ಉಡುಪಿ, (ಆಗಸ್ಟ್ 02): ಉಡುಪಿ(Udupi) ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಪ್ರಕರಣಕ್ಕೆ ಹಿಂದೂ ಮುಸ್ಲಿಂ ಬಣ್ಣ ಬಳಿದುಕೊಂಡಿದ್ದು, ರಾಷ್ಟ್ರಮಟ್ಟದವರೆಗೂ ಭಾರೀ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಇದೀಗ ಉಡುಪಿಯಲ್ಲಿ ನೈತಿಕ ಪೊಲೀಸ್ಗಿರಿ(Moral Policing) ಬೆಳಕಿಗೆ ಬಂದಿದೆ. ಹೌದು…ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಂಟಲ್ಪಾಡಿ ಗ್ರಾಮದ ಬಳಿ ಮಂಗಳೂರಿನ ಕಾಲೇಜಿನ ವೈದ್ಯರ ತಂಡ ತೆರಳುತ್ತಿದ್ದ ಕಾರು ತಡೆದು ಅವಾಜ್ ಹಾಕಿ ಪೊಲೀಸ್ಗಿರಿ ನಡೆಸಿದ್ದಾರೆ. ಈ ಸಂಬಂಧ ಕಾರ್ಕಳ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ, ಸಂದೀಪ್ ಪೂಜಾರಿ, ಸುಜಿತ್ ಸಫಲಿಗ ಬಂಧಿತ ಆರೋಪಿಗಳು.
ಇದನ್ನೂ ಓದಿ: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ; ಖಾಸಗಿ ಸುದ್ದಿ ವೆಬ್ಸೈಟ್ ವರದಿಗಾರನ ಮೇಲೆ ಹಲ್ಲೆ ಯತ್ನ
ಮಾಳ ಎಸ್.ಕೆ. ಗಡಿ ಬಳಿಯಿಂದ ಕಾರು ಹಿಂಬಾಲಿಸಿದ್ದ ಗುಂಪು, ಕುಂಟಲ್ಪಾಡಿ ಬಳಿ ಕಾರು ಅಡ್ಡಗಟ್ಟಿ ವಿಭಿನ್ನ ಕೋಮಿಗೆ ಸೇರಿದವರು ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಅವಾಜ್ ಹಾಕುವುದರ ಜೊತೆಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಆ ವೇಳೆ ಕಾರಿನಲ್ಲಿದ್ದ ಮಹಿಳೆ 112ಗೆ ಕರೆಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಕಾರ್ಕಳ ಪೊಲೀಸರು, ಐವರನ್ನು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಮಂಗಳೂರಿನ ಹೆಸರಾಂತ ಕಾಲೇಜಿನ ವೈದ್ಯರ ತಂಡ ಕಾರಿನಲ್ಲಿ ಶೃಂಗೇರಿಗೆ ತೆರಳಿ ಕಾರ್ಕಳದ ಕುಂಟಲ್ಪಾಡಿ ಮೂಲಕ ಮಂಗಳೂರಿಗೆ ವಾಪಸ್ ಆಗುತ್ತಿದ್ದಾಗ ಆರೋಪಿಗಳು, ಮಾಳ ಎಸ್ ಕೆ ಬಾರ್ಡರ್ ಬಳಿಯಿಂದ ಕಾರನ್ನು ಹಿಂಬಾಲಿಸಿ ಕುಂಟಲ್ಪಾಡಿ ಬಳಿ ಕಾರನ್ನು ಅಡ್ಡಗಟ್ಟಿದ್ದಾರೆ. ಅಲ್ಲದೇ ವಿಭಿನ್ನ ಕೋಮಿಗೆ ಸೇರಿದವರು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೂಗಾಡಿದ್ದಾರೆ. ಕಾರಿನಲ್ಲಿದ್ದ ಮಹಿಳೆ ಕೂಡಲೇ ನೇರವಾಗಿ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಮಾಹಿತಿ ಆಧರಿಸಿ ಕೂಡಲೇ ಸ್ಥಳಕ್ಕೆ ಡಿ ವೈ ಎಸ್ ಪಿ ಅರವಿಂದ್ ಕಲಗುಜ್ಜೆ, ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್, ನಗರ ಠಾಣಾಧಿಕಾರಿ ಸಂದೀಪ್ ಶೆಟ್ಟಿ, ಗ್ರಾಮಾಂತರ ಠಾಣಾಧಿಕಾರಿ ದಿಲೀಪ್ ಭೇಟಿ ನೀಡಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.