ಕೋಟ ಅಮೃತೇಶ್ವರಿ: ಅಸಂಖ್ಯಾತ ಮಕ್ಕಳ ತಾಯಿ ಮುಂದೆ ಸಂತಾನ ಪ್ರಾಪ್ತಿಗಾಗಿ ಸೆರಗೊಡ್ಡಿದರೆ ಖಾಲಿ ಉಳಿದ ಇತಿಹಾಸವೇ ಇಲ್ಲ!

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 12, 2023 | 3:22 PM

ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಲ್ಲಿರುವ ಹಲವು ಮಕ್ಕಳ ತಾಯಿ ಎಂದೆ ಖ್ಯಾತಿ ಪಡೆದಿರುವ ಅಮೃತೇಶ್ವರಿ ದೇವಿಯ ಜಾತ್ರೆ ಅದ್ದೂರಿಯಾಗಿ ನಡೆದಿದ್ದು, ರಾಜ್ಯ ಮತ್ತು ಅನ್ಯರಾಜ್ಯಗಳಿಂದಲೂ ಭಕ್ತರು ಬಂದಿದ್ದರು.

ಕೋಟ ಅಮೃತೇಶ್ವರಿ: ಅಸಂಖ್ಯಾತ ಮಕ್ಕಳ ತಾಯಿ ಮುಂದೆ ಸಂತಾನ ಪ್ರಾಪ್ತಿಗಾಗಿ ಸೆರಗೊಡ್ಡಿದರೆ ಖಾಲಿ ಉಳಿದ ಇತಿಹಾಸವೇ ಇಲ್ಲ!
ಅಮೃತೇಶ್ವರಿ ದೇವಿ
Follow us on

ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಲ್ಲಿರುವ ಶ್ರೀ ಅಮೃತೇಶ್ಚರೀ ದೇವಿಯನ್ನ ಹಲವು ಮಕ್ಕಳ ತಾಯಿ ಎಂದೆ ಖ್ಯಾತಿಯಾಗಿದೆ. ಕೋಟ ರಾಷ್ಟ್ರೀಯ ಹೆದ್ದಾರಿ 66 ರ ಪಶ್ವಿಮ ದಿಕ್ಕಿನಲ್ಲಿರುವ ಈ ಅಮೃತೇಶ್ವರಿ ಸನ್ನಿಧಿಯು ಪುರಾಣ ಕಾಲದಿಂದಲೂ ಸಂತಾನ ಪ್ರಾಪ್ತಿಗೆ ಹೆಸರಾಗಿರುವ ಕ್ಷೇತ್ರ. ಖರಾಸುರ ದಂಪತಿಗಳಿಂದ ಸ್ಥಾಪಿತವಾಗಿರುವ ಈ ಕ್ಷೇತ್ರದಲ್ಲಿ ಮಕ್ಕಳಿಲ್ಲದವರು ಪ್ರಾರ್ಥನೆ ಸಲ್ಲಿಸಿದರೆ ಮಕ್ಕಳಾಗುತ್ತದೆ ಎನ್ನುವ ಸಾಕಷ್ಟು ನಿದರ್ಶನಗಳಿವೆ. ಸಂತಾನ ಪ್ರಾಪ್ತಿಗಾಗಿ ಈ ಕ್ಷೇತ್ರದಲ್ಲಿ ಬೆಳಕಿನ ಸೇವೆ ಯಕ್ಷಗಾನ ಮಾಡಿಸುವುದು ಹರಕೆ ಸೇವೆಯ ರೂಪದಲ್ಲಿದೆ. ಸಾಕಷ್ಟು ಭಕ್ತರು ಬೆಳಕಿನ ಸೇವೆಯ ಮೂಲಕ ಸಂತಾನ ಪ್ರಾಪ್ತಿ ಪಡೆದಿರುವ ಹಿನ್ನಲೆ ಇದೆ.

