AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ಉಚಿತ ವಿದ್ಯುತ್​, ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ: ಡಿಕೆ ಶಿವಕುಮಾರ್ ಘೋಷಣೆ

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯುನಿಟ್​ ವಿದ್ಯುತ್​ ನೀಡುತ್ತೇವೆ. ಜೊತೆಗೆ ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿಮಕುಮಾರ್​ ಹೇಳಿದರು.

ಕಾಂಗ್ರೆಸ್​ ಅಧಿಕಾರಕ್ಕೆ ಬಂದ್ರೆ ಉಚಿತ ವಿದ್ಯುತ್​, ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ: ಡಿಕೆ ಶಿವಕುಮಾರ್ ಘೋಷಣೆ
ಡಿ ಕೆ ಶಿಮಕುಮಾರ್Image Credit source: vijaykarnataka.com
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Jan 11, 2023 | 4:29 PM

Share

ಬೆಳಗಾವಿ: ಕಾಂಗ್ರೆಸ್​ (congress) ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯುನಿಟ್​ ವಿದ್ಯುತ್ (electricity)​ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿಮಕುಮಾರ್​ ಹೇಳಿದರು. ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಮಾತನಾಡಿ, ಉಚಿತ ವಿದ್ಯುತ್ ನೀಡುವುದಾಗಿ ಹೇಳಿ ಪೋಸ್ಟರ್​​ ಬಿಡುಗಡೆ ಮಾಡಿದ್ದಾರೆ. ಇನ್ಮುಂದೆ ನೀವ್ಯಾರು ಕರೆಂಟ್‌ಗೆ ದುಡ್ಡು ಕಟ್ಟಬೇಕಿಲ್ಲ. ಬಿಜೆಪಿಯವರು ಎಲ್ಲರ ಬದುಕಿನಲ್ಲಿ ಚೆಲ್ಲಾಟ ಆಡಿಕೊಂಡು ಬಂದರು. ರೈತರ ಆದಾಯ ಡಬಲ್​ ಮಾಡುತ್ತೇವೆ ಎಂದು ಮೋದಿ ಹೇಳಿದ್ದರು. ಆದರೆ ರೈತರ ಆದಾಯ ಡಬಲ್ ಆಗಲಿಲ್ಲ, ಸಾಲಮನ್ನಾವೂ ಆಗಲಿಲ್ಲ. ಇದೇ ಕಾರಣಕ್ಕೆ ಬಿಜೆಪಿಯ ಪಾಪದಪುರಾಣ ಬಿಡುಗಡೆ ಮಾಡಿದ್ದೇವೆ. ಲಂಚಾವತಾರ, ಮಂಚಾವತಾರ, ಬಿ ರಿಪೋರ್ಟ್ ನೀಡುವ ಸರ್ಕಾರ, ಬಿಜೆಪಿಯವರು ಕೋಮು ದ್ವೇಷದ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಕಿಡಿ ಕಾರಿದರು.

ಜನರ ಸಂಕಷ್ಟ ಪರಿಹಾರ ಮಾಡುವುದೇ ಈ ಪ್ರಜಾಧ್ವನಿ ಯಾತ್ರೆ

ಕಾಂಗ್ರೆಸ್ ಪಕ್ಷ ಜನರ ಸಮಸ್ಯೆ, ನೋವು ಅಭಿಪ್ರಾಯ ಸಂಗ್ರಹಿಸುತ್ತಿದೆ. ನಿಮಗೆ ಶಕ್ತಿ ಕೊಡಬೇಕು. ಬೆಳಕು ಕೊಡಬೇಕು ಅಂತಾ ನಾವೆಲ್ಲಾ ಇಲ್ಲಿಗೆ ಬಂದಿದ್ದೇವೆ. ಜನರ ಸಂಕಷ್ಟ ಪರಿಹಾರ ಮಾಡುವುದೇ ಈ ಪ್ರಜಾಧ್ವನಿ ಯಾತ್ರೆ. ಬುದ್ಧ, ಬಸವ ಮನೆ ಬಿಟ್ಟ ಘಳಿಗೆ, ಮಹಾತ್ಮ ಗಾಂಧಿ ನಾಯಕತ್ವ ವಹಿಸಿಕೊಂಡ ಘಳಿಗೆಯಲ್ಲಿ ಕಾರ್ಯಕ್ರಮ ಪ್ರಾರಂಭ ಮಾಡಿದ್ದೇವೆ ಎಂದರು.

ಇದನ್ನೂ ಓದಿ: ತನ್ನ ವಿರುದ್ಧ ಸ್ಪರ್ಧಿಸಿ ಪರಾಜಿತರಾಗಿದ್ದ ಜೆಡಿಎಸ್ ಅಭ್ಯರ್ಥಿ ವಿಶ್ವನಾಥ್​ರನ್ನು ಪಕ್ಷಕ್ಕೆ ಬರಮಾಡಿಕೊಂಡ ಡಿಕೆಶಿ

ಬಿಜೆಪಿಯವರ ಪಾಪದ ಕೊಡ ತುಂಬಿದೆ

ಗುತ್ತಿಗೆದಾರ ಸಂಘದ ಅಧ್ಯಕ್ಷರು ನಲವತ್ತು ಪರ್ಸಂಟ್ ಅಂತಾ ಕೇಸ್ ಕೊಟ್ಟರು. ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡರು. ಇಂದಿನವರೆಗೂ ಅವರಿಗೆ ಸಹಾಯ ಮಾಡಿಲ್ಲ, ಬಿಲ್ ಕೊಟ್ಟಿಲ್ಲ. ಇವರ ಪಾಪದ ಕೊಡ ತುಂಬಿದ್ದು, ತಮ್ಮ ಬದುಕಿನಲ್ಲಿ ಚೆಲ್ಲಾಟ ಆಡುತ್ತಿದ್ದಾರೆ. ಮೀಸಲಾತಿ ವಿಚಾರದಲ್ಲಿ ಯಾವ ಯಾವ ನಾಟಕ ಆಡ್ತಿದ್ದಾರೆ ಎಷ್ಟು ಸುಳ್ಳು ಹೇಳ್ತಿದ್ದಾರೆ. ಜನರಿಗೆ ತಪ್ಪು ದಾರಿ ಎಳೆಯಲು ಟ್ರೈ ಮಾಡ್ತಿದ್ದಾರೆ.

