ಉಡುಪಿ: ಉಡುಪಿ (Udupi) ಜಿಲ್ಲೆಯ ಕಾರ್ಕಳ ತಾಲೂಕಿನ ಕೈರ್ಲ, ನಂದಳಿಕೆ ಎಂಬಲ್ಲಿ 14 ಅಥವಾ 15ನೇ ಶತಮಾನಕ್ಕೆ ಸೇರಿದ ನಾಗಭೈರವನ (Nagabhairava sculpture) ಅಪರೂಪದ ಶಿಲ್ಪವೊಂದು ಪತ್ತೆಯಾಗಿದೆ. ಕಾರ್ಕಳ (Karkala) ತಾಲೂಕಿನ ಕೈಯಾರ್ಲದ ಮಹಾಕಾಳಿ ದೇವಾಲಯದ ಬಳಿ ಇರುವ ನಾಗಬನದಲ್ಲಿ ಪುರಾತನ ನಾಗಭೈರವ ಶಿಲ್ಪ ಪತ್ತೆಯಾಗಿದೆ. ಶಿರ್ವದಲ್ಲಿರುವ ಎಂಎಸ್‌ಆರ್‌ಎಸ್ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಟಿ. ಮುರುಗೇಶಿ ನೇತೃತ್ವದ ತಂಡ ಪುರಾತತ್ತ್ವ ಶಾಸ್ತ್ರದ ಪರಿಶೋಧನೆಯಲ್ಲಿದ್ದ ವೇಳೆ ಈ ಶಿಲ್ಪ ಪತ್ತೆಯಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೈರ್ಲ, ನಂದಳಿಕೆ ಎಂಬಲ್ಲಿ 14 ಅಥವಾ 15ನೇ ಶತಮಾನಕ್ಕೆ ಸೇರಿದ ‘ನಾಗಭೈರವನ’ ಶಿಲ್ಪವೊಂದು ಪತ್ತೆಯಾಗಿದೆ. ಆಯತಾಕಾರದ ಬಳಪದ ಶಿಲೆಯ ಕೆಳಭಾಗದಲ್ಲಿ ಕಾಲುಮಂಡಲದ 4 ಪತ್ರ ಗಂಟುಗಳನ್ನು ಒಳಗೊಂಡ 1 ನಾಗರಾಜನ ಶಿಲ್ಪವನ್ನು ರಚಿಸಲಾಗಿದೆ. ನಾಗನ ಹೆಡೆಯ ಮೇಲೆ ಚತುರ್ಭಾಹು ನಾಗಭೈರವ ನಿಂತಂತೆ ಶಿಲ್ಪವನ್ನು ಕೆತ್ತಲಾಗಿದೆ. ಹಾಗೇ, ಹಿಂದಿನ 2 ಕೈಗಳಲ್ಲೂ 2 ಹೆಡೆ ಬಿಚ್ಚಿದ ನಾಗಗಳನ್ನು ಹಿಡಿದಂತೆ ಇದನ್ನು ರಚಿಸಲಾಗಿದೆ. ಮುಂದಿನ ಕೈಗಳಲ್ಲಿ ನಾಗ ದಂಡ ಮತ್ತು ರುಂಡವಿದೆ.
ಇದನ್ನೂ ಓದಿ: ಉಡುಪಿ ಕೃಷ್ಣಮಠ ಭೇಟಿಗೂ ಮುನ್ನ ಮಾಂಸಾಹಾರ ಸೇವಿಸಿದ್ರಾ ಗೋವಾ ಸಿಎಂ?
ಈ ನಾಗಭೈರವನ ತಲೆಯ ಮೇಲೆ 5 ಹೆಡೆಯ ಸರ್ಪ ಛತ್ರಿ ತೋರಿಸಲಾಗಿದೆ. ಇದು ಶುದ್ಧ ಜನಪದ ಶೈಲಿಯಲ್ಲಿರುವ ಸುಮಾರು 14-15ನೇ ಶತಮಾನದ ಜೈನ ನಾಗಶಿಲ್ಪವಾಗಿದೆ. ಇದು ಉಡುಪಿ ಜಿಲ್ಲೆಯ ನಂದಿಕೂರು ಬಳಿಯ ನಿನ್ನಿಕಲ್‌ನಲ್ಲಿ ಕಂಡುಬರುವ ಭೈರವ ಶಿಲ್ಪದೊಂದಿಗೆ ನಿಕಟ ಹೋಲಿಕೆಯನ್ನು ಹೊಂದಿದೆ. ಇದು ಕುತ್ಯಾರ್ ಬಲ್ಲಾಳ ರಾಜರ ರಾಜಧಾನಿಯಾಗಿತ್ತು ಮತ್ತು ಶಿಲ್ಪವು 14 ಅಥವಾ 15 ನೇ ಶತಮಾನದ್ದು ಎನ್ನಲಾಗಿದೆ. ಭೈರವ ಆರಾಧನೆಯು ಜೈನ ದೇವತೆ ಪದ್ಮಾವತಿಯೊಂದಿಗೆ ನಿಕಟ ಸಂಬಂಧ ಹೊಂದಿತ್ತು. ಅವಳು ಸರ್ಪ ದೇವತೆಯೂ ಆಗಿದ್ದಳು ಎನ್ನಲಾಗಿದೆ.