ಉಡುಪಿ: ಅಬಕಾರಿ ಸುಂಕ ಹೆಚ್ಚಳ ಮಾಡಿ ಕಾಂಗ್ರೆಸ್ ಸರ್ಕಾರ(Congress Government) ಎಣ್ಣೆ ಪ್ರಿಯರಿಗೆ ಶಾಕ್ ಕೊಟ್ಟಿದೆ(Liquor Hike). ಜು.7ರ ಶುಕ್ರವಾರ ಮಂಡನೆಯಾದ ಬಜೆಟ್ನಲ್ಲಿ ಮದ್ಯದ ಬೆಲೆ ಹೆಚ್ಚಳ ಮಾಡಿ ಸಿಎಂ ಸಿದ್ದರಾಮಯ್ಯ(Siddaramaiah) ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆ ರೊಚ್ಚಿಗೆದ್ದ ಮದ್ಯ ಪ್ರಿಯರು ವಿನೂತನ ರೀತಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಉಚಿತ ಮದ್ಯ ನೀಡುವಂತೆ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಹೌದು ಉಡುಪಿಯ ಚಿತ್ತರಂಜನ್ ಸರ್ಕಲ್ನಲ್ಲಿ ಕೂಲಿ ಕಾರ್ಮಿಕರು ವಿನೂತನ ರೀತಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇತ್ತೀಚಿನ ಬಜೆಟ್ನಲ್ಲಿ ಮದ್ಯದ ಬೆಲೆ 20% ಏರಿಕೆ ಮಾಡಲಾಗಿದೆ. ಸರಕಾರದ ಉಚಿತ ಯೋಜನೆಗೆ ಹಣ ನಮ್ಮಿಂದಲೇ ಬರುವುದು. ನಮಗೆ ಮದ್ಯದ ಬೆಲೆ ಇಳಿಕೆ ಮಾಡಿ ಎಂದು ಮದ್ಯಪ್ರಿಯರು ಆಗ್ರಹಿಸಿದ್ದಾರೆ. ಮದ್ಯದ ಬೆಲೆ ಇಳಿಸಿ ಇಲ್ಲ ಬೆಳಿಗ್ಗೆ ನೈಂಟಿ, ಸಂಜೆ ನೈಂಟಿ ಉಚಿತವಾಗಿ ನೀಡಿ. ಅದು ಆಗದಿದ್ದಲ್ಲಿ ಸಾರಾಯಿ ಸಂಪೂರ್ಣ ಬಂದ್ ಮಾಡಿ. ಆ ಹಣವನ್ನು ನಾವು ನಮ್ಮ ಹೆಂಡತಿ, ಮಕ್ಕಳಿಗೆ ನೀಡುತ್ತೇವೆ. ನಮ್ಮ ಹೆಂಡತಿ, ಮಕ್ಕಳನ್ನು ನಾವೇ ಹಣ ಕೊಟ್ಟು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಸರ್ಕಾರಕ್ಕೆ ಮದ್ಯಪ್ರಿಯರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Bengaluru: ಕರ್ನಾಟಕದಲ್ಲಿ ‘ಎಣ್ಣೆ’ ದೇಶದಲ್ಲೇ ದುಬಾರಿ; ಬೇರೆ ಬೇರೆ ರಾಜ್ಯಗಳಲ್ಲಿ ಮದ್ಯದ ದರ ಎಷ್ಟು ಹೆಚ್ಚಾಗಿದೆ?
ಇನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿ, ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕುಡುಕರಿಗೆ ಹಾರ ಹಾಕಿ ಸನ್ಮಾನ ಮಾಡಲಾಯಿತು. ಹಾಗೂ ಆರತಿ ಎತ್ತಿ ಗೌರವಾರ್ಪಣೆ ಸಲ್ಲಿಸಲಾಯಿತು. ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿ, ಡೋಲು ಬಡಿದು ಗಮನ ಸೆಳೆದರು.
ಉಡುಪಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:21 pm, Tue, 11 July 23