ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಚುರುಕುಗೊಂಡ ತನಿಖೆ, ಗೌಪ್ಯವಾಗಿ ರಮೇಶ್ ಜಾರಕಿಹೊಳಿ ಭೇಟಿಯಾದ ತುಂಡು ಗುತ್ತಿಗೆದಾರರು

ಸಂತೋಷ್ ಪಾಟೀಲ್ ಬಟ್ಟೆಗಳನ್ನು ತಂದಿದ್ದ ಬ್ಯಾಗನ್ನು ಪೊಲೀಸರು ಬಿಟ್ಟುಹೋಗಿದ್ದಾರೆ. ಬ್ಯಾಗ್ನಲ್ಲಿ ಮಹತ್ವದ ದಾಖಲೆಗಳು ಸಿಕ್ಕಿವೆ. 15ಕ್ಕೂ ಅಧಿಕ ಬ್ಯಾಂಕ್ ಗಳ ಚೆಕ್ ಪತ್ತೆಯಾಗಿದೆ. ವಿವಿಧ ರಸ್ತೆ ಕಾಮಗಾರಿಗಳ ದಾಖಲೆಗಳು ಪತ್ತೆಯಾಗಿವೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಚುರುಕುಗೊಂಡ ತನಿಖೆ, ಗೌಪ್ಯವಾಗಿ ರಮೇಶ್ ಜಾರಕಿಹೊಳಿ ಭೇಟಿಯಾದ ತುಂಡು ಗುತ್ತಿಗೆದಾರರು
ರಮೇಶ್ ಜಾರಕಿಹೊಳಿ
Follow us
TV9 Web
| Updated By: ಆಯೇಷಾ ಬಾನು

Updated on: Apr 18, 2022 | 2:59 PM

ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ(Santosh Patil Suicide) ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸರ ತನಿಖೆ ತೀವ್ರಗೊಂಡಿದೆ. ಸಂತೋಷ್ ಪಾಟೀಲ್ರನ್ನು ಉಡುಪಿಯಲ್ಲಿ ಯಾರೆಲ್ಲಾ ಭೇಟಿಯಾಗಿದ್ದರು? ಸಂತೋಷ್ ಪಾಟೀಲ್ ಭೇಟಿಯಾಗಬೇಕಿದ್ದ ರಾಜೇಶ್ ಯಾರು? ಎಂದು ತನಿಖಾಧಿಕಾರಿ ಪ್ರಮೋದ್ ನೇತೃತ್ವದಲ್ಲಿ ಹೋಟೆಲ್ನಲ್ಲಿ ಎರಡನೇ ಸುತ್ತಿನ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ. ಈಗಾಗಲೇ ವಶದಲ್ಲಿರುವ ಸಿಸಿಟಿವಿ ಫುಟೇಜ್ಗಳನ್ನು ಪರಿಶೀಲಿಸಲಾಗಿದೆ. ಸಂತೋಷ್ ಪಾಟೀಲ್ ಕೋಣೆ ಸಂಖ್ಯೆ 207 ಸೇರಿದ ಬಳಿಕ ಯಾರೂ ಭೇಟಿಯಾಗಿಲ್ಲ. ಮೂರನೇ ವ್ಯಕ್ತಿ ಸಂತೋಷ್ ಪಾಟೀಲ್ ಕೋಣೆ ಪ್ರವೇಶವಾದ ಬಗ್ಗೆ ಯಾವುದೇ ದಾಖಲೆ ಇಲ್ಲ. ಸದ್ಯ ಸಂತೋಷ್ ಪಾಟೀಲ್ ವಾಸ್ತವ್ಯ ಇದ್ದ ಲಾಡ್ಜ್ನಲ್ಲೇ ಒಂದು ಬ್ಯಾಗ್ ಸಿಕ್ಕಿದ್ದು ಬ್ಯಾಗ್ನಲ್ಲಿದ್ದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಸಂತೋಷ್ ಪಾಟೀಲ್ ಬಟ್ಟೆಗಳನ್ನು ತಂದಿದ್ದ ಬ್ಯಾಗನ್ನು ಪೊಲೀಸರು ಬಿಟ್ಟುಹೋಗಿದ್ದಾರೆ. ಬ್ಯಾಗ್ನಲ್ಲಿ ಮಹತ್ವದ ದಾಖಲೆಗಳು ಸಿಕ್ಕಿವೆ. 15ಕ್ಕೂ ಅಧಿಕ ಬ್ಯಾಂಕ್ ಗಳ ಚೆಕ್ ಪತ್ತೆಯಾಗಿದೆ. ವಿವಿಧ ರಸ್ತೆ ಕಾಮಗಾರಿಗಳ ದಾಖಲೆಗಳು ಪತ್ತೆಯಾಗಿವೆ. ಬ್ಯಾಗ್ ನಲ್ಲಿ ಹಲವಾರು ದೇವಸ್ಥಾನಗಳ ಪ್ರಸಾದ ಪತ್ತೆಯಾಗಿದೆ. ಬ್ಯಾಗಿನಲ್ಲಿದ್ದ ಪ್ರಸಾದ ನೋಡಿದರೆ ಸಂತೋಷ್ ಮಹಾನ್ ದೈವಭಕ್ತ ಅನಿಸುವಂತಿದೆ. ಬ್ಯಾಗಿನಲ್ಲಿದ್ದ ಎಲ್ಲಾ ದಾಖಲೆಗಳನ್ನು ಎಫ್ಎಸ್ಎಲ್ ತಂಡ ತೆಗೆದುಕೊಂಡು ಹೋಗಿದೆ. ಸಂತೋಷ್ ಬಳಸುತ್ತಿದ್ದ ಮೊಬೈಲ್ ಎಫ್ಎಸ್ಎಲ್ ತಂಡದ ವಶದಲ್ಲಿದೆ.

