ಪರಿಸರ ಉಳಿಸಿ, ಪ್ರಕೃತಿಗೇ ಕೊಡುಗೆ ನೀಡುವ ನಿಟ್ಟಿನಲ್ಲಿ ಈ ಪರಿಸರ ಉದ್ಯಮಿ ಸಾಧನೆ ಮಾದರಿಯಾಗಿದೆ! ಏನದು?
ಕುಂದಾಪುರ ತಾಲೂಕಿನ ಕಿದುರು ಎನ್ನುವ ಕಾಡಿನ ವಾತಾವರಣದ ಬಂಜರು ಪ್ರದೇಶದಲ್ಲಿ ಸದ್ಯ ಹಸಿರು ಕ್ರಾಂತಿ ಮಾಡುತ್ತಿದ್ದಾರೆ ಅಕ್ಕಿ ಮಿಲ್ ಗಳಿಗೆ ಹೆಸರಾದ ತೆಕ್ಕಟ್ಟೆಯ ಉದ್ಯಮಿ ರಮೇಶ್ ನಾಯಕ್.
ಉದ್ಯಮಿಗಳು ಎಂದರೆ ಪರಿಸರ ನಾಶಕ್ಕೆ ಕಾರಣರಾಗುವವರು ಎನ್ನುವ ಕಲ್ಪನೆ ನಮ್ಮಲಿದೆ. ಮರ ಗಿಡಗಳನ್ನು ನಾಶ ಮಾಡಿ ದೊಡ್ಡ ದೊಡ್ಡ ಉದ್ಯಮ ಕಟ್ಟಿ ಆ ಮೂಲಕ ಪರಿಸರವನ್ನು ಉದ್ಯಮಿಗಳೇ ನಾಶ ಮಾಡುತ್ತಾರೆ ಎನ್ನುವ ಮಾತಿಗೆ ಈ ಉದ್ಯಮಿ ಹೊರತಾಗಿದ್ದಾರೆ. ಕೃಷಿಯ ಬಗ್ಗೆ ಸಾಕಷ್ಟು ಆಸಕ್ತಿ ಇರುವ ಇವರು ಖಾಲಿ ಬಂಜರು ಭೂಮಿಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿ ಮಾಡಿದ್ದಾರೆ.
ಹೌದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಿದುರು ಎನ್ನುವ ಪ್ರದೇಶ ಬಹುತೇಕ ಕಾಡಿನ ವಾತಾವರಣವನ್ನೇ ಹೊಂದಿರುವಂತಹ ಬಂಜರು ಪ್ರದೇಶ ಎಂದರೆ ತಪ್ಪಾಗಲಾರದು. ಸದ್ಯ ಈ ಪ್ರದೇಶದಲ್ಲಿ ಅಕ್ಕಿ ಮಿಲ್ ಗಳಿಗೆ ಹೆಸರಾದ ತೆಕ್ಕಟ್ಟೆಯ ಉದ್ಯಮಿ ರಮೇಶ್ ನಾಯಕ್ ಸದ್ಯ ಹಸಿರು ಕ್ರಾಂತಿ ಮಾಡುತ್ತಿದ್ದಾರೆ.
ಉಪ ಉಷ್ಣವಲಯ ಹಾಗೂ ಕರಾವಳಿಯ ಹವಾಮಾನಕ್ಕೆ ಅನುಗುಣವಾಗಿ ಸೂಕ್ತವಾದ ವಿವಿಧ ಜಾತಿಯ ದೇಶಿಯ ಹಾಗೂ ವಿದೇಶಿಯ ಹಣ್ಣಿನ ತೋಟವನ್ನು ಅಭಿವೃದ್ದಿಪಡಿಸುವ ನಿಟ್ಟಿನಿಂದ ತೆಕ್ಕಟ್ಟೆಯ ರೈಸ್‌ಮಿಲ್ ಉದ್ಯಮಿ ರಮೇಶ್ ನಾಯಕ್ ಅವರು ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿ ಸುಮಾರು 13 ಎಕರೆ ಜಾಗದಲ್ಲಿ ಸುಮಾರು 11 ಜಾತಿಯ , ಸುಮಾರು 1634 ವಿವಿಧ ತಳಿಯ ಹಣ್ಣಿನ ಗಿಡಗಳನ್ನು ನೆಟ್ಟು ಉತ್ತಮ ಫಸಲು ಕಂಡುಕೊಳ್ಳುವ ಮೂಲಕ ಉದ್ಯಮಿಯೋರ್ವರು ನಿಸರ್ಗ ಪ್ರೇಮ ಮೆರೆದು ಮಾದರಿಯಾಗಿದ್ದಾರೆ.
