Kambala | ಕಂಬಳ ಗದ್ದೆಗೆ ಇಳಿದ ಬಾಲಕಿ.. ಉಡುಪಿಯ ಕುವರಿಯಿಂದ ಹೊಸ ದಾಖಲೆ

| Updated By: ಸಾಧು ಶ್ರೀನಾಥ್​

Updated on: Mar 05, 2021 | 5:45 PM

ಚೈತ್ರಾ ಭಟ್ 11 ವರ್ಷ ವರ್ಷದವಳಾಗಿದ್ದು, ಆರನೇ ತರಗತಿ ಕಲಿಯುತ್ತಿದ್ದಾಳೆ. ತಾನು ಕೂಡ ಕಂಬಳದಲ್ಲಿ ಕೋಣಗಳನ್ನು ಓಡಿಸಬೇಕು, ಕಂಬಳ ಕ್ಷೇತ್ರದ ಹುಸೇನ್ ಬೋಲ್ಟ್ ಶ್ರೀನಿವಾಸ ಗೌಡರಂತೆ ಮಿಂಚಬೇಕು ಎಂದು ಕನಸು ಕಾಣುತ್ತಿದ್ದಾಳೆ.

Kambala | ಕಂಬಳ ಗದ್ದೆಗೆ ಇಳಿದ ಬಾಲಕಿ.. ಉಡುಪಿಯ ಕುವರಿಯಿಂದ ಹೊಸ ದಾಖಲೆ
ಕಂಬಳದಲ್ಲಿ ಭಾಗಿಯಾದ ಚೈತ್ರಾ ಭಟ್
Follow us on

ಉಡುಪಿ: ಕೆಸರು ಗದ್ದೆಯಲ್ಲಿ ಕೊಬ್ಬಿದ ಕೋಣಗಳ ಓಟ, ತುಳುನಾಡಿನ ಅಪ್ಪಟ ಜನಪದ ಆಟವಾಗಿದ್ದು, ಇದು ಕರಾವಳಿಯ ಹೆಮ್ಮೆಯ ಕಂಬಳ. ಹೊಸ ಹೊಸ ದಾಖಲೆ ಮೂಲಕ ಸುದ್ದಿಯಾಗುತ್ತಿದ್ದ ಕಂಬಳದಲ್ಲಿ ಸದ್ಯ ಪುಟ್ಟ ಬಾಲಕಿ ಕಂಬಳ ಗದ್ದೆಗೆ ಇಳಿದು ಇನ್ನೊಂದು ಇತಿಹಾಸ ಬರೆದಿದ್ದಾಳೆ. ಕಳೆದ ವಾರ ಮಿಯಾರಿನಲ್ಲಿ ನಡೆದ ಕಂಬಳ ಕೂಟದಲ್ಲಿ ಭಾಗವಹಿಸಿದ್ದು, ಬಾಲಕಿಯೇ ಮುಖ್ಯ ಆಕರ್ಷಣೆಯಾಗಿದ್ದಾಳೆ. ಆ ಮೂಲಕ ಕಂಬಳ ಎಂದರೆ ಅದು ಗಂಡು ಕ್ರೀಡೆ ಎನ್ನುವ ಮಾತನ್ನು ಕುಂದಾಪುರ ತಾಲೂಕಿನ ಪುಟ್ಟ ಬಾಲಕಿ ಸುಳ್ಳು ಮಾಡಿದ್ದಾಳೆ.

ಕೆಸರು ಗದ್ದೆಯ ಆಟ ಕಂಬಳ ಎಂದರೆನೆ ಹಾಗೆ, ಪುಟ್ಟ ಮಕ್ಕಳಿಂದ ಹಿಡಿದು ವೃದ್ದರ ವೆರೆಗೂ ಅದೇನೋ ಒಂದು ಆಕರ್ಷಣೆ. ಶನಿವಾರ ಮತ್ತು ಭಾನುವಾರ ನಡೆಯುವ ಕಂಬಳ‌ ಕೂಟದಲ್ಲಿ ಕಿಕ್ಕಿರಿದು ಸೇರುವ ಕಂಬಳಾಭಿನಿಗಳೇ ಇದಕ್ಕೆ ಸಾಕ್ಷಿ. ಅದರಲ್ಲೂ ಈ ವರ್ಷದ ಕಂಬಳ‌ದಲ್ಲಿ ಬಾಲಕಿಯೊಬ್ಬಳು ಎಲ್ಲರ ಗಮನ ಸೆಳೆದಿದ್ದಾಳೆ. ಕಂಬಳ ಗದ್ದೆಗಳಲ್ಲಿ, ತಲೆಗೊಂದು ಮುಂಡಾಸು ಬಿಗಿದು ತನ್ನ ಮನೆಯ ಕೋಣಗಳ ಜೊತೆಗೆ ಕಂಬಳ ಗದ್ದೆಗೆ ಇಳಿದು ಹೊಸ ಅಧ್ಯಾಯ ‌ಬರೆದ ಈಕೆಯ ಹೆಸರು ಚೈತ್ರ ಭಟ್.