ರಮೇಶ್ ಜಾರಕಿಹೊಳಿ ಭೇಟಿಯಾದ ತುಂಡು ಗುತ್ತಿಗೆದಾರರು ಮೃತ ಸಂತೋಷ್ ಬಳಿ ತುಂಡು ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರು ಬೆಳಗಾವಿ ಜಿಲ್ಲೆ ಗೋಕಾಕ್ ನಿವಾಸದಲ್ಲಿ ರಮೇಶ್ ಜಾರಕಿಹೊಳಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ರಮೇಶ್ ಭೇಟಿ ಬಳಿಕ ಗುತ್ತಿಗೆದಾರ ರಾಜು ಜಾಧವ್ ಮಾತನಾಡಿದ್ದು, ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮತ್ತು ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ನಮಗೆ ಕೆಲಸ ನೀಡಿದ್ರು. ಅವರು ಹೇಳಿದಂತೆ ನಾವು ತುಂಡು ಗುತ್ತಿಗೆ ಕೆಲಸ ಮಾಡಿದ್ದೇವೆ. ವರ್ಕ್ ಆರ್ಡರ್ ತಮ್ಮ ಬಳಿ ಇರುವುದಾಗಿ ಅವರು ತಿಳಿಸಿದ್ದರು. ತಲೆ ಕೆಡಿಸಿಕೊಳ್ಳದೆ ಕೆಲಸ ಮಾಡುವಂತೆ ನಮಗೆ ಹೇಳಿದ್ದರು. ನಾವ್ಯಾರೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರನ್ನ ಭೇಟಿಯಾಗಿಲ್ಲ. ನಾನೊಬ್ಬನೇ 27 ಲಕ್ಷ ರೂಪಾಯಿ ಕಾಮಗಾರಿ ಮಾಡಿಸಿದ್ದೇನೆ. ನನ್ನಂತೆ 12 ಜನ ತಮ್ಮ ಸ್ವಂತ ಹಣ ಹಾಕಿ ಕಾಮಗಾರಿ ಮಾಡಿಸಿದ್ದಾರೆ. ನಾವು ಹಾಕಿದ್ದ ಹಣವನ್ನು ಸಂತೋಷ್ ಹಾಕಿದ್ದಾಗಿ ಹೇಳಿರಬಹುದು ಎಂದು ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ರಾಜು ಜಾಧವ್ ತಿಳಿಸಿದ್ದಾರೆ.

