ಉಡುಪಿ: ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ (hijab) ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿದ ಸುಮಾರು ಒಂದು ತಿಂಗಳ ನಂತರ, ಹಿಜಾಬ್ ಧರಿಸಿದ ಮುಸ್ಲಿಂ ಹುಡುಗಿಯರನ್ನು ಗುರುವಾರ ಕುಂದಾಪುರದ ಪದವಿ ಪೂರ್ವ ಕಾಲೇಜು ಪ್ರವೇಶಿಸದಂತೆ ತಡೆಯಲಾಯಿತು. ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವುದನ್ನು ವಿರೋಧಿಸಿ ಬುಧವಾರ ಕರ್ನಾಟಕದ ಎರಡು ಕಾಲೇಜುಗಳ ವಿದ್ಯಾರ್ಥಿಗಳು ಕೇಸರಿ ಸ್ಕಾರ್ಫ್ ಧರಿಸಿ ಪ್ರತಿಭಟನೆ ನಡೆಸಿದ ನಂತರ ಈ ಘಟನೆ ನಡೆದಿದೆ. ಕಾಲೇಜಿನ ಗೇಟ್ ಬಳಿ ನಿಂತಿದ್ದ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಅವರು ವಿದ್ಯಾರ್ಥಿಗಳನ್ನು ತಡೆದು ತರಗತಿಯೊಳಗೆ ಹಿಜಾಬ್ ಧರಿಸುವ ಉದ್ದೇಶವಿದ್ದರೆ ತರಗತಿಗೆ ಹಾಜರಾಗಬೇಡಿ ಎಂದು ಹೇಳಿದ್ದಾರೆ. ಆದರೆ ಏಕಾಏಕಿ ಹಿಜಾಬ್ ಧರಿಸುವುದನ್ನು ಏಕೆ ನಿಷೇಧಿಸಲಾಗಿದೆ ಎಂಬುದನ್ನು ತಿಳಿಸಿ, ಹಿಂದೆ ಅಂತಹ ನಿಯಮಗಳು ಇರಲಿಲ್ಲ ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಬಹಳ ಸಮಯದಿಂದ ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದು, ಕಾಲೇಜಿನ ಒಳಗೆ ಹೋಗಲು ಅನುಮತಿ ನೀಡಬೇಕು ಎಂದು ವಿದ್ಯಾರ್ಥಿನಿಯರು ವಿನಂತಿ ಮಾಡಿದರೂ ಪ್ರವೇಶವನ್ನು ನಿರಾಕರಿಸಲಾಯಿತು ಎಂದು ಇಂಡಿಯಾ ಡಾಟ್ ಕಾಮ್ ವರದಿ ಮಾಡಿದೆ. ರಾಮಕೃಷ್ಣ ಅವರು, ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ಹಕ್ಕನ್ನು ನಿರಾಕರಿಸುತ್ತಿಲ್ಲ, ಆದರೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮತ್ತು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು. ಶೆಟ್ಟಿ ಅವರು ನಿಗದಿತ ಸಮವಸ್ತ್ರವನ್ನು ಹೊರತುಪಡಿಸಿ ಯಾವುದೇ ರೀತಿಯ ಹೆಚ್ಚುವರಿ ಉಡುಪುಗಳನ್ನು ಅನುಮತಿಸಬಾರದು ಎಂದು ನಿರ್ದೇಶಿಸಿದ್ದಾರೆ ಎಂದು ಪ್ರಾಂಶುಪಾಲರು ಹೇಳಿದರು.
#WATCH | Udupi Hijab row, Karnataka: Students wearing hijab being denied entry at Bhandarkars’ College Kundapura pic.twitter.com/JNOqk3LeIx
— ANI (@ANI) February 3, 2022
ಭದ್ರಾವತಿಯ ಎಂವಿ ಸರ್ಕಾರಿ ಕಾಲೇಜಿನಲ್ಲಿಯೂ ‘ಕೇಸರಿ ಸ್ಕಾರ್ಫ್’ ಪ್ರತಿಭಟನೆ
ಅದೇ ರೀತಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿರುವ ಎಂ ವಿಶ್ವೇಶ್ವರಯ್ಯ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಕೆಲವು ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹೊದ್ದುಕೊಂಡು ತರಗತಿಗೆ ಹಾಜರಾಗಿ ಮುಸ್ಲಿಂ ವಿದ್ಯಾರ್ಥಿಗಳ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸಿದರು. ಹಿಜಾಬ್ ಮತ್ತು ಬುರ್ಖಾವನ್ನು ಅನುಮತಿಸಿದರೆ, ತರಗತಿಯಲ್ಲಿ ಕೇಸರಿ ಶಾಲುಗಳನ್ನು ಸಹ ಅನುಮತಿಸಬೇಕು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
2010ರಿಂದಲೇ ಸಮವಸ್ತ್ರ ಸಂಹಿತೆ ಜಾರಿಯಲ್ಲಿದ್ದು, ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರವನ್ನು ಮಾತ್ರ ಧರಿಸಬೇಕು ಎಂದು ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ. ಮುಸ್ಲಿಂ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಬದಲಾಯಿಸಲು ಕಾಲೇಜು ಅಧಿಕಾರಿಗಳು ಪ್ರತ್ಯೇಕ ಕೊಠಡಿಯನ್ನು ಒದಗಿಸಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ.
ಹಿಜಾಬ್ ಧರಿಸಲು ಅನುಮತಿ ಕೋರಿದ ಮುಸ್ಲಿಂ ಯುವತಿ
ಹಿಜಾಬ್ ಧರಿಸಲು ಅನುಮತಿ ಕೋರಿ ಮುಸ್ಲಿಂ ಯುವತಿಯೊಬ್ಬರು ಮನವಿ ಸಲ್ಲಿಸಿದ್ದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ರಿಟ್ ವಿಚಾರಣೆ ನಡೆಯಲಿದೆ. ಪ್ರಕರಣದಲ್ಲಿ ಅಡ್ವೊಕೇಟ್ ಜನರಲ್ ಹಾಜರಾಗಬೇಕಿದೆ. ಕಾಲಾವಕಾಶ ನೀಡಲು ಸರ್ಕಾರಿ ವಕೀಲರ ಮನವಿ ಮಾಡಿದ್ದು ವಿಚಾರಣೆ ಫೆ.8ಕ್ಕೆ ಮುಂದೂಡಲಾಗಿದೆ.
ಇದನ್ನೂಓದಿ: ಹಿಜಾಬ್ಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ವಿದ್ಯಾರ್ಥಿ; ಹಿಜಾಬ್ ಧರಿಸುವುದು ಮೂಲಭೂತ ಹಕ್ಕೆಂದು ರಿಟ್ ಅರ್ಜಿ