Covishield Vaccine: ಕೊವಿಶೀಲ್ಡ್ ಲಸಿಕೆಯಿಂದ ಪುರುಷರ ಫಲವತ್ತತೆಗೆ ಹಾನಿ ಇಲ್ಲ: ಮಣಿಪಾಲ ಮಾಹೆ ವಿಶ್ವವಿದ್ಯಾಲಯದಿಂದ ಮಹತ್ವದ ಮಾಹಿತಿ
ವೀರ್ಯದ ಗುಣಮಟ್ಟದಲ್ಲೂ ಯಾವುದೇ ಬದಲಾವಣೆ ಯಾಗುವುದಿಲ್ಲ ಎಂದು ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನಲ್ಲಿ ಭಾರತೀಯ ಫರ್ಟಿಲಿಟಿ ತಜ್ಞರ ತಂಡದಿಂದ ಸಂಶೋಧನೆ ಮಾಡಲಾಗಿದೆ.
ಉಡುಪಿ: ಕೋವಿಶೀಲ್ಡ್ ವ್ಯಾಕ್ಸಿನ್ನಿಂದ ಪುರುಷರ ಫಲವತ್ತತೆಗೆ ಯಾವುದೇ ಹಾನಿಯಿಲ್ಲ ಎಂದು ಮಣಿಪಾಲದ ಮಾಹೆ ವಿಶ್ವವಿದ್ಯಾಲಯದಿಂದ ಮಹತ್ವದ ಮಾಹಿತಿ ನೀಡಲಾಗಿದೆ. ಕೋವಿಡ್ ವಿರುದ್ಧ ಹೋರಾಡಲು ಕೋವಿಶೀಲ್ಡ್ ವ್ಯಾಕ್ಸಿನ್ ತೆಗೆದುಕೊಳ್ಳಲಾಗುತ್ತದೆ. ವೀರ್ಯದ ಗುಣಮಟ್ಟದಲ್ಲೂ ಯಾವುದೇ ಬದಲಾವಣೆ ಯಾಗುವುದಿಲ್ಲ ಎಂದು ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನಲ್ಲಿ ಭಾರತೀಯ ಫರ್ಟಿಲಿಟಿ ತಜ್ಞರ ತಂಡದಿಂದ ಸಂಶೋಧನೆ ಮಾಡಿದ್ದು, ಮೊದಲ ಬಾರಿ ನಡೆಸಿದ ಪೈಲಟ್ ಅಧ್ಯಯನದಲ್ಲಿ ಸತ್ಯ ಬಹಿರಂಗವಾಗಿದೆ. ಇಂಗ್ಲೆಂಡ್ ಮೂಲದ ಸೊಸೈಟಿ ಫಾರ್ ರಿಪ್ರೊಡಕ್ಷನ್ ಆ್ಯಂಡ್ ಫರ್ಟಿಲಿಟಿಯ ಅಧಿಕೃತ ಜರ್ನಲ್‌ನ ಸಂಶೋಧನಾ ವರದಿಯನ್ನು ಸೆ.5ರ ಸಂಚಿಕೆಯಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಪ್ರಕಟಣೆ ಮಾಡಿದೆ. ವ್ಯಾಕ್ಸಿನ್ ತೆಗೆದುಕೊಂಡ ಪುರುಷನ ವೀರ್ಯದ ಗುಣಮಟ್ಟ, ಸಂಖ್ಯೆ, ಚಲನೆಯ ಗುಣ, ಲೈಂಗಿಕತೆ ಯಾವುದೂ ಬದಲಾವಣೆ ಇಲ್ಲ ಎಂದು ಹೇಳಿದೆ.
ವ್ಯತಿರಿಕ್ತವಾದ ಯಾವುದೇ ಪರಿಣಾಮ ಕಂಡುಬಂದಿಲ್ಲ ಎಂದು ಪ್ರಕಟಣೆ ಹೇಳಿದೆ. ಮಣಿಪಾಲದ ಡಾ.(ಪ್ರೊ.) ಸತೀಶ್ ಅಡಿಗ ನೇತೃತ್ವದ ಐವರು ತಜ್ಞರ ತಂಡ ಈ ಅಧ್ಯಯನ ನಡೆಸಿದೆ. ಸಂಶೋಧನೆಗಾಗಿ 53 ಮಂದಿಯ ವೀರ್ಯವನ್ನು ಪರೀಕ್ಷೆಗೆ ತೆಗೆದು ಕೊಳ್ಳಲಾಗಿತ್ತು. ವ್ಯಾಕ್ಸಿನ್‌ನ ಮೊದಲ ಡೋಸ್ ತೆಗೆದುಕೊಳ್ಳುವ ಮೊದಲು ಅವರ ವೀರ್ಯವನ್ನು ಪರೀಕ್ಷೆಗಾಗಿ ತೆಗೆದುಕೊಳ್ಳಲಾಗಿತ್ತು. ವ್ಯಾಕ್ಸಿನೇಷನ್ ಆದ ಎರಡು ತಿಂಗಳ ನಂತರ ಮತ್ತೊಮ್ಮೆ ವೀರ್ಯದ ಗುಣಮಟ್ಟವನ್ನು ಪರೀಕ್ಷಿಸಲಾಗಿತ್ತು. ಕೋವಿಡ್-19ಕ್ಕೆ ಪಾಸಿಟಿವ್ ಬಂದ ಅಥವಾ ಕೋವಿಡ್‌ನ ಗುಣಲಕ್ಷಣ ಕಂಡುಬಂದ ವ್ಯಕ್ತಿಗಳನ್ನು ಅಧ್ಯಯನಕ್ಕೆ ಪರಿಗಣಿಸಲಿಲ್ಲ.
ಅಧ್ಯಯನಕ್ಕಾಗಿ ಆಯ್ಕೆ ಮಾಡಿದ 53 ಮಂದಿಯೂ ಎರಡು ಡೋಸ್ ವ್ಯಾಕ್ಸಿನ್‌ನ್ನು ಪಡೆದಿದ್ದರು. ವ್ಯಾಕ್ಸಿನ್ ಪಡೆದ ನಂತರವೂ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ. ಈ ಸಂಶೋಧನೆಯಿಂದ ಭಾರತದಲ್ಲಿ ಉಪಯೋಗಿಸುವ ಕೋವಿಡ್ ವ್ಯಾಕ್ಸಿನ್ ಸುರಕ್ಷತೆಯ ಬಗ್ಗೆ ಭರವಸೆ ಮೂಡಿದೆ. ಈ ಸಂಶೋಧನೆಯಿಂದ ವ್ಯಾಕ್ಸಿನೇಷನ್ ಬಗ್ಗೆ ಇದ್ದ ಹಲವು ಊಹಾಪೋಹ, ಆತಂಕಗಳು ದೂರವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:50 pm, Thu, 15 September 22