ಉಡುಪಿ, ಜೂನ್ 18: ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್ (Udupi Gang War) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೂನ್ 15ರ ರಾತ್ರಿ ಘಟನೆ ನಡೆದಿದೆ. ಪುತ್ತೂರಿನ ಸೆಲೂನ್ ನೌಕರ ಚರಣ್, ಶಬರಿ ಎಂಬಾತನಿಗೆ ಬೈದಿದ್ದನು. ಈ ವಿಚಾರ ತಿಳಿದ ಪ್ರವೀಣ್ ಮತ್ತು ಈತನ ಗ್ಯಾಂಗ್ ಮಾತುಕತೆಗೆಂದು ಚರಣ್ನನ್ನು ಉಡುಪಿ ನಗರದ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ಕರೆದಿದ್ದರು.
ಚರಣ್ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಆಗಮಿಸಿದ್ದನು. ಪ್ರವೀಣ್ ಆ್ಯಂಡ್ ಟೀಂ ಇವರ ತಲವಾರು ಬೀಸಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಚರಣ್ ಮತ್ತು ಸಂಗಡಿಗರು ಬೈಕ್, ಸ್ಕೂಟರ್ ಬಿಟ್ಟು ಓಡಿದ್ದಾರೆ. ಚರಣ್ ಸಿಗದಿದ್ದಕ್ಕೆ ಪ್ರವೀಣ್ ಮತ್ತು ಆತನ ಟೀಂ ಆತನ ಬೈಕ್ ಮೇಲೆ ತಲವಾರಿನಿಂದ ಹಾನಿ ಮಾಡಿದ್ದಾರೆ. ಪುಂಡರು ತಾವು ಕೃತ್ಯವೆಸಗಿರುವ ದೃಶ್ಯವನ್ನು ವೀಡಿಯೋ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕನಕಪುರದಲ್ಲೂ ಗ್ಯಾಂಗ್ ವಾರ್ ಆತಂಕ: ವ್ಯಕ್ತಿಯ ಕೊಲ್ಲಲು ಹೋಗಿ ಆತನ ತಂದೆಯನ್ನೇ ಕೊಲೆ ಮಾಡಿದ ಗ್ಯಾಂಗ್
ಉಡುಪಿ ಜಿಲ್ಲೆಯಲ್ಲಿ ಒಂದೇ ತಿಂಗಳು ಅಂತರದಲ್ಲಿ ಮೂರು ಗ್ಯಾಂಗ್ ವಾರ್ ಪ್ರಕರಣ ವರದಿಯಾದವು. ಹೆಚ್ಚುತ್ತಿರುವ ಗ್ಯಾಂಗ್ ವಾರ್ನಿಂದ ಉಡುಪಿ ನಗರದ ಜನತೆ ಭಯ ಭೀತರಾಗಿದ್ದಾರೆ.
ಉಡುಪಿ ನಗರದ ಕುಂಜಿಬೆಟ್ಟುವಿನಲ್ಲಿ ಮೇ 18ರ ಮುಂಜಾನೆ 2 ಗಂಟೆಯ ಹೊತ್ತಿಗೆ ಕುಂಜಿಬೆಟ್ಟು ರಸ್ತೆಯಲ್ಲಿ ಟೀಂ ಗರುಡ ಎರಡು ತಂಡಗಳು ಗಾಂಜಾ ಅಮಲಿನಲ್ಲಿ ಸಿನಿಮೀಯ ರೀತಿಯಲ್ಲಿ ಕಾರು ಕಾಳಗ ನಡೆಸಿದ್ದವು. ಅಲ್ಲದೆ ತಲವಾರು ಹಿಡಿದು, ಬಡಿದಾಡಿಕೊಂಡಿದ್ದವು. ನಗರವೆಲ್ಲ ಸೈಲೆಂಟ್ ಆಗಿರುವ ಹೊತ್ತಿಗೆ ಕಾರುಗಳ ಗುದ್ದಾಟ, ತಲವಾರು ಹಿಡಿದು ಬಡಿದಾಡುತ್ತಿರುವುದನ್ನು ಸುತ್ತಲಿನ ಫ್ಲ್ಯಾಟ್ ನಿವಾಸಿಗಳು ಕಂಡು ಬೆಚ್ಚಿ ಬಿದ್ದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 am, Tue, 18 June 24