
ಉಡುಪಿ, ಜೂನ್ 28: ಶ್ರೀ ಕೃಷ್ಣ ಜನ್ಮಾಷ್ಟಮಿ (Krishna Janmashtami) ನಿಮಿತ್ತ ಉಡುಪಿಯಲ್ಲಿ (Udupi) ನಡೆಯುವ 48 ದಿನಗಳ ಮಂಡಲ ಉತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಪುತ್ತಿಗೆ ಮಠದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಆಹ್ವಾನ ನೀಡಲಾಗಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಆಗಸ್ಟ್ 1ರಿಂದ ಸೆಪ್ಟೆಂಬರ್ 15ರವರೆಗೆ 48 ದಿನಗಳ ಕಾಲ ಮಂಡಲ ಉತ್ಸವ ಕಾರ್ಯಕ್ರಮ ನಡೆಯಲಿದೆ. ಈ ಮಂಡಲ ಉತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳ ಕಾರ್ಯದರ್ಶಿ ರತೀಶ್ ತಂತ್ರಿ ಮತ್ತು ಬೆಂಗಳೂರು ಶಾಖಾ ಮಠದ ಎ ಬಿ ಕುಂಜಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶ್ರೀ ಕೃಷ್ಣ ಮುಖ್ಯಪ್ರಾಣರ ಪ್ರಸಾದ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.
ಇನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಡುಪಿ ಶ್ರೀ ಕೃಷ್ಣ ಮಠದಿಂದ ಹಲವು ದಶಕಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ಹಿಂದೆಯೂ ಹಲವು ಬಾರಿ ಕೃಷ್ಣಮಠದಿಂದ ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನ ನೀಡಲಾಗಿತ್ತು. ಮುಖ್ಯಮಂತ್ರಿಗಳು ಉಡುಪಿಗೆ ಭೇಟಿ ನೀಡಿದಾಗಲೂ, ಕೃಷ್ಣ ಮಠದೊಂದಿಗೆ ಅಂತರ ಕಾಯ್ದುಕೊಂಡಿದ್ದರು. ಆದರೆ, ಈ ಬಾರಿಯ ಕೃಷ್ಣ ಜನ್ಮಾಷ್ಟಮಿಗೆ ಸಿದ್ದರಾಮಯ್ಯ ತೆರಳುತ್ತಾರಾ? ಕಾದು ನೋಡಬೇಕಿದೆ.
ಇದನ್ನೂ ಓದಿ: ಮೈಸೂರು ದಸರಾ: ಜನದಟ್ಟಣೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ, ಅಧಿಕಾರಿಗಳಿಗೆ ಸಿಎಂ ಸೂಚನೆ
ದಶಕಗಳ ಹಿಂದೆ ಶ್ರೀಕೃಷ್ಣ ಮಠದಲ್ಲಿ ಕನಕ ಗೋಪುರ ವಿವಾದಕ್ಕೆ ಕಾರಣವಾಗಿತ್ತ್ತು. ಮಠದ ವಿರುದ್ಧದ ಪ್ರತಿಭಟನೆಯ ನೇತೃತ್ವವನ್ನು ಸಿದ್ದರಾಮಯ್ಯ ಅವರೇ ವಹಿಸಿಕೊಂಡಿದ್ದರು. ಅಂದಿನಿಂದ ಇಲ್ಲಿಯವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಶಕಗಳಿಂದಲೂ ಕೃಷ್ಣ ಮಠದೊಂದಿಗೆ ಯಾವುದೇ ಭಾಂದವ್ಯ ಹೊಂದಿಲ್ಲ ಎಂದು ತಿಳಿದುಬಂದಿದೆ.
ದಶಕಗಳ ಹಿಂದೆ ಉಡುಪಿ ಶ್ರೀ ಕೃಷ್ಣ ದೇಗುಲ ಹೊರಭಾಗದಲ್ಲಿ ಪುರಸಭೆ ಜಾಗದಲ್ಲಿದ್ದ ಹಳೆಯ ಕನಕ ಗೋಪುರ ಶಿಥಿಲಗೊಂಡಿತ್ತು. ಹೀಗಾಗಿ, ಕನಕ ಗೋಪುರವನ್ನು ತೆರವುಗೊಳಿಸಲಾಗಿತ್ತು. ಈ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಉಡಪಿ ಶ್ರೀ ಕೃಷ್ಣ ಮಠದ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಈ ಪ್ರತಿಭಟನೆಯ ನೇತೃತ್ವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಹಿಸಿಕೊಂಡಿದ್ದರು.
ಬಳಿಕ, ವಿಶ್ವೇಶತೀರ್ಥ ಶ್ರೀಪಾದರು ಪ್ರತಿಭಟನಾಕಾರರನ್ನು ಕರೆಸಿ ಮಾತನಾಡಿ, ಕನಕ ಪ್ರತಿಮೆ ಸಹಿತ ಗೋಪುರ ನಿರ್ಮಾಣ ಮಾಡಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಣೆಯಾಗುವಂತೆ ಮಾಡಿದರು. ಅಂದಿನಿಂದ ಇಲ್ಲಿಯವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣ ಮಠದೊಂದಿಗೆ ಯಾವುದೇ ಭಾಂದವ್ಯ ಹೊಂದಿಲ್ಲ.
Published On - 3:24 pm, Sat, 28 June 25