ಕುಂದಾಪುರ: 2024ರ ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಲು ಕುಂದಾಪುರದ ಚಮ್ಮಾರ ಮಣಿಕಂಠ ಎಂಬುವವರಿಗೆ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಆಹ್ವಾನ ನೀಡಿದ್ದಾರೆ. ನವದೆಹಲಿಯ ಕೆಂಪು ಕೋಟೆಯಲ್ಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಚಮ್ಮಾರ ಮಣಿಕಂಠ ಅವರಿಗೆ ಆಹ್ವಾನ ಬಂದಿದ್ದು, ನರೇಂದ್ರ ಮೋದಿಯವರೇ ಕರೆದಿರುವುದರಿಂದ ಮಣಿಕಂಠ ಅವರು ರಾತ್ರೋರಾತ್ರಿ ಕುಂದಾಪುರದಲ್ಲಿ ಸೆಲೆಬ್ರಿಟಿಯಾಗಿಬಿಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ ಚಪ್ಪಲಿಗಳನ್ನು ಹೊಲಿಯುವ ಕೆಲಸ ಮಾಡುತ್ತಿರುವ ಮಣಿಕಂಠ ಅವರು ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆಯ ಫಲಾನುಭವಿಯಾಗಿದ್ದಾರೆ. ಹೀಗಾಗಿ, ಅವರಿಗೆ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದ್ದು, ಮಣಿಕಂಠ ಅವರು ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡುವ ಸಂಭ್ರಮದಲ್ಲಿದ್ದಾರೆ.
“ವಿಮಾನದಲ್ಲಿ ಪ್ರಯಾಣಿಸುವ ಅವಕಾಶವನ್ನು ಪಡೆಯಲು ನಾನು ತುಂಬಾ ಉತ್ಸುಕನಾಗಿದ್ದೇನೆ. ನನ್ನ ಜೀವನದಲ್ಲಿ ಮೊದಲ ಬಾರಿಗೆ ವಿಮಾನದಲ್ಲಿ ಕೂರುತ್ತಿದ್ದೇನೆ. ಹಾಗೇ, ಮೊದಲ ಬಾರಿಗೆ ದೆಹಲಿಗೆ ತೆರಳುತ್ತಿದ್ದೇನೆ. ನನ್ನಂತಹ ಸಾಮಾನ್ಯ ಚಮ್ಮಾರನನ್ನು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ನನಗೆ ನಂಬಲಾಗದಷ್ಟು ಸಂತೋಷ ಮತ್ತು ಆಶ್ಚರ್ಯವನ್ನು ಉಂಟುಮಾಡಿದೆ” ಎಂದು ಮಣಿಕಂಠ ಸಂತಸ ವ್ಯಕ್ತಪಡಿಸಿದ್ದಾರೆ.
ಮಣಿಕಂಠ ಅವರು ಇದುವರೆಗೂ ಟಿವಿಯಲ್ಲಿ ಮಾತ್ರ ಗಣರಾಜ್ಯೋತ್ಸವ ಪರೇಡ್ ಅನ್ನು ವೀಕ್ಷಿಸಿದ್ದರು. ಈ ಬಾರಿ ನೇರವಾಗಿ ಈ ದೃಶ್ಯವನ್ನು ವೀಕ್ಷಿಸುವ ಅವಕಾಶ ಸಿಕ್ಕಿದೆ. ಕುಂದಾಪುರ ಪಟ್ಟಣದ ಪುರಸಭೆಯ ಅಧಿಕಾರಿಗಳು ಮಣಿಕಂಠ ಅವರಿಗೆ ಯಾವುದೇ ತೊಂದರೆಯಿಲ್ಲದ ಪ್ರಯಾಣದ ಅನುಭವವನ್ನು ನೀಡಲು ಮುಂದಾಗಿದ್ದು, ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ: ಕುಂದಾಪುರ ತಾಯಿ-ಮಗಳ ಸಾಹಸ: ಭಾರತ-ಚೀನಾ ಗಡಿಯಲ್ಲಿ ಜಗತ್ತಿನ ತುತ್ತತುದಿಗೆ ಬೈಕ್ ಪ್ರಯಾಣ
ಮಣಿಕಂಠ ಅವರು ಗಣರಾಜ್ಯೋತ್ಸವದ ಪರೇಡ್ ಅನ್ನು ಹತ್ತಿರದಿಂದ ವೀಕ್ಷಿಸುವ ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಮಣಿಕಂಠ ತಮ್ಮ ಕುಟುಂಬ ಹಿಂದಿನಿಂದಲೂ ನಡೆಸಿಕೊಂಡು ಬಂದ ಚಮ್ಮಾರ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅವರ ತಂದೆ ಮತ್ತು ಅಜ್ಜ ಇಬ್ಬರೂ ಚಮ್ಮಾರರಾಗಿದ್ದರು. ಅವರು ಹೆಮ್ಮೆಯಿಂದ ಈ ವೃತ್ತಿಯನ್ನು ಪರಂಪರೆಯಂತೆ ನಡೆಸಿಕೊಂಡು ಬಂದಿದ್ದರು. ಅಪ್ಪ ಶುರು ಮಾಡಿದ ಚಪ್ಪಲಿ ಹೊಲಿಯುವ ಅಂಗಡಿಯನ್ನು ಈಗ ಮಣಿಕಂಠ ನಡೆಸಿಕೊಂಡು ಹೋಗುತ್ತಿದ್ದಾರೆ. ಇದರಿಂದಲೇ ಮಣಿಕಂಠ ತಮ್ಮ ಇಬ್ಬರು ಮಕ್ಕಳಿಗೆ ಕಾಲೇಜು ಶಿಕ್ಷಣದವರೆಗೂ ಓದಿಸಿದ್ದಾರೆ ಹಾಗೂ ತಮ್ಮ ಕುಟುಂಬವನ್ನು ಸಾಕಿದ್ದಾರೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ಕೈಗಾರಿಕಾ ನಗರವಾದ ಭದ್ರಾವತಿಯವರಾದ ಮಣಿಕಂಠ ಈಗ ಕುಂದಾಪುರದಲ್ಲಿ ನೆಲೆಸಿದ್ದಾರೆ. ಮಣಿಕಂಠ ಅವರು ಕಳೆದ 25 ವರ್ಷಗಳಿಂದ ಚಪ್ಪಲಿ ಮತ್ತು ಛತ್ರಿ ರಿಪೇರಿ ಮಾಡುತ್ತಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