ಕುಂದಾಪುರದ ಬೋಳಂಬಳ್ಳಿ ಗ್ರಾಮದ ಪರಮೇಶ್ವರ ಭಟ್ ಮತ್ತು ರಮ್ಯಾ ದಂಪತಿಯ ಹಿರಿಯ ಪುತ್ರಿಯಾದ ಚೈತ್ರಾ ಭಟ್ 11 ವರ್ಷದವಳಾಗಿದ್ದು, ಆರನೇ ತರಗತಿ ಕಲಿಯುತ್ತಿದ್ದಾಳೆ. ತಾನು ಕೂಡ ಕಂಬಳದಲ್ಲಿ ಕೋಣಗಳನ್ನು ಓಡಿಸಬೇಕು, ಕಂಬಳ ಕ್ಷೇತ್ರದ ಹುಸೇನ್ ಬೋಲ್ಟ್ ಶ್ರೀನಿವಾಸ ಗೌಡರಂತೆ ಮಿಂಚಬೇಕು ಎಂದು ಕನಸು ಕಾಣುತ್ತಿದ್ದಾಳೆ. ಇದಕ್ಕಾಗಿ ಮನೆಯ ಗದ್ದೆಯಲ್ಲಿ ಪ್ರ್ಯಾಕ್ಟೀಸ್ ಕೂಡ ನಡೆಸಲು ಸಿದ್ಧತೆ ನಡೆಸಿದ್ದಾಳೆ.

ಚೈತ್ರಾ ಭಟ್ (11)

ಚೈತ್ರಾಳಿಗೆ ಕಂಬಳ ಎಂದರೆ ನಾಲ್ಕರ ಹರೆಯದಿಂದಲೇ ತುಂಬಾ ಪ್ರೀತಿ, ಕೋಣಗಳನ್ನು ಸ್ನಾನ ಮಾಡಿಸುವುದು, ಹುರುಳಿ ತಿನ್ನಿಸುವುದರಲ್ಲೂ ಈಕೆ ಮುಂದು. ಅವಕಾಶ ಸಿಕ್ಕಿದರೆ ಮುಂದಿನ ದಿನಗಳಲ್ಲಿ ಆಕೆಯನ್ನು ಜೂನಿಯರ್ ವಿಭಾಗದಲ್ಲಿ ಭಾಗವಹಿಸುವಂತೆ ಮಾಡಬೇಕೆಂದಿದ್ದೇನೆ. ಸುಮಾರು 25 ವರ್ಷಗಳ ಕಂಬಳದ ಕೋಣಗಳನ್ನು ಸಾಕುತ್ತಿರುವ ನನಗೆ ಕಂಬಳದಲ್ಲಿ ಹೆಣ್ಣು ಮಕ್ಕಳು ಮಿಂಚಬೇಕು ಎಂಬ ಆಸೆ ಇದೆ ಎಂದು ಚೈತ್ರಾ ಭಟ್ ತಂದೆ ಪರಮೇಶ್ವರ್ ಭಟ್ ತಿಳಿಸಿದ್ದಾರೆ.

ಇನ್ನು ಚೈತ್ರಾಳ ಆಸಕ್ತಿಯನ್ನು ಗಮನಿಸಿದ ಪರಮೇಶ್ವರ ಭಟ್ ಇತ್ತೀಚೆಗೆ ಗಣೇಶ ಎಂಬ ಹೆಸರಿನ ಮರಿ ಕೋಣವವೊಂದನ್ನು ಖರೀದಿಸಿ ತಂದಿದ್ದು, ಈ ಕೋಣವನ್ನು ಚೈತ್ರಾ ಬಹಳ ಪ್ರೀತಿಯಿಂದ ಸಾಕುತ್ತಿದ್ದಾಳೆ. ಅದನ್ನು ಮನೆಯ ಬಳಿಯ 110 ಮೀ ಉದ್ದದ ಕಂಬಳ ಕೆರೆಯಲ್ಲಿ ಓಡಿಸುತ್ತಿದ್ದು, ಅದರ ಜೊತೆಗೆ ತಾನು ಓಡುವ ಮೂಲಕ ಚೈತ್ರಾ ಅಭ್ಯಾಸ ಮಾಡುತ್ತಿದ್ದಾಳೆ.

ಕಂಬಳದಲ್ಲಿ ಭಾಗವಗಿಸಿದ ಕುಂದಾಪುರ ಮೂಲದ ಬಾಲಕಿ ಚೈತ್ರಾ ಭಟ್

ಹಿಂದಿನ ಮಹಿಳೆಯರು ಭಾಗವಹಿಸದೇ ಇದ್ದ ಕಂಬಳಗಳಲ್ಲಿ ಇತ್ತೀಚಿನ ಕೆಲವು ವರ್ಷಗಳಿಂದ ಮಹಿಳೆಯರು ಪ್ರೇಕ್ಷಕರಾಗಿ ಬಂದು ಬೆಳಗ್ಗಿನವರೆಗೆ ಕಂಬಳ ವೀಕ್ಷಿಸುತ್ತಾರೆ. ಸದ್ಯ ಚೈತ್ರಾ ಕಂಬಳಗದ ಗದ್ದೆಗೆ ಇಳಿಯುವ ಮೂಲಕ ಹೊಸ ಅಧ್ಯಾಯ ಶುರು ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಹಿಳೆಯರು ಭಾಗವಹಿಸುವ ಸಾಧ್ಯತೆ ಇದೆ. ಇನ್ನು ಕಂಬಳ ಅಕಾಡೆಮಿಯ ಮೂಲಕ ಮಹಿಳಾ ಓಟಗಾರರಿಗೆ ತರಬೇತಿ ನೀಡುವ ಚಿಂತನೆಯೂ ನಡೆದಿದೆ ಎನ್ನುವುದು ಶ್ಲಾಘನೀಯ.

ಇದನ್ನೂ ಓದಿ: Kambala Record ಕಂಬಳದಲ್ಲಿ ಹೊಸ ದಾಖಲೆ: ಶ್ರೀನಿವಾಸ್ ಗೌಡರ ದಾಖಲೆ ಮುರಿದ ಬೈಂದೂರು ವಿಶ್ವನಾಥ್​