ತನ್ನ ವಿರುದ್ಧ ಸ್ಪರ್ಧಿಸಿ ಪರಾಜಿತರಾಗಿದ್ದ ಜೆಡಿಎಸ್ ಅಭ್ಯರ್ಥಿ ವಿಶ್ವನಾಥ್ರನ್ನು ಪಕ್ಷಕ್ಕೆ ಬರಮಾಡಿಕೊಂಡ ಡಿಕೆಶಿ
2008ರಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ನಿಂದ ಸ್ಪರ್ಧೆ ಮಾಡಿ ಪರಾಜಿತರಾಗಿದ್ದ ಡಿ.ಎಂ.ವಿಶ್ವನಾಥ್ ಇದೀಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇವರೊಂದಿಗೆ ಮಂಡ್ಯದ ಜೆಡಿಎಸ್ ಮುಖಂಡರೊಬ್ಬರು ಪಕ್ಷ ಸೇರ್ಪಡೆಯಾಗಿದ್ದಾರೆ.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧವೇ ಸ್ಪರ್ಧಿಸಿ ಪರಾಜಿತರಾಗಿದ್ದ ಜೆಡಿಎಸ್ ಅಭ್ಯರ್ಥಿ ಡಿ.ಎಂ.ವಿಶ್ವನಾಥ್ (D.M.Vishwanath) ಅವರು ಇದೀಗ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಇವರೊಂದಿಗೆ ಮಂಡ್ಯದ ಜೆಡಿಎಸ್ ಮುಖಂಡ ಬಾಲಕೃಷ್ಣ ಕೂಡ ಕೈ ಪಡೆ ಸೇರಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ವಿಶ್ವನಾಥ್ ಮತ್ತು ಬಾಲಕೃಷ್ಣ ಅವರನ್ನು ಡಿ.ಕೆ.ಶಿವಕುಮಾರ್ (D.K.Shivakumar) ಅವರು ಬರಮಾಡಿಕೊಂಡರು. ವಿಶ್ವನಾಥ್ ಅವರು 2008ರಲ್ಲಿ ರಾಮನಗರ ಜಿಲ್ಲೆ ಕನಕಪುರ ಕ್ಷೇತ್ರದಿಂದ ಡಿ.ಕೆ.ಶಿವಕುಮಾರ್ ವಿರುದ್ಧ ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದರು.
ವಿಶ್ವನಾಥ್ ಮತ್ತು ಬಾಲಕೃಷ್ಣರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಕಾರ್ಯಕ್ರಮದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಕೆಶಿ, ಕನಕಪುರ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿ ಕೇವಲ 7 ಸಾವಿರ ಅಂತರದಿಂದ ಸೋಲು ಅನುಭಸಿದ್ದರು. ವಿಶ್ವನಾಥ್ ತಂದೆ, ಅವರ ತಾತ ನನ್ನ ಪರ ಚುನಾವಣೆ ಪ್ರಚಾರ ಮಾಡಿದ್ದಾರೆ. ಆದರೆ ಜೆಡಿಎಸ್ನಲ್ಲಿ ನಾಯಕತ್ವ ಬೆಳೆಸಿಕೊಳ್ಳಲು ಹೋಗಿದ್ದರು. ಆದರೆ ಈ ರಾಜ್ಯ, ನಮ್ಮ ಜಿಲ್ಲೆ ಹಾಗೂ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಮರಳಿ ಸೇರಿದ್ದಾರೆ ಎಂದರು.
ಇದನ್ನೂ ಓದಿ: ಇಂದು ‘ಸಿದ್ದು ನಿಜ ಕನಸುಗಳು’ ಪುಸ್ತಕ ಬಿಡುಗಡೆ; ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
ವೇದಿಕೆ ಮೇಲಿರುವ ಎಲ್ಲರ ಸಮ್ಮುಖದಲ್ಲಿ ನಾನು ಕಾಂಗ್ರೆಸ್ ಪಕ್ಷದ ಪರವಾಗಿ ಪಕ್ಷಕ್ಕೆ ಸೇರುತ್ತಿರುವವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವೂ ಹಾಗೂ ಸಿದ್ದರಾಮಯ್ಯನವರು ಪಕ್ಷ ಅಧಿಕಾರಕ್ಕೆ ತರಲು ಕೆಲಸ ಮಾಡುತ್ತಿದ್ದೀರಿ. ನಿಮ್ಮ ಜೊತೆ ನಾವೂ ಕೂಡ ಬರುತ್ತೇವೆ ಅಂತಾ ರಾಧಾಕೃಷ್ಣರವರು ಕೂಡ ಬಂದಿದ್ದಾರೆ. ಇವರಿಬ್ಬರಿಗೂ ಕಾಂಗ್ರೆಸ್ ಭಾವುಟ ಕೊಡುತ್ತೇನೆ, ಶಾಲು, ಹೂವಿನ ಹಾರ ಹಾಕುತ್ತೇನೆ. ಇವರ ಜೊತೆ ಸಾವಿರಾರು ಜನ ಬಂದಿದ್ದಾರೆ ಎಂದರು.
ನೋಡಿ ಕುರ್ಚಿಗಾಗಿ ಎಷ್ಟು ಕಿತ್ತಾಡ್ತಿದ್ದಾರೆ ಎಂದ ಡಿಕೆಶಿ
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಆಗಮಿಸಿದ್ದರು. ಈ ವೇಳೆ ಕುಳಿತುಕೊಳ್ಳುವ ವಿಚಾರವಾಗಿ ಕಿತ್ತಾಟ ನಡೆಯಿತು. ಇದನ್ನು ನೋಡಿದ ಡಿಕೆ ಶಿವಕುಮಾರ್, ನೋಡಿ ಕುರ್ಚಿಗಾಗಿ ಕಾಂಗ್ರೆಸ್ ಪಾರ್ಟಿಯಲ್ಲಿ ಎಷ್ಟು ಕಿತ್ತಾಟ ನಡೆಯುತ್ತಿದೆ ಅಂತಾ ಹಾಸ್ಯ ಚಟಾಕಿ ಹಾರಿಸಿದರು. ಕುಳಿತುಕೊಳ್ಳಲು ಕೆಲವರು ಕುರ್ಚಿಗಾಗಿ ಗುದ್ದಾಟ ನಡೆಸುತ್ತಿದ್ದರು.
ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Mon, 9 January 23