ದೇವರ ದರ್ಶನ ಪಡೆಯಲು ಅಂಗಿ-ಬನಿಯನ್ ತೆಗೆಯಬೇಕೆಂಬ ನಿಯಮಕ್ಕೆ ಆಕ್ಷೇಪ: ಕುಕ್ಕೆ, ಕೊಲ್ಲೂರು ದೇಗುಲ ಆಡಳಿತ ಮಂಡಳಿ ವಿರುದ್ಧ ದೂರು
‘ಹಿಂದೂ ಧರ್ಮದ ಯಾವುದೇ ಧರ್ಮಗ್ರಂಥಗಳಲ್ಲಿ ಇಂಥ ನಿಯಮಗಳ ಉಲ್ಲೇಖ ಇಲ್ಲ’ ಎಂದು ಮನವಿ ಸಲ್ಲಿಸಿರುವವರು ತಿಳಿಸಿದ್ದಾರೆ.
ಉಡುಪಿ: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಹಾಗೂ ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಕೊಲ್ಲೂರು ಮೂಕಾಂಬಿಕಾ ದೇಗುಲಗಳಲ್ಲಿ ಪುರುಷ ಭಕ್ತರು ಅಂಗಿ-ಬನಿಯನ್ ತೆಗೆದು ದೇವರ ದರ್ಶನಕ್ಕೆ ಬರಬೇಕು ಎನ್ನುವ ನಿಯಮ ಬದಲಿಸಬೇಕೆಂದು ಮಂಗಳೂರು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು ಧಾರ್ಮಿಕ ದತ್ತಿ ಇಲಾಖೆಗೆ ಲಿಖಿತ ಮನವಿ ಸಲ್ಲಿಸಿದೆ. ‘ದೇವಸ್ಥಾನಗಳಲ್ಲಿ ಅಂಗಿ-ಬನಿಯನ್ ತೆಗೆದು ದರ್ಶನ ಪಡೆಯುವ ಪದ್ಧತಿ ತಪ್ಪು. ದೇಗುಲಗಳಲ್ಲಿ ಅಳವಡಿಸಿರುವ ಸೂಚನಾ ಫಲಕ ತೆರವು ಮಾಡಬೇಕು. ಹಿಂದೂ ಸಂಪ್ರದಾಯದಲ್ಲಿ ಈ ಪದ್ಧತಿ ಇಲ್ಲ’ ಎಂದು ಒಕ್ಕೂಟವು ಆಕ್ಷೇಪಿಸಿದೆ.
ಇಂಥ ಆಚರಣೆಗಳ ಮೂಲಕ ಭಕ್ತರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಚರ್ಮ ರೋಗವಿದ್ದವರು ಅಂಗಿ ಕಳಚಿದರೆ ಅದು ಇತರರಿಗೂ ಹರಡುವ ಸಾಧ್ಯತೆಯಿದೆ. ದಿವ್ಯಾಂಗರು (ಅಂಗವಿಕಲರು) ಬಟ್ಟೆ ಕಳಚಿ ದರ್ಶನ ಪಡೆಯುವುದು ಕಷ್ಟವಾಗುತ್ತದೆ. ಇದು ಸಂವಿಧಾನದ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ತಕ್ಷಣ ದೇವಸ್ಥಾನಗಳಲ್ಲಿ ಅಳವಡಿಸಿರುವ ಫಲಕ ತೆರವುಗೊಳಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
‘ಕಡ್ಡಾಯವಾಗಿ ಅಂಗಿ-ಬನಿಯನ್ ತೆಗೆದು ಪ್ರವೇಶ ಮಾಡಬೇಕು’ ಎಂಬ ಫಲಕಗಳನ್ನು ದೇಗುಲಗಳಿಂದ ತೆಗೆಸಬೇಕು. ಇಂಥ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಡಲು ಕೆಲವರನ್ನು ಬೆತ್ತ ಹಿಡಿದು ನಿಲ್ಲಿಸುವುದನ್ನೂ ಕೂಡ ನಿಲ್ಲಿಸಬೇಕು. ಮನವಿಗೆ ಸಂಬಂಧಿಸಿದಂತೆ 15 ದಿನದ ಒಳಗೆ ಪ್ರತಿಕ್ರಿಯಿಸಬೇಕು’ ಎಂದೂ ಒಕ್ಕೂಟವು ಕೋರಿದೆ.
‘ಹಿಂದೂ ಧರ್ಮದ ಯಾವುದೇ ಧರ್ಮಗ್ರಂಥಗಳಲ್ಲಿ ಇಂಥ ನಿಯಮಗಳ ಉಲ್ಲೇಖ ಇಲ್ಲ. ಈ ಕುರಿತು ಯಾವುದೇ ಸರ್ಕಾರಿ ಆದೇಶವೂ ಪ್ರಕಟವಾಗಿಲ್ಲ. ಆದರೂ ಯಾತ್ರಿಗಳಿಗೆ ಮುಜುಗರ ಆಗುವ ಇಂಥ ನಿಯಮಗಳು ಹಲವು ವರ್ಷಗಳಿಂದ ಜಾರಿಯಲ್ಲಿರುವುದು ಏಕೆ’ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
Published On - 8:01 am, Fri, 23 September 22