ಉಡುಪಿ: ಕೊಲೆಯಾದ ಹರ್ಷನ ಕುಟುಂಬಕ್ಕೆ ಟಿಕೆಟ್ ಕೊಡುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಿದ್ದರು. ಟಿಕೆಟ್ ಕೊಟ್ಟರೆ ಅಭ್ಯರ್ಥಿ ನಿಲ್ಲಿಸುವುದಿಲ್ಲ ಎಂದು ಕೈ ನಾಯಕರು ಹೇಳಿದ್ದರು. ಇದೀಗ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಗರಂ ಆಗಿದ್ದಾರೆ. ಕಾಂಗ್ರೆಸಿಗರು ಯಾರು ಟಿಕೆಟ್ ಕೊಡಲು ಹೇಳಲು? ನಮ್ಮ ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ ನವರದ್ದು ಬೇಜವಾಬ್ದಾರಿ ಹೇಳಿಕೆ ಎಂದು ಇಂದು (ಮಾರ್ಚ್ 2) ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಅವರ ಅವಧಿಯಲ್ಲಿ 23 ಹಿಂದೂ ಕಾರ್ಯಕರ್ತರ ಹತ್ಯೆಗಳಾಗಿವೆ. ಆಗ ಕಾಂಗ್ರೆಸಿಗರ ಹೇಳಿಕೆ ಏನಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ನೀವು ಮೂಲಭೂತವಾದಿ ಸಂಘಟನೆಯವರಿಗೆ ಬೆಂಬಲ ನೀಡಿದ್ದೀರಿ. ನೀವು ಅವರ ಕೇಸ್ ವಾಪಾಸು ಪಡೆದಿದ್ದರಿಂದಲೇ ಇವತ್ತು ಕೊಲೆ ಕೃತ್ಯ ನಡೆಯುತ್ತಿದೆ. ನಮ್ಮ ಸರಕಾರ ಹರ್ಷನ ಕುಟುಂಬಕ್ಕೆ ಸಂಪೂರ್ಣ ನೆರವು ನೀಡಿದೆ ಎಂದು ಕೈ ನಾಯಕರ ವಿರುದ್ಧ ಸಚಿವ ಕೋಟ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಸೂಚಿಸಿದರೆ ಶಿವಮೊಗ್ಗದಲ್ಲಿ ಈಚೆಗೆ ಕೊಲೆಯಾದ ಬಜರಂಗದಳ ಕಾರ್ಯಕರ್ತ ಹರ್ಷ (Bajarangadal Activist Harsha) ಕುಟುಂಬಕ್ಕೆ ಶಾಸಕ ಸ್ಥಾನ ಬಿಟ್ಟುಕೊಡಲು ನಾನು ಸಿದ್ಧ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದ್ದರು. ಹರ್ಷ ಸಹೋದರಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ನನಗೆ ಯಾವುದೇ ತಕರಾರು ಇಲ್ಲ. ರಾಜಕಾರಣದಲ್ಲಿ ಅವಕಾಶ ನೀಡಿದರೆ ನಾನು ಮತ್ತೊಬ್ಬ ಹಿಂದೂಗೆ ಕೊಡುತ್ತೇನೆಯೇ ಹೊರತು ಮುಸಲ್ಮಾನರಿಗೆ ಅಲ್ಲ ಎಂದು ಹೇಳಿದ್ದರು.
ಆದರೆ ಕಾಂಗ್ರೆಸ್ ನಾಯಕರು ಹೀಗೆ ಮಾಡಬಲ್ಲರಾ? ಕಾಂಗ್ರೆಸ್ನವರಿಗೆ ಸ್ಥಾನ ಬೇಕು. ಮುಸಲ್ಮಾನರ ವೋಟು ಬೇಕು. ಕೊನೆಗೆ ಬಿಜೆಪಿಯನ್ನು ಟೀಕಿಸಬೇಕು. ಅದಷ್ಟೇ ಅವರ ಗುರಿ ಎಂದು ಹೇಳಿದ್ದರು. ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ಪ್ರಸ್ತಾಪಿಸಿ ಈಶ್ವರಪ್ಪ ಕಾಂಗ್ರೆಸ್ ಪಕ್ಷವನ್ನು ಮನಸೋಯಿಚ್ಛೆ ಟೀಕಿಸಿದ್ದರು. ಮುಸ್ಲಿಮರು ಕಾಂಗ್ರೆಸ್ ಪಕ್ಷದ ಬೀಗರು. ನಾನೊಬ್ಬನೇ ಹಿಂದುವಲ್ಲ. ಪಕ್ಷ ಸೂಚಿಸಿದರೇ ಹರ್ಷನ ಸಹೋದರಿಗೆ ಸೀಟು ಬಿಟ್ಟು ಕೊಡಲು ನಾನು ಸಿದ್ಧನಿದ್ದೇನೆ. ಆದರೆ ಎಂದಿಗೂ ಮುಸ್ಲಿಮರಿಗೆ ಕೊಡುವುದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಈಶ್ವರಪ್ಪ ಟಿಕೆಟ್ ತ್ಯಜಿಸಿ ಹರ್ಷನ ತಂಗಿಗೆ, ಎಂಪಿ ಟಿಕೆಟ್ ತಾಯಿಗೆ ಕೊಡಲಿ -ಅವಿರೋಧವಾಗಿ ಆಯ್ಕೆ ಮಾಡಿಸೋಣ ಎಂದ ಇಬ್ರಾಹಿಂ
ಇದನ್ನೂ ಓದಿ: BJP: ಬಿಜೆಪಿ ಸೂಚಿಸಿದರೆ ಶಿವಮೊಗ್ಗದ ಹರ್ಷ ಕುಟುಂಬಕ್ಕೆ ಶಾಸಕ ಸ್ಥಾನ: ಈಶ್ವರಪ್ಪ ಭರವಸೆ