ಎರಡು ತಿಂಗಳ ಕಾಲ ಮೀನುಗಾರಿಕೆ ಬಂದ್; ಕಡಲಿಗೆ ಇಳಿಯದಂತೆ ಮೀನುಗಾರಿಕೆ ಇಲಾಖೆ ಎಚ್ಚರಿಕೆ
ಪ್ರತಿ ದಿನ ಆಳ ಸಮುದ್ರಕ್ಕೆ ಇಳಿದು ಮತ್ಸ್ಯ ಶಿಕಾರಿ ಮಾಡುವ ಕಡಲ ಮಕ್ಕಳಿಗೆ ಇನ್ನು ಎರಡು ತಿಂಗಳು ವನವಾಸ ಪ್ರಾರಂಭವಾದಂತೆ. ಸರ್ಕಾರ ಮಳೆಗಾಲ ಪ್ರಾರಂಭದ ಸಮಯ ಎರಡು ತಿಂಗಳು ಮೀನುಗಾರಿಕೆ ಮಾಡುವುದಕ್ಕೆ ನಿಷೇದ ಹೇರುತ್ತದೆ. ಈ ನಿಟ್ಟಿನಲ್ಲಿ ಕಡಲ ನಗರಿ ಕಾರವಾರದಲ್ಲಿ ಕಡಲ ಮಕ್ಕಳು ತಮ್ಮ ತಮ್ಮ ಬೋಟ್ಗಳನ್ನ ಬಂದರಿಗೆ ತಂದು ಮೀನುಗಾರಿಕೆ ಮಾಡುವ ಕಾಯಕವನ್ನ ನಿಲ್ಲಿಸಿದ್ದು, ಈ ಕುರಿತು ಒಂದು ಸ್ಟೋರಿ ಇಲ್ಲಿದೆ.
ಉತ್ತರ ಕನ್ನಡ, ಜೂ.02: ಮೀನುಗಾರರನ್ನ ಕಡಲ ಮಕ್ಕಳು ಎಂದೇ ಕರೆಯುತ್ತಾರೆ. ಪ್ರತಿ ದಿನ ಆಳ ಸಮುದ್ರಕ್ಕೆ ಇಳಿದು ಮೀನಿನ ಶಿಕಾರಿ ಮಾಡಿಕೊಂಡು ಬಂದು ತಮ್ಮ ಹೊಟ್ಟೆಯನ್ನ ತುಂಬಿಸಿಕೊಳ್ಳುವ ಕಾಯಕವನ್ನ ವರ್ಷ ಪೂರ್ತಿ ಮಾಡುತ್ತಾರೆ. ಆದರೆ, ಜೂನ್ ಮತ್ತು ಜುಲೈ ತಿಂಗಳು ಮಾತ್ರ ಮೀನುಗಾರರಿಗೆ ವನವಾಸ ಇದ್ದಂತೆ. ಸರ್ಕಾರ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮಳೆಗಾಲ ಆಗಿರುವುದರಿಂದ ಜೊತೆಗೆ ಮೀನು ಮೊಟ್ಟೆ ಇಟ್ಟು ಸಂತತಿ ವೃದ್ದಿ ಮಾಡುವ ಸಮಯವಾದರಿಂದ ಮೀನುಗಾರಿಕೆ ಮೇಲೆ ನಿಷೇದ ಹೇರಿರುತ್ತದೆ.
ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಖಡಕ್ ಎಚ್ಚರಿಕೆ
ಈ ಎರಡು ತಿಂಗಳುಗಳ ಕಾಲ ಯಾವುದೇ ಕಾರಣಕ್ಕೂ ಮೀನುಗಾರರು ಕಡಲಿಗೆ ಮೀನುಗಾರಿಕೆ ಮಾಡಲು ಇಳಿಯುವಂತಿಲ್ಲ. ಈ ನಿಟ್ಟಿನಲ್ಲಿ ನಾಳೆಯಿಂದ ಮೀನುಗಾರಿಕೆ ನಿಷೇಧ ಪ್ರಾರಂಭವಾಗುವುದರಿಂದ, ಕಡಲ ನಗರಿ ಕಾರವಾರದ ಬೈತಕೋಲ ಬಂದರಿನಲ್ಲಿ ಮೀನುಗಾರರು ಈ ವರ್ಷದ ತಮ್ಮ ಕಾಯಕವನ್ನ ಇಂದು ನಿಲ್ಲಿಸಿದರು. ಬಂದರಿಗೆ ನೂರಾರು ಮೀನುಗಾರರು ವಾಪಾಸ್ ಬೋಟ್ಗಳನ್ನ ತಂದು ಲಂಗರು ಹಾಕಿ ನಿಲ್ಲಿಸಿದ್ದು, ಮೀನುಗಾರರು ಯಾವುದೇ ಕಾರಣಕ್ಕೂ ನಾಳೆಯಿಂದ ಕಡಲಿಗೆ ಇಳಿಯದಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಅರಬ್ಬೀ ಸಮುದ್ರದಲ್ಲಿ ಭಾರೀ ಮತ್ಸ್ಯ ಕ್ಷಾಮ: ಮೀನುಗಾರಿಕೆ ನಿಷೇಧದ ಅವಧಿಗೂ ಮೊದಲೇ ಬಂದರಿನಲ್ಲಿ ಲಂಗರು ಹಾಕಿದ ಬೋಟ್‌ಗಳು
