ಉಡುಪಿ, ಜೂ.20: ಸ್ಥಳಿಯ ಮೊಗವೀರ(Mogaveera) ಸಮುದಾಯದವರು, ಶಿಳ್ಳೆಕ್ಯಾತ(Sillekyatha)ರ ಅಲೆಮಾರಿ ಜನಾಂಗದ ಜೊತೆ ಕ್ಯಾತೆ ತೆಗೆದು ಜಗಳವಾಡಿದ್ದಾರೆ. ಈ ವೇಳೆ ಅಲೆಮಾರಿಗಳು ಗಾಯಕ್ಕೊಳಗಾಗಿ ಆಸ್ಪತ್ರೆ ಸೇರಿದ್ದಾರೆ. ಗುಲ್ವಾಡಿ ಹೊಳೆಯಲ್ಲಿ ಕಳೆದ 10 ರಿಂದ 20 ವರ್ಷಗಳಿಂದ ಶಿಳ್ಳೆಕ್ಯಾತ ಅಲೆಮಾರಿ ಸಮುದಾಯದ ಐದಾರು ಕುಟುಂಬಗಳು ಮೀನು ಹಿಡಿದು ಜೀವನ ನಡೆಸುತ್ತಿದೆ. ನದಿ ಮತ್ತು ಹೊಳೆಯ ತೀರದಲ್ಲಿ ಸಣ್ಣಪುಟ್ಟ ಬಲೆಗಳನ್ನು ಹಾಕಿ ದಿನಗೂಲಿಯನ್ನು ದುಡಿಯುತ್ತಾರೆ. ಇದೇ ವಿಚಾರಕ್ಕೆ ಸ್ಥಳೀಯ ಮೊಗವೀರ ಹಾಗೂ ಶಿಳ್ಳೆಕ್ಯಾತರ ಸಮುದಾಯದ ನಡುವೆ ಜಗಳ ಶುರುವಾಗಿದೆ.
ಹಲವಾರು ವರ್ಷಗಳಿಂದ ಜಗಳ ಹೊಡೆದಾಟಗಳು ನಡೆಯುತ್ತಾ ಬಂದಿದೆ. ಈವರೆಗೆ ವಿಕೋಪಕ್ಕೆ ಹೋಗಿರಲಿಲ್ಲ. ಆದರೆ, ಕಳೆದ ವಾರ ದೊಡ್ಡ ಮಾರಾ ಮಾರಿಯೇ ನಡೆದುಬಿಟ್ಟಿದೆ. ಸುಮಾರು 25 ಜನ ಗಂಗೊಳ್ಳಿ ಭಾಗದ ಮೀನುಗಾರರು ತೆಪ್ಪಗಳಿಗೆ ದಾಳಿ ಮಾಡಿ, ಮಹಿಳೆಯರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಇನ್ನು ಮುಂದೆ ನದಿಗೆ ಇಳಿಯಬಾರದು, ಕಸುಬು ನಡೆಸಬಾರದು ಎಂದು ತಾಕೀತು ಮಾಡಿದ್ದಾರೆ.
ಇದನ್ನೂ ಓದಿ:ವಾಯುಭಾರ ಕುಸಿತ: 5 ದಿನ ಮೀನುಗಾರಿಕೆಗೆ ತೆರಳದಂತೆ ಉತ್ತರ ಕನ್ನಡ ಜಿಲ್ಲಾಡಳಿತ ಸೂಚನೆ
ಹಲ್ಲೆ ನಡೆಸಿದವರು ವಿರುದ್ಧ ಶಿಳ್ಳೆಕ್ಯಾತ ಸಮುದಾಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಅಲೆಮಾರಿ ಸಮುದಾಯ ಜೊತೆ ಎಡಪಂಥೀಯ ಸಂಘಟನೆಗಳು ಬೆಂಬಲವಾಗಿ ನಿಂತಿದೆ. ಈ ಘಟನೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಅಲೆಮಾರಿ ಸಮುದಾಯಕ್ಕೆ ಶಿಕ್ಷಣ ಮತ್ತು ಆರ್ಥಿಕ ಶಕ್ತಿಯನ್ನು ಸರಕಾರ ನೀಡಬೇಕು ಎಂದು ಒತ್ತಾಯಿಸಿದೆ. ಮಳೆಗಾಲದಲ್ಲಿ ಅಪಾಯದಲ್ಲಿ ಜೀವನ ನಡೆಸುವ ಅಲೆಮಾರಿ ಜನಾಂಗಕ್ಕೆ ಜಿಲ್ಲಾಡಳಿತ ರಕ್ಷಣೆ ಕೊಡಬೇಕು. ಇಡೀ ಜಿಲ್ಲೆಯಲ್ಲಿ ಬೆರಳೆಣಿಕೆಯ ಕುಟುಂಬಗಳು ಮಾತ್ರ ಅಲ್ಲಲ್ಲಿ ತೆಪ್ಪ ಮೀನುಗಾರಿಕೆಯಲ್ಲಿ ತೊಡಗಿರೋದರಿಂದ ಮೊಗವೀರರ ಜೊತೆ ಸಂಧಾನ ನಡೆಸುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲೂ ಇದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