ಕ್ಷೇತ್ರದ ಸ್ಥಳ ಸಾನಿಧ್ಯದ ಪ್ರಖ್ಯಾತಿ ಕರಾವಳಿಯಿಂದ ಹಿಡಿದು ರಾಜ್ಯದ ನಾನಾ ಭಾಗಗಳಿಗೂ ಹರಡಿದೆ. ಪ್ರತಿ ವರ್ಷ ಜನವರಿ 9, 10 ಮತ್ತು 11 ತಾರೀಖಿನಂದು ಇಲ್ಲಿ ವಾರ್ಷಿಕ ಉತ್ಸವ ನಡೆಯುತ್ತದೆ. ದೇಶ ವಿದೇಶದಿಂದಲೂ ಭಕ್ತರು ಆಗಮಿಸಿ ಶ್ರೀದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಸುಮಾರು ಎಂಟು ವರ್ಷಗಳ ಹಿಂದೆ ಶ್ರೀ ದೇವಳವು ಜೀರ್ಣೋದ್ಧಾರಗೊಂಡು ಪುನರ್ ಪ್ರತಿಷ್ಠೆ ನಡೆದ ಬಳಿಕ ಇನ್ನಷ್ಟು ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಕೋರೋನಾ ಕಾರ್ಮೋಡ ಕವಿದ ಹಿನ್ನಲೆಯಲ್ಲಿ ದೇವಳದ ಜಾತ್ರೆಗೆ ನಿಷೇಧ ಹೇರಲಾಗಿತ್ತು. ಕೇವಲ ಧಾರ್ಮಿಕ ಪೂಜಾ ವಿಧಿ ವಿಧಾನಗಳಿಗೆ ಸೀಮಿತವಾಗಿ ಜಾತ್ರೆ ಆಚರಿಸಿಲಾಗಿತ್ತು.

ಈ ಬಾರಿ ಕೊರೋನಾ ಇಲ್ಲದ ಹಿನ್ನಲೆಯಲ್ಲಿ ಉತ್ಸಾಹದಿಂದ ಕ್ಷೇತ್ರಕ್ಕೆ ಭಕ್ತರು ಆಗಮಿಸುತ್ತಿದ್ದಾರೆ. ಜಾತ್ರೆಯ ಅಂಗವಾಗಿ ಮೊದಲದಿನ ಸೋಮವಾರ ದೇವಳದ ಧಾರ್ಮಿಕ ಕಾರ್ಯಕ್ರಮ ನಡೆಯಿತು, ಮಂಗಳವಾರದಂದು ರಾತ್ರಿ ದೇವಿಯ ವೈಭವದ ಕೆಂಡ ಸೇವೆ, ಹಾಲಿಟ್ಟು ಸೇವೆ ನಡೆದಿದ್ದು, ಇಂದು(ಜ.12) ಜಾತ್ರೆಯ ಮೂರನೆಯ ದಿನದ ಅಂಗವಾಗಿ ಮದ್ಯಾಹ್ನ ಢಕ್ಕೆಬಲಿ ಸೇವೆ ನಂತರ ತುಲಾಭಾರ ಸೇವೆಗಳು ನಡೆಯಿತು. ವಿಶೇಷವಾಗಿ ಈ ಬಾರಿ ಪ್ಲಾಸ್ಟಿಕ್‌ ಮುಕ್ತ ಜಾತ್ರೆಯಾಗುವ ಉದ್ದೇಶದಿಂದ ಸ್ಥಳೀಯ ಸಂಘಟನೆಗಳ ಸಹಭಾಗಿತ್ವದಲ್ಲಿ ಬಟ್ಟೆ ಚೀಲಗಳ ವಿತರಣೆ ಕೂಡ ನಡೆಯಿತು.

ಇದನ್ನೂ ಓದಿ:ವಿಜಯಪುರ: ಗುಡ್ಡಾಪುರ ದಾನಮ್ಮ ದೇವಿ ಜಾತ್ರೆ ಸಂಭ್ರಮ; ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಸಾವಿರಾರು ಭಕ್ತರು

ಒಟ್ಟಾರೆಯಾಗಿ ಕೋಟ ಭಾಗದ ಹಲವು ಮಕ್ಕಳು ತಾಯಿ ಸಂತಾನ ಭಾಗ್ಯವಿಲ್ಲದವರ ಪಾಲಿನ ಆಶಾಕಿರಣವಾಗಿದ್ದಾಳೆ. ಬೇಡಿ ಬರುವ ಭಕ್ತರ ಆಶೋತ್ತರಗಳನ್ನು ಈಡೇರಿಸುವ ಈ ಕ್ಷೇತ್ರ ಮಹಿಮೆ ತಿಳಿದು ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕ್ಷೇತ್ರದ ಮಹಿಮೆಯನ್ನು ತಿಳಿಸುತ್ತದೆ.

ವರದಿ: ದಿನೇಶ್ ಯಲ್ಲಾಪುರ್ ಟಿವಿ9 ಉಡುಪಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​  ಮಾಡಿ