ಕಳೆದ ಕೆಲವು ವರ್ಷಗಳ ಹಿಂದೆ ಇಂಗು ಗುಂಡಿಯಿಂದ ತೆಗೆಯಲಾದ ಮಣ್ಣನ್ನು ಬಳಸಿ ಸುಮಾರು 30 ಸಾವಿರ ಅನಾನಸ್ ಗಿಡಗಳನ್ನು ನಾಟಿ ಮಾಡಲಾಗಿದ್ದು, ಹಾಗೆಯೇ 2 ಗಿಡಗಳ ಮಧ್ಯದಲ್ಲಿ ಪಪ್ಪಾಯಿ ಗಿಡಗಳನ್ನು ಅಂತರದ ಬೆಳೆಯಾಗಿ ಬೆಳೆಯಲಾಗಿದೆ.
ಈ ನಡುವೆ ಡೆಂಗ್ ಸೂರ್ಯ, ಪ್ರಕಾಶ್ಚಂದ್ರ, ವಿಯೆಟ್ನಾಂ ಸೂಪರ್ ಅರ್ಲಿ, ಸಿಂಗಾಪುರ, ಅತ್ತಾವರ ಜಾತಿಯ ಸುಮಾರು 285 ಹಲಸು ಹಾಗೂ 500 ಡ್ರಾಗನ್ ಫ್ರೂಟ್ ಸೇರಿದಂತೆ ಡ್ಯುರಿಯನ್, ರೆಂಬೂಟನ್, ಮ್ಯಾಗೋಸ್ಟಿನ್, ಮಾವು, ಸಿಹಿ ಅಮಟೆ, ದಿವಿ ಹಲಸು, ಸೀಬೆ, ಮಿಂಟ್, ನಿಂಬು ಸೇರಿದಂತೆ ಒಟ್ಟು 1634 ವಿವಿಧ ಜಾತಿಯ ಹಣ್ಣಿನ ಗಿಡಗಳು ಇವರ ತೋಟದಲ್ಲಿ ಮೈದಳೆದು ನಿಂತಿದೆ. ಅದರಲ್ಲೂ ರ್ಯಾಮಬಂಟನ್ ಕೃಷಿ ಇವರು ವಿಶೇಷವಾಗಿ ಮಾಡಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಇವರು ಬೆಳೆದ ರಮ್ಭಟನ್ ಹಣ್ಣುಗಳಿಗೆ ಬೇಡಿಕೆ ಬರುತ್ತಿದೆ.
ಒಟ್ಟಾರೆಯಾಗಿ ಉದ್ಯಮಿಗಳು ಎಂದರೆ ಪರಿಸರ ನಾಶಕ್ಕೆ ಕಾರಣವಾಗುವವರು ಎನ್ನುವ ಕಲ್ಪನೆಗೆ ರಮೇಶ್ ನಾಯಕ್ ಅವರು ಹೊರತಾಗಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಇದೇ ಪ್ರದೇಶದಲ್ಲಿ ಇನ್ನಷ್ಟು ಹೊಸ ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಪ್ರಕೃತಿಗೇ ಕೊಡುಗೆ ನೀಡುವುದರ ಜೊತೆಗೆ ಕೃಷಿಯನ್ನ ಉದ್ಯಮವನ್ನಾಗಿಸುವ ಯೋಚನೆಯಲ್ಲಿದ್ದಾರೆ ರಮೇಶ್ ನಾಯಕ್.
ಕುಂದಾಪುರದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