ಮೀನುಗಾರಿಕೆಯನ್ನ ನಂಬಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಜೀವನ
ಇನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕಿನ ಬಂದರುಗಳಲ್ಲಿ ಸುಮಾರು ಐದನೂರಕ್ಕೂ ಅಧಿಕ ಬೋಟ್‌ಗಳು ಮೀನುಗಾರಿಕೆಗೆ ಆಳ ಸಮುದ್ರಕ್ಕೆ ತೆರಳುತ್ತದೆ. ಮೀನುಗಾರಿಕೆಯನ್ನ ನಂಬಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಜೀವನ ಸಾಗಿಸುತ್ತಿದ್ದು, ಎರಡು ತಿಂಗಳು ಮೀನುಗಾರಿಕೆ ನಿಷೇಧ ಇರುವ ಹಿನ್ನಲೆಯಲ್ಲಿ ಕಡಲ ಮಕ್ಕಳು ಕೆಲಸ ಇಲ್ಲದಂತೆ ಇರುತ್ತಾರೆ. ಈ ವೇಳೆ ಬೋಟ್ಗಳನ್ನ ದಡಕ್ಕೆ ತಂದು ರಿಪೇರಿ ಕಾರ್ಯ ಮಾಡುವುದು, ಬಲೆಗಳನ್ನ ಸರಿ ಪಡಿಸಿಕೊಳ್ಳುವ ಕಾರ್ಯ ಮಾಡುತ್ತಾರೆ.
ಸರ್ಕಾರ ಮೀನುಗಾರರ ನೆರವಿಗೆ ಬರಬೇಕು-ಬೋಟ್ ಮಾಲಿಕರು
ಅಲ್ಲದೇ ಬೋಟ್ಗಳಲ್ಲಿ ಹೊರ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಎಲ್ಲರೂ ತಮ್ಮ ತಮ್ಮ ಊರಿನತ್ತ ಎರಡು ತಿಂಗಳ ನಿಷೇಧ ಇರುವ ಹಿನ್ನಲೆಯಲ್ಲಿ ಪ್ರಯಾಣ ಬೆಳೆಸುತ್ತಾರೆ. ಈ ಬಾರಿ ಹತ್ತು ದಿನ ಮುಂಚಿತವಾಗಿಯೇ ಚಂಡ ಮಾರುತ ಎಂದು ಮೀನುಗಾರಿಕೆ ನಿಂತಿದ್ದು, ಕಡಲ ಮಕ್ಕಳು ಹಲವು ಸಮಸ್ಯೆಗಳನ್ನ ಅನುಭವಿಸುತ್ತಾರೆ. ಈ ಕುರಿತು ಬೋಟ್ ಮಾಲಿಕರು ಮಾತನಾಡಿ, ‘ಎರಡು ತಿಂಗಳ ಕಾಲ ಕೆಲಸ ಇಲ್ಲದ ಸಂದರ್ಭದಲ್ಲಿ ಸರ್ಕಾರ ಮೀನುಗಾರರ ನೆರವಿಗೆ ಬರಬೇಕು ಎನ್ನುತ್ತಾರೆ .
ಮೀನುಗಾರಿಕೆ ಆಳ ಸಮುದ್ರಲ್ಲಿ ನಿಷೇಧ ಇರುವ ಹಿನ್ನಲೆಯಲ್ಲಿ ಎರಡು ತಿಂಗಳು ದಡದಲ್ಲಿಯೇ ಏಂಡಿ ಬಲೆ ಹಾಕಿ ಮೀನುಗಾರಿಕೆ ಮಾಡುವ ಕೆಲಸವನ್ನ ಕೆಲ ಮೀನುಗಾರರು ಮಾಡುತ್ತಾರೆ. ಈ ಸಂದರ್ಭದಲ್ಲಿ ಮೀನು ಸಿಕ್ಕರೆ ಸ್ವಲ್ಪ ಹೊಟ್ಟೆ ತುಂಬಲಿದೆ ಎನ್ನುವುದು ಮೀನುಗಾರರ ಅಭಿಪ್ರಾಯ. ಒಟ್ಟಿನಲ್ಲಿ ನಾಳೆಯಿಂದ ಆಳ ಸಮುದ್ರದಲ್ಲಿ ಬೋಟ್ಗಳ ಸದ್ದು ನಿಲ್ಲಲಿದ್ದು, ಮತ್ತೆ ಬೋಟ್ಗಳ ಸದ್ದು ಕೇಳಬೇಕಾದರೆ ಆಗಸ್ಟ್ ತಿಂಗಳವರೆಗೆ ಕಾಯುವುದು ಅನಿವಾರ್ಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Sun, 2 June 24