ಹಿಂಡಲಗಾ ಗ್ರಾ.ಪಂಗೆ ಭೇಟಿ ನೀಡಿದ ಪೊಲೀಸರು ಹಿಂಡಲಗಾ ಗ್ರಾಮದಲ್ಲಿ ಮಾಡಿದ್ದ ಕಾಮಗಾರಿ ಬಿಲ್ ಬಾರದಿರುವುದೇ ಸಂತೋಷ್ ಆತ್ಮಹತ್ಯೆಗೆ ಕಾರಣ ಆರೋಪ ಹಿನ್ನೆಲೆ ಉಡುಪಿ ಪೊಲೀಸರು ಹಿಂಡಲಗಾ ಗ್ರಾ.ಪಂ ವಿಸಿಟ್ ಮಾಡಿದ್ದಾರೆ. ಗುತ್ತಿಗೆದಾರ ಸಂತೋಷ ಪಾಟೀಲ್ ಹಿಂಡಲಗಾ ಗ್ರಾಮ ಪಂಚಾಯಿತಿಯಲ್ಲಿ ಕಾಮಗಾರಿ ಮಾಡಿದ್ದರು. ಸಂತೋಷ್ ನಾಲ್ಕು ಕೋಟಿ ವೆಚ್ಚದಲ್ಲಿ 2021 ಫೆಬ್ರವರಿ ಕಾಮಗಾರಿ ಮಾಡಿದ್ದರು. ವರ್ಕ್ ಆರ್ಡರ್ ಇಲ್ಲದೇ ಕಾಮಗಾರಿ ಮಾಡಿದ್ದರು. ಹಣ ಮಂಜೂರು ಮಾಡುವಂತೆ ಮಾಜಿ ಸಚಿವ ಈಶ್ವರಪ್ಪಗೆ ಹಲವು ಬಾರಿ ಮನವಿ ಮಾಡಿದ್ದರು. ಇದಾದ ಬಳಿಕ ಬಿಲ್ ಪಾಸ್ ಮಾಡಿಸಿಕೊಡುವಂತೆ ಪ್ರಧಾನಿ ಮೋದಿಯವರಿಗೂ ಪತ್ರ ಬರೆದಿದ್ದರು. ಅದಾಗ್ಯೂ ಬಿಲ್ ಬಾರದಿದ್ದಾಗ ಈಶ್ವರಪ್ಪ ಹೆಸರು ಉಲ್ಲೇಖಿಸಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಪ್ರಿಲ್ 11ರಂದು ಉಡುಪಿ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸದ್ಯ ಹಿಂಡಲಗಾ ಗ್ರಾಮ ಪಂಚಾಯಿತಿ ಪಿಡಿಒ ತೀವ್ರ ವಿಚಾರಣೆ ನಡೆಸಲಾಗಿದೆ. ಗ್ರಾಮದಲ್ಲಿ ಸಂತೋಷ್ ಯಾವಾಗ ಕಾಮಾಗಾರಿ ಮಾಡಿಸಿದ್ದ? ಎಷ್ಟು ವೆಚ್ಚದಲ್ಲಿ ಕಾಮಗಾರಿ ಮಾಡಿಸಿದ್ದರೆಂದು ಪಿಡಿಒಗೆ ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಯಾರು ಹೇಳಿದರೆಂದು ₹4 ಕೋಟಿ ಕಾಮಗಾರಿ ಮಾಡಿಸಿದ್ದಾರೆ? ಪಿಡಿಒ ವಸಂತಕುಮಾರಿಗೆ ಹಲವು ಪ್ರಶ್ನೆಗಳನ್ನು ಕೇಳಿ ವಿಚಾರಣೆ ನಡೆಸಲಾಗಿದೆ. ಪೊಲೀಸರ ಪ್ರಶ್ನೆಗಳಿಗೆ ಗ್ರಾ.ಪಂ. ಪಿಡಿಒ ವಂಸತಕುಮಾರಿ ಉತ್ತರಿಸಿದ್ದು ಗ್ರಾ.ಪಂ.ಅಧ್ಯಕ್ಷ ನಾಗೇಶ್ ಮನ್ನೊಳ್ಕರ್, ಸದಸ್ಯರಿಂದ ಕಾಮಗಾರಿ ಮಾಡಿಸಿದ ಸಂದರ್ಭದಲ್ಲಿ ನಾನು ಇಲ್ಲಿ ಇರಲಿಲ್ಲ. ನಾನು 6 ತಿಂಗಳಿಂದ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಗ್ರಾಮದಲ್ಲಿ ಕಾಮಗಾರಿ ನಡೆಸಿರುವುದು ಮಾತ್ರ ನಿಜ. ಆದರೆ ಯಾರು ಹೇಳಿದ್ದಕ್ಕೆ ಕಾಮಗಾರಿ ಮಾಡಿದ್ದಾರೆಂದು ಗೊತ್ತಿಲ್ಲ ಎಂದು ಪೊಲೀಸರ ಪ್ರಶ್ನೆಗೆ ಗ್ರಾ.ಪಂ. ಪಿಡಿಒ ವಸಂತಕುಮಾರಿ‌ ಉತ್ತರಿಸಿದ್ದಾರೆ.

ಇದನ್ನೂ ಓದಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ; ಶಾಸಕ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ಮುಂದೂಡಿಕೆ