ಉಡುಪಿ: ರಾಜ್ಯ ವಿಧಾನಸಭೆ ಚುನಾವಣೆ ಕೆಲವೇ ತಿಂಗಳು ಬಾಕಿ ಇದೆ. ಪ್ರತಿಯೊಂದು ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ಕಸರತ್ತು ನಡೆಸುತ್ತಿವೆ. ಕಾಂಗ್ರೆಸ್ ಕೂಡ ಕಸರತ್ತು ನಡೆಸಿದ್ದು, ರಾಜ್ಯದ ಮತದಾರರನ್ನು ತನ್ನತ್ತ ಸೆಳೆಯಲು ಭರ್ಜರಿ ಆಫರ್ ನೀಡಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ (electricity) ನೀಡುವುದಾಗಿ ಘೋಷಿಸಿತ್ತು. ಸದ್ಯ ಈ ವಿಚಾರವಾಗಿ ಉಡುಪಿಯಲ್ಲಿ ಇಂಧನ ಇಲಾಖೆ ಸಚಿವ ಸುನೀಲ್ ಕುಮಾರ್ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಲ್ಲಾ ಎಸ್ಕಾಂಗಳು ದಿವಾಳಿಯಾಗಿದ್ದವು. ಬೊಮ್ಮಾಯಿ ಸಿಎಂ ಆದ ನಂತರ 9 ಸಾವಿರ ಕೋಟಿ ರೂ. ನೀಡಿದ್ದೇವೆ. ಎಸ್ಕಾಂ ದಿವಾಳಿ ಮಾಡಿದ ಸಿದ್ದರಾಮಯ್ಯ ಸುಳ್ಳು ಭರವಸೆ ನೀಡ್ತಿದ್ದಾರೆ. ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡುವುದಾಗಿ ಹೇಳುತ್ತಿದ್ದಾರೆ. ಇದರಲ್ಲಿ ಇಂಧನ ಇಲಾಖೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ. ಈಗಾಗಲೇ ಸಬ್ಸಿಡಿ ರೂಪದಲ್ಲಿ ಸರ್ಕಾರ 16,000 ಕೋಟಿ ರೂ. ನೀಡ್ತಿದೆ. ನಮ್ಮ ಸರ್ಕಾರ ಈ ಆರ್ಥಿಕ ನಷ್ಟವನ್ನು ಸರಿದೂಗಿಸುವ ಕೆಲಸ ಮಾಡಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಡ್ರಗ್ಸ್ ಕಾರ್ಯಾಚರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಡ್ರಗ್ಸ್ ಸಂಬಂಧಿಸಿದ ಸರಕಾರ ಕಠಿಣ ನಿಲುವು ತೆಗೆದುಕೊಂಡಿದೆ. ಎಷ್ಟೇ ಪ್ರಭಾವಿಗಳಾಗಿದ್ದರು ಯಾವುದೇ ಕಾರಣಕ್ಕೂ ಯಾರನ್ನು ರಕ್ಷಣೆ ಮಾಡುವುದಿಲ್ಲ. ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮ ಸರ್ಕಾರದ ಕಾಲಾವಧಿಯಲ್ಲಿ ಡ್ರಗ್ಸ್ ವಿರುದ್ಧ ದೊಡ್ಡ ಕಾರ್ಯಾಚರಣೆ ಮಾಡಿದ್ದೇವೆ.
ತಾವು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಎಲ್ಲ ಎಸ್ಕಾಂಗಳನ್ನು ದಿವಾಳಿ ಅಂಚಿಗೆ ತಳ್ಳಿದ್ದ ಮಹಾನ್ ಆರ್ಥಿಕ ತಜ್ಞರೊಬ್ಬರು ಈಗ ೨೦೦ ಯುನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದ್ದಾರೆ. ಇದು ಜನಹಿತ ಹೇಳಿಕೆಯಲ್ಲ. ಇದರ ಹಿಂದಿರುವ ಉದ್ದೇಶ ಏನು ಗೊತ್ತೆ ? (1/4) pic.twitter.com/CdpmVFAeMj
— Sunil Kumar Karkala (@karkalasunil) January 13, 2023
ಅನೇಕ ಪ್ರತಿಷ್ಠಿತರನ್ನು ಜೈಲಿಗೆ ಹಾಕಿದ್ದು ನಮ್ಮ ಸರ್ಕಾರ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೂ ಕೂಡ ಡ್ರಗ್ಸ್ ದಂಧೆ ಸಹಿಸಲು ಸಾಧ್ಯವಿಲ್ಲ. ಪೊಲೀಸರಿಗೆ ಮುಕ್ತವಾದ ಅವಕಾಶ ಕೊಟ್ಟಿದ್ದೇವೆ. ಸೂಕ್ತ ಕಾರ್ಯಚರಣೆ ಮಾಡಿ ಕಠಿಣ ನಿಲುವು ತೆಗೆದುಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಸುನಿಲ್ ಕುಮಾರ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.