ಉಡುಪಿ, ಅಕ್ಟೋಬರ್ 11: ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ಪರಶುರಾಮ ಥೀಮ್ ಪಾಕ್೯ (Parashuram Theme Park) ಕಾಮಗಾರಿ ತಡೆ ಕೋರಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ. ಗೋಮಾಳಕ್ಕೆಂದು ಮೀಸಲಿಟ್ಟ ಜಾಗದಲ್ಲಿ ಥೀಮ್ ಪಾರ್ಕ್ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಥೀಮ್ ಪಾರ್ಕ್ ನಿರ್ಮಾಣವೇ ಕಾನೂನುಬಾಹಿರವೆಂದು ಪ್ರಮೋದ್ ಮುತಾಲಿಕ್ ಪರ ವಕೀಲರು ವಾದ ಮಂಡಿಸಿದ್ದರು.
ಥೀಮ್ ಪಾರ್ಕ್ ನಿರ್ಮಾಣ ಅಂತಿಮ ಹಂತದಲ್ಲಿರುವಾಗ ಅರ್ಜಿ ಸಲ್ಲಿಸಲಾಗಿದೆ. ತಮ್ಮ ಗೋವುಗಳ ಸಾಕಣೆಗೆ ತೊಂದರೆಯಾಗಿದೆ ಎಂದು ಅರ್ಜಿದಾರರು ಹೇಳಿಲ್ಲ. ಊಹೆಗಳ ಮೇಲೆ ಪಿಐಎಲ್ ಸಲ್ಲಿಸಿದ್ದಾರೆಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸು ಮೂಲಕ ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: Parashuram Theme Park: ನಿಮ್ಮ ಮುಂದಿನ ಉಡುಪಿ ಪ್ರವಾಸದಲ್ಲಿ ಈ ಸ್ಥಳವನ್ನು ನೀವು ನೋಡಲೇಬೇಕು!
ಉಡುಪಿ ಮತ್ತು ಕಾರ್ಕಳದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಬೈಲೂರಿನ ಉಮಿಕಲ್ ಬೆಟ್ಟದ ಮೇಲೆ ಸುಮಾರು 15 ಕೋಟಿ ವೆಚ್ಚದಲ್ಲಿ 33 ಅಡಿಯ ಪರಶುರಾಮನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು. ಜನವರಿ 28, 2023 ರಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಯವರು ಉದ್ಘಾಟಿಸಿದ್ದರು. ಈ ಪರಶುರಾಮ ಪ್ರತಿಮೆ ರಾಜ್ಯ ಮತ್ತು ರಾಷ್ಟ್ರದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸಿದೆ. ಥೀಮ್ ಪಾರ್ಕ್‌ನಲ್ಲಿ ಭಜನಾ ಮಂದಿರ, ಮ್ಯೂಸಿಯಂ, ತೆರೆದ ಆಂಫಿಥಿಯೇಟರ್, ಪರಶುರಾಮನ ಜೀವನವನ್ನು ಚಿತ್ರಿಸುವ ರೇಖಾಚಿತ್ರಗಳು, ಆಡಿಯೊ ವಿಶುವಲ್ ಗ್ಯಾಲರಿ ಮತ್ತು ರೆಸ್ಟೋರೆಂಟ್ ಕೂಡ ಇದೆ.
ಇದನ್ನೂ ಓದಿ: ನಮ್ಮ ಸಂಸ್ಕೃತಿ, ದೇಶಕ್ಕೆ ಬೆಲೆ ಕೊಡುವ ಸರಕಾರವನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ: ಪೇಜಾವರ ಶ್ರೀ
1.58 ಎಕರೆ ಗೋಮಾಳ ಜಮೀನು ಥೀಮ್ ಪಾರ್ಕ್ಗೆ ಮಂಜೂರು ಮಾಡಲು ಅವಕಾಶ ಇಲ್ಲ ಎನ್ನಲಾಗುತ್ತಿದೆ. ಹಾಗಾದರೆ ಸರಕಾರದ ಅನುಮತಿ ಇಲ್ಲದೆಯೇ ಗೋಮಾಳದ ಜಾಗದಲ್ಲಿ ವಿವಿಧ ಇಲಾಖೆಯ ಅನುದಾನವನ್ನು ಬಳಸಿ ಒಟ್ಟು 15 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಿಸಲು ಸರಕಾರ ಹೇಗೆ ಅವಕಾಶ ನೀಡಿದೆ ಎನ್ನುವ ಪ್ರಶ್ನೆ ಉಂಟಾಗಿದೆ. ಇಷ್ಟು ದೊಡ್ಡ ಅವ್ಯವಹಾರದ ಬಗ್ಗೆ ತನಿಖೆಯಾಗಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಈ ಹಿಂದೆ ಕಾಂಗ್ರೆಸ್ ಆಗ್ರಹಿಸಿತ್ತು.
ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.