಿಳಿಸಿದ್ದಾರೆ.

ರೈತರೇ ಸೇರಿಕೊಂಡು ಈ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಭಾರತೀಯ ಕಿಸಾನ್ ಸಂಘ ನೇತೃತ್ವದಲ್ಲಿ ಉ.ಕಾ.ಸ ಎಂಬ ಸಂಸ್ಥೆಯನ್ನು ಕಲ್ಪರಸ ಮಾರುಕಟ್ಟೆ ನಿರ್ವಹಣೆಗಂತಲೇ ಹುಟ್ಟುಹಾಕಿದ್ದು, ಯುವ ಜನಾಂಗವನ್ನು ಈ ಉದ್ಯಮಕ್ಕೆ ಆಕರ್ಷಿಸಲಾಗುತ್ತಿದೆ. ಸದ್ಯ ಉಡುಪಿ ಜಿಲ್ಲೆಯಲ್ಲಿ 1,028 ರೈತರು ಸಂಸ್ಥೆಗೆ ಶೇರುದಾರರಾಗಿದ್ದು, ಮುಂದಿನ 5 ವರ್ಷದಲ್ಲಿ 5 ಸಾವಿರ ಕುಟುಂಬ ಸೇರ್ಪಡೆಯಾಗಲಿದೆ.

ಒಂದು ರೈತ ಕುಟುಂಬಕ್ಕೆ 8 ತೆಂಗಿನ ಮರಗಳಿಂದ ಮಾತ್ರ ಕಲ್ಪರಸ ಸಂಗ್ರಹಿಸುವ ಅವಕಾಶವಿದೆ. ಒಂದು ಮರದಿಂದ ಪ್ರತಿದಿನ 2 ಲೀಟರ್ ಸಿಹಿ ರಸ ಇಳಿಯಲಿದೆ. ವರ್ಷಕ್ಕೆ 8 ಮರದಿಂದ 5,000 ಲೀಟರ್ ರಸ ಇಳಿದರೆ ವಾರ್ಷಿಕ ಸುಮಾರು 1 ಲಕ್ಷ ರೂಪಾಯಿ ಆದಾಯ ಸಿಗುತ್ತದೆ. ಕಲ್ಪರಸ ತೆಗೆಯುವ ತಜ್ಞ ಯುವಕರು ಲೀಟರ್​ಗೆ 25 ರೂಪಾಯಿ, ಪಿಎಫ್, ಇಎಸ್​ಐ ಸೌಲಭ್ಯ ಪಡೆಯಲಿದ್ದಾರೆ.

ಹೊಂಬಾಳೆಯಿಂದ ಪ್ರತಿದಿನ 2 ರಿಂದ 3 ಬಾರಿ ಕಲ್ಪರಸ ಇಳಿಸಬಹುದು. ಪ್ರತಿ ಗ್ರಾಮಗಳಲ್ಲಿ ಕನಿಷ್ಟ 20ರಿಂದ 30 ಮಂದಿ ರೈತರನ್ನೊಳಗೊಂಡ ಸಹಕಾರ ಸಂಘ ರಚನೆಯಾದರೆ ಕೊರೊನಾ ಸಂಕಷ್ಟ ಕಾಲದಲ್ಲಿ ಪ್ರಧಾನಿ ಮೋದಿ ಹೇಳಿದಂತೆ ರೈತರ ವರಮಾನ ದಪ್ಪಟ್ಟಾಗಲಿದೆ.

ಇದನ್ನೂ ಓದಿ:

ಉಡುಪಿ ಕೃಷ್ಣ ಮಠದ ವಿದ್ಯುತ್ ವ್ಯವಸ್ಥೆಯನ್ನು ಸೋಲಾರ್ ಸಿಸ್ಟಮ್​ಗೆ ವರ್ಗಾವಣೆ; ಪರಿಸರ ಸಂರಕ್ಷಣೆಗೆ ಮಹತ್ವದ ನಿರ್ಧಾರ

ರೈತರ ಅನುಕೂಲಕ್ಕಾಗಿ ಹೊಸ ಪ್ರಯೋಗ; ಕುಂದಾಪುರದಲ್ಲಿ 50,000 ಟ್ರೇ ಭತ್ತದ ಸಸಿ ಮಾಡುವ ನರ್ಸರಿ ಆರಂಭ