ಕಾಂಗ್ರೆಸ್ ಸರ್ಕಾರ ಬಂದಾಕ್ಷಣ ಟೆಂಡರ್ ಪರಿಶೀಲನೆ; ಅಧಿಕಾರಿಗಳು, ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ ಡಿಕೆಶಿ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದಾರೆ. ನಮ್ಮ ಸರ್ಕಾರ ಬಂದ ತಕ್ಷಣ ಟೆಂಡರ್ ಪರಿಶೀಲನೆ ಮಾಡುತ್ತೇವೆ ಎಂದು ಅಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಮತ್ತೆ ಅಧಿಕಾರದ ಆಸೆಯನ್ನು ಪರೋಕ್ಷವಾಗಿ ಹೇಳಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರು, ನಮ್ಮ ಸರ್ಕಾರ ಬಂದ ತಕ್ಷಣ ಟೆಂಡರ್ ಪರಿಶೀಲನೆ ಮಾಡುತ್ತೇವೆ ಎಂದು ಅಧಿಕಾರಿಗಳು, ಗುತ್ತಿಗೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ಬಹಿರಂಗವಾಗಿಯೇ ನೀಡಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ (Karnataka BJP Govt) ತರಾತುರಿಯಲ್ಲಿ ಟೆಂಡರ್ ಮಾಡಲು ಹೊರಟಿದೆ, ನಾವು ಅದೆಲ್ಲವನ್ನೂ ಪರಿಶೀಲನೆ ಮಾಡುತ್ತೇವೆ. ಅಧಿಕಾರಿಗಳು ಯಾರದ್ದೋ ಏಜೆಂಟ್ಗಳಾಗಬೇಡಿ. ಏಜೆಂಟ್ಗಳಾದರೆ ಸುಮ್ಮನೆ ತೊಂದರೆಯಲ್ಲಿ ಸಿಲುಕಿಕೊಳ್ಳುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಸ್ತಬ್ಧಚಿತ್ರಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಣೆ ವಿಚಾರವಾಗಿ ಮಾತನಾಡಿದ ಡಿಕೆಶಿ, ಕರ್ನಾಟಕ ಅಂದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಗೌರವವಿಲ್ಲ ಎಂದರು. ಮುಂದುವರೆದು ಮಾತನಾಡಿದ ಅವರು, 25 ಸಂಸದರನ್ನು ಕರೆದು ಒಂದು ದಿನವೂ ಕೂಡ ಚರ್ಚೆ ಮಾಡಿಲ್ಲ. ಈ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ಶಕ್ತಿಯೂ ಇಲ್ಲ ಎಂದರು.
ಇದನ್ನೂ ಓದಿ: Santro Ravi: ದಾಖಲೆಯಿಲ್ಲದೇ ಮಾತಾಡುವುದು ಎಚ್ಡಿಕೆ ಜಾಯಮಾನವೇ ಅಲ್ಲ; ಬಿಜೆಪಿ ವಿರುದ್ಧ ಮತ್ತೆ ಗುಡುಗಿದ ಕುಮಾರಸ್ವಾಮಿ
ರಾಜ್ಯದ ಸಮಸ್ಯೆ ಬಗ್ಗೆ ನಿಯೋಗ ಕರೆದೊಯ್ದು ಮಾತಾಡಬಹುದಿತ್ತು. ಆದರೆ ಮಾತನಾಡಿಲ್ಲ. ಮಹದಾಯಿ ಬಗ್ಗೆಯೂ ಕರೆದುಕೊಂಡು ಹೋಗಿ ಮಾತಾಡಬಹುದಲ್ಲಾ? SC, ST ಮೀಸಲಾತಿ ಹೆಚ್ಚಳ ಬಗ್ಗೆ 9ನೇ ಶೆಡ್ಯೂಲ್ನಲ್ಲಿ ಸೇರಿಸಲು ಅವರಿಗೆ ಆಗುತ್ತಿಲ್ಲ. ದಲಿತರಿಗೆ ಯಾವ ರೀತಿ ಮೋಸ ಮಾಡುತ್ತಿದ್ದಾರೆ ಎಂದು ಅರ್ಥ ಆಗುತ್ತಿದೆ. ಈ ಡಬಲ್ ಇಂಜಿನ್ ಸರ್ಕಾರ ಕಿತ್ತೊಗೆಯಬೇಕು ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬುರುವುದು ತಿರುಕನ ಕನಸು: ಆರ್.ಅಶೋಕ್
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೇವೆ ಎಂದು ತಿರುಕನ ಕನಸು ಕಾಣುತ್ತಿದೆ ಎಂದು ದೊಡ್ಡಬಳ್ಳಾಪುರದಲ್ಲಿ ಕಂದಾಯ ಸಚಿವ ಆರ್.ಅಶೋಕ್ (R.Ashok) ಹೇಳಿದ್ದಾರೆ. ಕಾಂಗ್ರೆಸ್ನವರು ವಿರೋಧ ಪಕ್ಷದಲ್ಲಿ ಇರುವುದಕ್ಕೂ ಲಾಯಕ್ಕಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಒಳ ಜಗಳವಿದೆ. ಡಾ.ಜಿ.ಪರಮೇಶ್ವರ್ ಸಹ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳುತ್ತಾರೆ. ಜ್ಯೋತಿಷಿಗಳು ಹೇಳಿದ್ದಾರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಈಗ ಮಲ್ಲಿಕಾರ್ಜುನ ಖರ್ಗೆ ಕೂಡ ಸಿಎಂ ರೇಸ್ಗೆ ಬಂದಿದ್ದಾರೆ ಎಂದರು. ಮುಂದುವರೆದ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಪಕ್ಷ ಮೊದಲು, ಬಿಜೆಪಿಗೆ ದೇಶ ಮೊದಲು ಎಂದರು.
ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:42 pm, Sun, 8 January 23