ಬೆಲೆ ಏರಿಕೆಯಿಂದ ಜನರ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆಯುತ್ತಿದೆ. ನಿಮಗೋಸ್ಕರ ಮಾಡಿದ ಪ್ರತಿಜ್ಞೆ, ಕೊಟ್ಟ ಗ್ಯಾರಂಟಿ ನಾವು ಈಡೇರಿಸುತ್ತೇವೆ. ಕಳಂಕಿತ ರಾಜ್ಯ, ಭ್ರಷ್ಟಾಚಾರ ರಾಜ್ಯ ಅಂತಾ ಕೆಟ್ಟ ಹೆಸರು ಬಂದಿರುವುದನ್ನ ನಿರ್ಮೂಲನೆ ಮಾಡಲು ಸಹಕಾರ ಮಾಡಬೇಕು. ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಪ್ರಣಾಳಿಕೆ ಕೊಡಬೇಕು ಅಂತಾ ಪ್ರಿಯಾಂಕಾ ಗಾಂಧಿ ಸೂಚಿಸಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಬಂದಾಕ್ಷಣ ಟೆಂಡರ್​​ ಪರಿಶೀಲನೆ; ಅಧಿಕಾರಿಗಳು, ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ ಡಿಕೆಶಿ

ರಾಜ್ಯದಲ್ಲಿ ಇರುವುದು 40% ಸರ್ಕಾರ ಎಂದ ಸುರ್ಜೇವಾಲ

ರಣದೀಪ್ ಸಿಂಗ್ ಸುರ್ಜೇವಾಲ ಮಾತನಾಡಿ, ರಾಜ್ಯದಲ್ಲಿ ಇರುವುದು 40% ಸರ್ಕಾರ. ಈ ಸರ್ಕಾರದಿಂದ ರೈತರು, ಅಲ್ಪಸಂಖ್ಯಾತರು, ದಲಿತರು ಬೇಸತ್ತಿದ್ದಾರೆ. ಶಾಸಕರನ್ನು ಖರೀದಿಸಿ ಈ ಅನೈತಿಕ ಸರ್ಕಾರ ಬಂದಿದೆ. 40 ಪರ್ಸೆಂಟ್ ಸರ್ಕಾರ, ಪೇ ಸಿಎಂ ಸರ್ಕಾರ ಎನ್ನಲಾಗುತ್ತಿದೆ. 2019ರಿಂದ ಈವರೆಗೆ 13 ಸಾವಿರ ಕಂಪನಿಗಳು ಬಂದ್​​ ಆಗಿವೆ. ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಪ್ರಸ್ತಾಪಿಸಿದ ಸುರ್ಜೇವಾಲ, ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಕರ್ನಾಟಕವನ್ನು ಅತಿಕ್ರಮಣ ಮಾಡ್ತಿದೆ. ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ನೀಡಲು ಸಿಎಂ ಬೊಮ್ಮಾಯಿಗೆ ತಾಕತ್ ಇಲ್ಲ. ದೆಹಲಿ ನಾಯಕರು ಹೇಳಿದ ಹಾಗೆ ಸಿಎಂ ಕೇಳುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಅಧಿಕಾರಕ್ಕೆ ಬಂದ ಮೇಲೆ ಎಲ್ಲಾ ವರ್ಗದ ಬಡವರಿಗೂ ಯೋಜನೆ ನೀಡಲಾಗುವುದು ಎಂದು ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.

ಬಿಜೆಪಿ ಸರ್ಕಾರ ಬಂದ ಮೇಲೆ ಜನ ಜೀವನ ಕಷ್ಟಕರವಾಗಿದೆ: ಎಂ.ಬಿ.ಪಾಟೀಲ್  

ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ನೀಡಿದ್ದು, ಬೆಳಗಾವಿಯಿಂದ ಪ್ರಜಾಧ್ವನಿ ಯಾತ್ರೆಯನ್ನು ಪ್ರಾರಂಭ ಮಾಡಿದ್ದೇವೆ. ಬಿಜೆಪಿ ಸರ್ಕಾರ ಬಂದ ಮೇಲೆ ಜನ ಕಷ್ಟಕರ ಜೀವನ ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್​, ಗ್ಯಾಸ್​, ರಸಗೊಬ್ಬರ ಬೆಲೆಯೂ ಏರಿಕೆಯಾಗಿದೆ. 2018ರಲ್ಲಿ ಬಿಜೆಪಿಯವರು ನೀಡಿದ್ದ ಭರವಸೆಯನ್ನೂ ಈಡೇರಿಸಿಲ್ಲ. ನೀರಾವರಿಗೆ ಒಂದೂವರೆ ಲಕ್ಷ ಕೋಟಿ ಖರ್ಚು ಮಾಡ್ತೇನಿ‌ ಎಂದಿದ್ರು. ಕೇವಲ 40ರಿಂದ 50 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಬಿಜೆಪಿ ವೈಫಲ್ಯವನ್ನು ಜನರಿಗೆ ತಿಳಿಸಲು ಪ್ರಜಾಧ್ವನಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:40 pm, Wed, 11 January 23